ಜ. 3ರಿಂದ ಭಟ್ಕಳ ಅಂಜುಮನ್ ವಿದ್ಯಾ ಸಂಸ್ಥೆಯ ಶತಮಾನೋತ್ಸವ ಸಂಭ್ರಮಕ್ಕೆ ಚಾಲನೆ

ಭಟ್ಕಳ, ಡಿ. 30: ಉತ್ತರ ಕನ್ನಡ ಜಿಲ್ಲೆಯ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾಗಿರುವ ಅಂಜುಮನ್ ಹಾಮಿಯೇ ಮುಸ್ಲಿಮೀನ್ 2019ನೇ ವರ್ಷವನ್ನು ಶತಮಾನೋತ್ಸ ವರ್ಷವನ್ನಾಗಿ ಆಚರಿಸುತ್ತಿದ್ದು ವರ್ಷ ಪೂರ್ತಿ ವಿವಿಧ ಶೈಕ್ಷಣಿಕ ಚಟುವಟಿಕೆಗಳನ್ನು ನಡೆಸುವುದರ ಮೂಲಕ ಶತಮಾನೋತ್ಸವದ ವರ್ಷವನ್ನು ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು ಸಂಸ್ಥೆಯ ಅಧ್ಯಕ್ಷ ಅಬ್ದುಲ್ ರಹೀಂ ಜುಕಾಕೋ ಹೇಳಿದರು.
ಅವರು ಅಂಜುಮನಾಬಾದ್ ನಲ್ಲಿರು ಸಂಸ್ಥೆಯ ನೂತನ ಕಚೇರಿಯಲ್ಲಿ ಪತ್ರಿಕಾಗೋಷ್ಟಿಯಲ್ಲಿ ಈ ವಿಷಯ ತಿಳಿಸಿದರು.
ಜ. 3ರಂದು ಅಂಜುಮನ್ ಸಂಸ್ಥೆಯ ಮೈದಾನದಲ್ಲಿ (ಅಂಜುಮನಾಬಾದ್) ಮಧ್ಯಾಹ್ನ 2 ಗಂಟೆಗೆ ಬೃಹತ್ ಮೆರವಣೆಯ ಮೂಲಕ ಶತಮಾನೋತ್ಸವದ ಸಂಭ್ರಮಕ್ಕೆ ಚಾಲನೆ ನೀಡುತ್ತಿದ್ದು, ಜ. 5 ರಂದು ಬೆಳಗ್ಗೆ 9ಗಂಟೆ ಯಿಂದ 12.30 ವರೆಗೆ ಉದ್ಘಾಟನಾ ಸಮಾರಂಭ ನೆರವೇರುವುದು. ಮುಖ್ಯಮಂತ್ರಿ ಎಚ್.ಡಿ.ಕುಮಾರ್ ಸ್ವಾಮಿ ಶತಮಾನೋತ್ಸವ ವರ್ಷಾಚರಣೆ ಸಮಾರಂಭವನ್ನು ಉದ್ಘಾಟಿಸಲಿದ್ದು, ಮುಖ್ಯ ಅತಿಥಿಯಾಗಿ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ, ಸಚಿವರಾದ ಯು.ಟಿ.ಖಾದರ್, ಝಮೀರ್ ಆಹ್ಮದ್ ಖಾನ್, ಶಾಸಕ ಸುನಿಲ್ ನಾಯ್ಕ, ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ಮಾಜಿ ಶಾಸಕ ಮಾಂಕಾಳ್ ವೈದ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.
ಸಮಾರಂಭವು ಜಾಮಿಯಾ ಇಸ್ಲಾಮಿಯಾ ಇಶಾತುಲ್ ಉಲೂಮ್ ನ ಅಧ್ಯಕ್ಷ ಹಝರತ್ ಮೌಲಾನ ಗುಲಾಂ ಮುಹಮ್ಮದ್ ವಸ್ತಾನ್ವಿಯವರ ಉಪಸ್ಥಿತಿ ಯಲ್ಲಿ ಜರಗುವುದು ಎಂದು ಅವರು ತಿಳಿಸಿದರು.
ಪ್ರಧಾನ ಕಾರ್ಯದರ್ಶಿ ಸಿದ್ದೀಖ್ ಇಸ್ಮಾಯಿಲ್ ಮಾತನಾಡಿ, ಭಟ್ಕಳದ ಆಸುಪಾಸಿನ ವಿದ್ಯಾರ್ಥಿಗಳಿಗೆ ಸಮಾಜಿಕ, ಆರ್ಥಿಕ ಮತ್ತು ರಾಜಕೀಯ ಶಿಕ್ಷಣವನ್ನು ಒದಗಿಸಿ ಅವರನ್ನು ದೇಶದ ಸಮರ್ಥ ಪ್ರಜೆಗಳನ್ನಾಗಿ ಮಾಡುವ ಸದುದ್ದೇಶದಿಂದ ಹಿಂದಿನ ನಮ್ಮ ಸಮಾಜದ ಪ್ರಮುಖರೂ, ಶಿಕ್ಷಣ ಪ್ರೇಮಿಗಳೂ ಆಗಿರುವ ಎಂ.ಎಂ.ಸಿದ್ದೀಕ್, ಡಿ.ಎಚ್.ಸಿದ್ದೀಕ್ ಮತ್ತು ಎಫ್.ಎ.ಹಸನ್ ಅವರು 1919ರಲ್ಲಿ ಅಂಜುಮನ್ ಹಾಮಿಯೇ ಮುಸ್ಲಿಮೀನ್ ಶಿಕ್ಷಣ ಸಂಸ್ಥೆಯನ್ನು ಹುಟ್ಟುಹಾಕಿದರು. ಸಂಸ್ಥೆಯ ಪ್ರಾರಂಭಿಕ ಹಂತದಲ್ಲಿ ಪ್ರಾಥಮಿಕ ತರಗತಿಯಿಂದ ಆರಂಭಿಸಿ ಇಂದಿನ ಆಧುನಿಕ ಶೈಕ್ಷಣಿಕ ಯುಗದಲ್ಲಿ ಪೂರ್ವ ಪ್ರಾಥಮಿಕ ಹಂತದಿಂದ ಮಾಧ್ಯಮಿಕ, ಪ್ರೌಢ, ಪದವಿಪೂರ್ವ, ಪದವಿ, ಸ್ನಾತಕೋತ್ರ, ವೃತ್ತಿಪರ ಹಾಗೂ ತಾಂತ್ರಿಕ ಶಿಕ್ಷಣದವರೆಗೆ ಎಲ್ಲಾ ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ನೀಡುತ್ತಿದೆ ಎಂದರು.
ಶತಮಾನೋತ್ಸವ ಸಂಭ್ರಮಾಚರಣೆಯ ಸಂದರ್ಭದಲ್ಲಿ ಸಂಸ್ಥೆಯಿಂದ ಶಿಕ್ಷಣವನ್ನು ಪಡೆದ ಎಲ್ಲರಿಂದ ಅಭಿಪ್ರಾಯಗಳನ್ನು ಪಡೆಯುವುದರ ಮೂಲಕ ಮುಂದಿನ ಗುರಿಯನ್ನು ತಲುಪು ಪ್ರಯತ್ನವನ್ನು ಮಾಡಲಾಗುತ್ತಿದೆ. ಉದ್ಘಾಟನಾ ಸಮಾರಂಭದಲ್ಲಿ ನಮ್ಮ ಸಂಸ್ಥೆ ಇಷ್ಟು ಎತ್ತರದಲ್ಲಿ ಬೆಳೆಯಲು ಕಾರಣೀಕರ್ತರಾದ ಸಿಬ್ಬಂದಿಗಳನ್ನು ಅವರು ಪ್ರಶಂಸನೀಯ ಸೇವೆಗಾಗಿ ಸನ್ಮಾನಿಸಿ ಗೌರವಿಸಲಾಗುತ್ತಿದೆ. ಅಲ್ಲದೆ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗೌರವಿಸಲಾಗುತ್ತಿದೆ ಎಂದೂ ಅವರು ಈ ಸಂದರ್ಭದಲ್ಲಿ ತಿಳಿಸಿದರು.
ಶತಮಾನೋತ್ಸವ ಸಮಿತಿ ಸಂಚಾಲಕ ಅಬ್ದುಲ್ ರಖೀಬ್ ಎಂ.ಜೆ. ಸ್ವಾಗತಿಸಿ ಪ್ರಸ್ತಾವಿಕವಾಗಿ ಮಾತನಾಡಿದರು. ಹೆಚ್ಚುವರಿ ಪ್ರಧಾನ ಕಾರ್ಯದರ್ಶಿ ಇಸ್ಹಾಖ್ ಶಾಬಂದ್ರಿ ಧನ್ಯವಾದ ಅರ್ಪಿಸಿದರು.
ಈ ಸಂದರ್ಭದಲ್ಲಿ ಶತಮಾನೋತ್ಸವ ಮಾಧ್ಯಮ ಸಮಿತಿ ಸಂಚಾಲಕ ಹಾಗೂ ಸ್ಕೂಲ್ ಬೋರ್ಡ್ ಕಾರ್ಯದರ್ಶಿ ಮೊಹಸಿನ್ ಶಾಬಂದ್ರಿ, ಆಡಳಿತ ಮಂಡಳಿಯ ಎಸ್.ಎಂ.ಸೈಯ್ಯದ್ ಅಬ್ದುಲ್ ಅಝೀಮ್ ಅಂಬಾರಿ, ಮೀರಾ ಸಿದ್ದೀಖ್, ಕೆ.ಎಂ.ಬುರ್ಹಾನ್, ತಾಹಾ ಮುಅಲ್ಲಿಮ್, ಮುಝಮ್ಮಿಲ್ ರುಕ್ನುದ್ದೀನ್, ಅಬ್ದುಸ್ಸಮಿ ಕೋಲಾ, ಹಾಶಿಮ್ ಮೊಹತೆಶಮ್, ಅಬ್ದುಲ್ ಕಾದಿರ್ ಎಸ್.ಎಂ. ಆಫ್ತಾಬ್ ಖಮರಿ, ಎಸ್.ಎಂ. ಪರ್ವಾಝ್, ಆಫಾಖ್ ಕೋಲಾ ಮತ್ತಿತರರು ಉಪಸ್ಥಿತರಿದ್ದರು.