ಸಕಲೇಶಪುರ: ಟಿಪ್ಪರ್-ಕಾರು ನಡುವೆ ಅಪಘಾತ; ಇಬ್ಬರು ಯುವಕರು ಮೃತ್ಯು
ಓರ್ವನಿಗೆ ಗಂಭೀರ ಗಾಯ

ಸಕಲೇಶಪುರ,ಡಿ.30: ಕಾರು ಮತ್ತು ಟಿಪ್ಪರ್ ನಡುವೆ ಭೀಕರ ಅಪಘಾತ ಸಂಭವಿಸಿ ಹೊಸ ವರ್ಷ ಆಚರಣೆಗೆ ಬಂದಿದ್ದ ಇಬ್ಬರು ಯುವಕರು ಸ್ಥಳದಲ್ಲಿಯೇ ಮೃತಪಟ್ಟು ಮತ್ತೊಬ್ಬರಿಗೆ ತೀವ್ರ ಗಾಯಗಳಾದ ಘಟನೆ ಪಟ್ಟಣ ಸಮೀಪದ ದೋಣಿಗಾಲ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾನುವಾರ ಸಂಭವಿಸಿದೆ.
ಪಟ್ಟಣದ ಕಡೆಯಿಂದ ಮದ್ಯಾಹ್ನ 3.30ರ ಸುಮಾರಿಗೆ ದೋಣಿಗಾಲದ ಕಡೆಗೆ ಹೋಗುತ್ತಿದ್ದ ಟಿಪ್ಪರ್ ಲಾರಿ ಹಾಗೂ ಎದುರಿನಿಂದ ಬಂದ ಕಾರಿನ ನಡುವೆ ಢಿಕ್ಕಿ ಸಂಭವಿಸಿದೆ. ಢಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದಲ್ಲದೆ, ಎರಡೂ ವಾಹನಗಳು ಹೆದ್ದಾರಿ ಪಕ್ಕದ ಹಳ್ಳಕ್ಕೆ ಬಿದ್ದಿದೆ. ಕಾರಿನಲ್ಲಿದ್ದ ಬೆಂಗಳೂರು ಯಲಹಂಕ ಮೂಲದ ಸಂಜಯ್(27) ಹಾಗೂ ರಾಹುಲ್ ಜೋಸ್ಲಿ(32) ಕಾರಿನೊಳಗೆ ಸಿಲುಕಿ ಮೃತಪಟ್ಟಿದ್ದಾರೆ. ಅನೀಸ್ ಡಿಸೋಜಾ ಎಂಬವರಿಗೆ ಗಂಭೀರ ಗಾಯಗಲಾಗಿದ್ದು, ಹಾಸನದ ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿದೆ.
ಹಳ್ಳಕ್ಕೆ ಬಿದ್ದ ಕಾರಿನಲ್ಲಿ ಸಿಲುಕಿಕೊಂಡಿದ್ದ ಅನೀಸ್ ಡಿಸೋಜಾ ಅವರನ್ನು ಸ್ಥಳೀಯರು ಹೊರತೆಗೆದು ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸಿದರು. ಆದರೆ ಬಿಡಿಸಲಾಗದ ಸ್ಥಿತಿಯಲ್ಲಿ ಅಪ್ಪಚ್ಚಿಯಾಗಿದ್ದ ಕಾರಿನೊಳಗೆ ಸಿಲುಕಿದ್ದ ಇಬ್ಬರು ಬದುಕುಳಿಯಲಿಲ್ಲ. ನಂತರ ಕಾರನ್ನು ಮೇಲೆತ್ತಿ ಮೃತ ದೇಹಗಳನ್ನು ಹೊರಕ್ಕೆ ತೆಗೆಯಲಾಯಿತು.
ಬೆಂಗಳೂರಿನಿಂದ ಹೊಸ ವರ್ಷ ಆಚರಣೆಗೆಂದು ಬಂದ ಸುಮಾರು 10 ಮಂದಿ ಸ್ಥಳಿಯ ರೆಸಾರ್ಟ್‍ನಲ್ಲಿ ತಂಗಿದ್ದರು. ಮಗುವಿಗೆ ಕುಡಿಯಲು ಹಾಲು ತರಲೆಂದು ಮೂವರು ಕಾರಿನಲ್ಲಿ ಪಟ್ಟಣಕ್ಕೆ ತೆರಳುತ್ತಿದ್ದ ವೇಳೆ ಈ ದುರ್ಘಟನೆ ನಡೆಯಿತು ಎನ್ನಲಾಗಿದೆ. ಅಪಘಾತದ ನಂತರ ಟಿಪ್ಪರ್ ಚಾಲಕ ವಾಹನವನ್ನು ಸ್ಥಳದಲ್ಲಿಯೇ ಬಿಟ್ಟು ಪರಾರಿಯಾಗಿದ್ದಾನೆ.
ನಗರ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲಿಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪರಾರಿಯಾಗಿರುವ ಚಾಲಕನ ಪತ್ತೆ ಕಾರ್ಯ ನಡೆಯುತ್ತಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆಂದು ಪಟ್ಟಣದ ಶವಾಗಾರದಲ್ಲಿ ಇರಿಸಲಾಗಿದೆ.







