ಹೋರಾಟಕ್ಕೆ ಇಳಿದರೆ ಎದುರಿದ್ದವರನ್ನು ಹತ್ಯೆ ಮಾಡಿ: ವಿದ್ಯಾರ್ಥಿಗಳಿಗೆ ವಿವಿ ಕುಲಪತಿಯ ಸಲಹೆ!

ವಾರಣಾಸಿ, ಡಿ.30: "ಹೋರಾಟಕ್ಕೆ ಇಳಿದರೆ ಹತ್ಯೆ ಮಾಡಿ" ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡುವ ಮೂಲಕ ಇಲ್ಲಿನ ಜಾನ್ ಪುರ ವೀರ ಬಹದ್ದೂರ್ ಸಿಂಗ್ ಪೂರ್ವಾಂಚಲ ವಿಶ್ವವಿದ್ಯಾನಿಲಯದ ಕುಲಪತಿ ವಿವಾದ ಸೃಷ್ಟಿಸಿದ್ದಾರೆ.
ಗಾಝಿಪುರ ಕಾಲೇಜಿನಲ್ಲಿ ನಡೆದ ಸಮಾರಂಭವೊಂದರಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಕುಲಪತಿ ರಾಜಾರಾಂ ಯಾದವ್, "ಯುವ ವಿದ್ಯಾರ್ಥಿಗಳು ಕಲ್ಲಿಗೆ ತುಳಿದು ನೀರು ತರಿಸಬಲ್ಲವರು. ಜೀವನದಲ್ಲಿ ತೆಗೆದುಕೊಂಡ ನಿರ್ಣಯವನ್ನು ಪಾಲಿಸುವವನನ್ನು ಪೂರ್ವಾಂಚಲ ವಿವಿ ವಿದ್ಯಾರ್ಥಿ ಎನ್ನುತ್ತಾರೆ" ಎಂದು ಹೇಳಿದರು.
ಭಾಷಣ ಮುಂದುವರಿಸಿ, ವಿದ್ಯಾರ್ಥಿಗಳು ಹೋರಾಟಕ್ಕೆ ಇಳಿದರೆ, ಹೊಡೆಸಿಕೊಳ್ಳಬಾರದು ಹಾಗೂ ಎದುರಿನ ವ್ಯಕ್ತಿಗೆ ಹೊಡೆಯಬೇಕು ಸಾಧ್ಯವಾದರೆ ಆ ವ್ಯಕ್ತಿಯನ್ನು ಕೊಲ್ಲಬೇಕು ಎಂದು ಸಲಹೆ ಮಾಡಿದರು.
"ನೀವು ಪೂರ್ವಾಂಚಲ ವಿವಿ ವಿದ್ಯಾರ್ಥಿಯಾಗಿದ್ದರೆ, ಅಳುತ್ತಾ ನನ್ನ ಬಳಿ ಬರಬೇಡಿ. ಯಾರೊಂದಿಗಾದರೂ ಹೋರಾಟಕ್ಕೆ ಇಳಿದರೆ ಆತನಿಗೆ ಹೊಡೆಯಿರಿ. ಸಾಧ್ಯವಾದರೆ ಆತನ್ನು ಕೊಲ್ಲಿ. ಆ ಬಳಿಕ ಬಂದದನ್ನು ನಾವು ನೋಡಿಕೊಳ್ಳುತ್ತೇವೆ" ಎಂದು ಅಣಿಮುತ್ತು ಉದುರಿಸಿದರು.
ಯಾದವ್ ಅವರ ಭಾಷಣವನ್ನು ವಿವಿಧ ರಾಜಕೀಯ ಪಕ್ಷಗಳು ಟೀಕಿಸಿವೆ. ಕಾಂಗ್ರೆಸ್ ಮುಖಂಡ ಶೈಲೇಂದ್ರ ಸಿಂಗ್, ಸಮಾಜವಾದಿ ಪಕ್ಷದ ವಕ್ತಾರ ಮನೋಜ್ ರಾಯ್ ದೂಪಚಂಡಿ ಮತ್ತಿತರರು ವಿಸಿ ಹೇಳಿಕೆಯನ್ನು ಖಂಡಿಸಿದ್ದಾರೆ.







