ಲೋಕಸಭೆ ಚುನಾವಣೆ ಮೈತ್ರಿ ಬಗ್ಗೆ ಹೈಕಮಾಂಡ್ ನಿರ್ಧಾರಕ್ಕೆ ಬದ್ಧ: ಮಲ್ಲಿಕಾರ್ಜುನ ಖರ್ಗೆ

ಬೆಂಗಳೂರು, ಡಿ. 30: ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್- ಜೆಡಿಎಸ್ ಮೈತ್ರಿ ವಿಚಾರ ಸಂಬಂಧ ಹೈಕಮಾಂಡ್ ನಿರ್ಧಾರಕ್ಕೆ ನಾವು ಬದ್ಧ ಎಂದು ಲೋಕಸಭೆ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಇಂದಿಲ್ಲಿ ಸ್ಪಷ್ಟಪಡಿಸಿದ್ದಾರೆ.
ರವಿವಾರ ಇಲ್ಲಿನ ಸದಾಶಿವನಗರದಲ್ಲಿನ ತನ್ನ ನಿವಾಸದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಮೃತ್ರಿ ಸಂಬಂಧ ಈವರೆಗೂ ಯಾವುದೇ ಚರ್ಚೆ ನಡೆದಿಲ್ಲ. ಮೈತ್ರಿ ಸರಕಾರದಲ್ಲಿ ಕಾಂಗ್ರೆಸ್-ಜೆಡಿಎಸ್ ಒಟ್ಟಾಗಿದ್ದೇವೆ. ಜೆಡಿಎಸ್ 12 ಸೀಟುಗಳನ್ನು ಕೇಳಿದ್ದಾರೆಂಬುದು ಸರಿಯಲ್ಲ ಎಂದು ಆಕ್ಷೇಪಿಸಿದರು. ಮಾಜಿ ಪ್ರಧಾನಿ ದೇವೇಗೌಡ ತಮ್ಮ ನಿಲುವನ್ನು ತಿಳಿಸಿದ್ದಾರೆ. ಅದರಲ್ಲಿ ಯಾವುದೇ ತಪ್ಪಿಲ್ಲ. ಎರಡು ಪಕ್ಷದ ನಾಯಕರು ಚರ್ಚೆ ನಡೆದ ಬಳಿಕ ಯಾರಿಗೆ ಎಷ್ಟು ಎಂಬುದು ಹೊರ ಬೀಳುತ್ತದೆ. ಪ್ರಜಾಪ್ರಭುತ್ವದ ಒಳಿತಿಗಾಗಿ ನಾವೆಲ್ಲಾ ಒಂದಾಗಬೇಕಿದೆ ಎಂದು ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು.
ಮಾಜಿ ಸಚಿವ ರಮೇಶ್ ಜಾರಕಿಹೊಳಿ ಪಕ್ಷ ಬಿಟ್ಟು ಹೋಗುವುದಿಲ್ಲ. ಪಕ್ಷದಲ್ಲಿ 25 ವರ್ಷ ಕಳೆದಿದ್ದು, ಪಕ್ಷವೂ ಅವರಿಗೆ ಸಾಕಷ್ಟು ಅಧಿಕಾರವನ್ನು ನೀಡಿದೆ. ಪಕ್ಷ ಬಿಡುವಷ್ಟು ಕೆಟ್ಟ ನಿರ್ಧಾರ ಅವರು ತೆಗೆದುಕೊಳ್ಳುವುದಿಲ್ಲ. ಬಿಜೆಪಿಯವರು ಚುನಾವಣೆಗೂ ಮುನ್ನ ಅಧಿಕಾರ ಹಿಡಿಯಬೇಕೆಂದು ಪ್ರಯತ್ನಿಸುತ್ತಿದ್ದು, ಅವರ ಪ್ರಯತ್ನ ಫಲಿಸುವುದಿಲ್ಲ ಎಂದು ನುಡಿದರು.
‘ರಾಜ್ಯದಲ್ಲಿ ದಲಿತ ಮುಖ್ಯಮಂತ್ರಿ ವಿಚಾರವಾಗಿ ಕಳೆದ 50 ವರ್ಷಗಳಿಂದ ಚರ್ಚೆ ನಡೆಯುತ್ತಿದೆ. ನಮ್ಮ ಪಕ್ಷದಲ್ಲಿ ದಲಿತ ಸಿಎಂ ಮಾಡುವುದು ನಮಗೆ ಬಿಟ್ಟಿದ್ದು, ಜೆಡಿಎಸ್ ಪಕ್ಷದ್ದು ಅವರಿಗೆ ಬಿಟ್ಟಿದ್ದು. ಮೈತ್ರಿ ಸರಕಾರದಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಮುಂದಿನ ಲೋಕಸಭೆ ಚುನಾವಣೆ ಎದುರಿಸಬೇಕೆಂಬುದು ನಮ್ಮ ಉದ್ದೇಶ’
-ಮಲ್ಲಿಕಾರ್ಜುನ ಖರ್ಗೆ, ಲೋಕಸಭೆ ಕಾಂಗ್ರೆಸ್ ಸಂಸದೀಯ ನಾಯಕ