ಸಾಲಮನ್ನಾ ಲಾಲಿಪಾಪ್, ಕಾಂಗ್ರೆಸ್ ಲಾಲಿಪಾಪ್ ಕಂಪನಿ: ಪ್ರಧಾನಿ ಮೋದಿ

ಗಾಝಿಪುರ, ಡಿ. 30: ಐದು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಹೀನಾಯ ಸೋಲು ಅನುಭವಿಸಿದ ಬಿಜೆಪಿ, ರೈತರನ್ನು ಓಲೈಸಲು ದೇಶವ್ಯಾಪಿ ಸಾಲ ಮನ್ನಾ ನಿರ್ಧಾರವನ್ನು ಲೋಕಸಭಾ ಚುನಾವಣೆಗೆ ಮುನ್ನ ಪ್ರಕಟಿಸುತ್ತದೆ ಎಂಬ ವದಂತಿಗಳ ನಡುವೆಯೇ ಸಾಲ ಮನ್ನಾ "ಲಾಲಿಪಾಪ್" ಗಿಂತ ಹೆಚ್ಚೇನೂ ಅಲ್ಲ; ಕಾಂಗ್ರೆಸ್ ಪಕ್ಷ ಲಾಲಿಪಾಪ್ ಕಂಪನಿ ಎಂದು ಪ್ರಧಾನಿ ನರೇಂದ್ರ ಮೋದಿ ಅಣಕಿಸಿದ್ದಾರೆ.
2009ರ ಚುನಾವಣೆಗೆ ಮುನ್ನ ಲಾಲಿಪಾಪ್ ನೀಡಿದವರು ಸಾಲ ಮನ್ನಾ ಘೋಷಿಸಿದರು. 2009ರ ಸಾಲ ಮನ್ನಾದಿಂದ ಯಾವುದಾದರೂ ಪ್ರಯೋಜನವಾಗಿದೆಯೇ ? ಚುನಾವಣೆ ಬಳಿಕ ನಿಮ್ಮನ್ನು ಮರೆಯಲಿಲ್ಲವೇ ? ಇಂಥ ಜನರನ್ನು ನೀವು ನಂಬುತ್ತೀರಾ ? ಲಾಲಿಪಪ್ ಕಂಪನಿ ಮೇಲೆ ನಿಮಗೆ ವಿಶ್ವಾಸವಿದೆಯೇ ? ಎಂದು ಬೃಹತ್ ಸಾರ್ವಜನಿಕ ಸಭೆಯಲ್ಲಿ ಮೋದಿ ಪ್ರಶ್ನಿಸಿದರು.
ಕೇಂದ್ರ ಸರ್ಕಾರ ದೇಶವ್ಯಾಪಿ ಸಾಲ ಮನ್ನಾ ಮಾಡುವವರೆಗೂ ಮೋದಿಯನ್ನು ನಿದ್ರಿಸಲು ಬಿಡುವುದಿಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಇತ್ತೀಚೆಗೆ ನೀಡಿದ ಹೇಳಿಕೆ ಹಿನ್ನೆಲೆಯಲ್ಲಿ ಪ್ರಧಾನಿ ಪ್ರತಿಕ್ರಿಯೆ ವಿಶೇಷ ಮಹತ್ವ ಪಡೆದಿದೆ.
ಸಾಲ ಮನ್ನಾ ಭರವಸೆ ಬಹುಶಃ ಛತ್ತೀಸ್‌ಗಢ ಮತ್ತು ಮಧ್ಯಪ್ರದೇಶದಲ್ಲಿ ಕಾಂಗ್ರೆಸ್‌ಗೆ ಅಧಿಕಾರ ಪಡೆಯಲು ನೆರವಾಗಿದ್ದು, ರಾಜಸ್ಥಾನದಲ್ಲಿ ಕೂಡಾ ರೈತರ ಹತಾಶೆ ಬಿಜೆಪಿಗೆ ಮಾರಕವಾಗಿತ್ತು.
ಸಾಲ ಮನ್ನಾ ಬಗೆಗಿನ ಚರ್ಚೆಗೆ ಪ್ರತಿಕ್ರಿಸಿದ ಮೋದಿ, "ಕರ್ನಾಟಕದಲ್ಲಿ ಸಾಲ ಮನ್ನಾ ಆಶ್ವಾಸನೆ ಮರೀಚಿಕೆಯಾಗಿದೆ. ಲಕ್ಷಾಂತರ ಮಂದಿಗೆ ಸಾಲ ಮನ್ನಾ ಭರವಸೆ ನೀಡಿ, ಮತ ದೋಚಲಾಯಿತು. ಆದರೆ ಕೇವಲ 800 ಮಂದಿಗೆ ಸಾಲ ಮನ್ನಾ ಆಗಿದೆ. ಅಲ್ಪಾವಧಿಯ ರಾಜಕೀಯ ಲಾಭಕ್ಕಾಗಿ ಆಶ್ವಾಸನೆ ನೀಡಲಾಗುತ್ತಿದೆ. ಈ ನಿರ್ಧಾರಗಳು ಸಮಸ್ಯೆ ಬಗೆಹರಿಸುವುದಿಲ್ಲ" ಎಂದು ಸ್ಪಷ್ಟಪಡಿಸಿದರು.







