ಜಿಲ್ಲೆಯ ಘನವೆತ್ತ ವಿದ್ವಾಂಸ ಡಾ. ವಿವೇಕ ರೈ: ‘ಅಕ್ಕರ ಮನೆ’ ಕೃತಿ ಲೋಕಾರ್ಪಣೆಗೈದ ಡಾ. ವೈದೇಹಿ ಅಭಿಮತ

ಮಂಗಳೂರು, ಡಿ.30: ನೋಡುವಾಗ ಗಂಭೀರ ಸ್ವಭಾವದಿಂದ ಕೂಡಿದ ಹತ್ತಿರವಾದಾಗ ಸ್ನೇಹಶೀಲ ವ್ಯಕ್ತಿತ್ವ ಹೊಂದಿರುವ ಡಾ. ಬಿ.ಎ. ವಿವೇಕ ರೈ ಜಿಲ್ಲೆಯ ಘನವೆತ್ತ ವಿದ್ವಾಂಸ ಎಂದು ಖ್ಯಾತ ಲೇಖಕಿ ಡಾ. ವೈದೇಹಿ ಅಭಿಪ್ರಾಯಿಸಿದ್ದಾರೆ.
ಅವರು ಇಂದು ಕೆನರಾ ಕಾಲೇಜು ಸಭಾಂಗಣದಲ್ಲಿ ಡಾ.ಬಿ.ಎ. ವಿವೇಕ ರೈಯವರ ‘ಅಕ್ಕರ ಮನೆ’ ಕೃತಿಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.
ಬಿದಿರು ಹಾಗೂ ಹುಲ್ಲಿನಿಂದ ನಿರ್ಮಿಸಲಾದ ಪುಟ್ಟದಾದ ಮನೆಯ ಆಕೃತಿಯೊಳಗಿನಿಂದ ಕೃತಿಯನ್ನು ಹೊರತೆಗೆಯುವ ಮೂಲಕ ವಿನೂತನ ರೀತಿಯಲ್ಲಿ ‘ಅಕ್ಕರಮನೆ’ ಕೃತಿಯನ್ನು ಬಿಡುಗಡೆಗೊಳಿಸಿದ ಅವರು, ಅಗ್ರಾಳವೆಂಬ ಸಣ್ಣ ಹಳ್ಳಿಯಿಂದ ಜರ್ಮನಿವಯೆರೆಗೆ ಸಾಗುವ ಹಾದಿಯಲ್ಲಿನ ಅನುಭವಗಳನ್ನು ಘನೀಕರಿಸಿಕೊಂಡು ಕ್ರಿಯಾಶೀಲತೆಯನ್ನು ಮೈಗೂಡಿಸಿಕೊಂಡವರು ಡಾ. ವಿವೇಕ ರೈ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸ್ಥಳಾವಕಾಶವೇ ಇಲ್ಲದ ಮನಸ್ಸುಗಳು, ಎಲ್ಲೆಲ್ಲೂ ರಾಜಕೀಯದ ಹುನ್ನಾರಗಳ ನಡುವೆ ನಾವಿಂದು ಜೀವಿಸುತ್ತಿದ್ದೇವೆ. ಇಂತಹ ವಾತಾವರಣದಲ್ಲಿ ಜವಾಬ್ದಾರಿಯುಳ್ಳ ಅನೇಕ ಹುದ್ದೆಗಳನ್ನು ನಿರ್ವಹಿಸುವ ಜತೆಗೆ ಶಿಸ್ತಿನ ಮನುಷ್ಯನಾಗಿ, ಡಾ. ವಿವೇಕ ರೈ ಸಾಹಿತ್ಯವನ್ನು ಗಟ್ಟಿ ಮಾಡಿಕೊಂಡಿದ್ದಾರೆ ಎಂದು ಡಾ. ವೈದೇಹಿ ಹೇಳಿದರು.
ಹಿರಿಯರಾದ ಪ್ರೊ. ಎಂ. ರಾಮಚಂದ್ರ ಅವರು ಮಾತನಾಡಿ ಪ್ರೊ. ವಿವೇಕ ರೈ ಜತೆಗಿನ ತಮ್ಮ ಒಡನಾಟವನ್ನು ನೆನಪಿಸಿಕೊಂಡರು. ಈ ಸಂದರ್ಭ ಆಳ್ವಾಸ್ ಕಾಲೇಜಿನ ರಾಮಪ್ರಸಾದ್ ಕಾಂಚೋಡು ಕವನ ವಾಚಿಸಿರು. ನಟಿ ಸರೋಜಿನಿ ಶೆಟ್ಟಿ ಹಾಗೂ ಡಾ. ಮೀನಾಕ್ಷಿ ರಾಮಚಂದ್ರ ‘ನೆತ್ತರ ಮದುವೆ’ ನಾಟಕದ ತುಣುಕು ಸಂಭಾಷಣೆಯನ್ನು ಪ್ರದರ್ಶಿಸಿದರು.
ಆಕೃತಿ ಆಶಯ ಪಬ್ಲಿಕೇಶನ್ಸ್, ರಂಗ ಸಂಗಾತಿ ಮಂಗಳೂರು, ಬಹುರೂಪಿ ಬೆಂಗಳೂರು ಹಾಗೂ ವಿಕಾಸ ಮಂಗಳೂರು ಸಂಘಟನೆಗಳ ಸಹಭಾಗಿತ್ವದಲ್ಲಿ ಸಂಯೋಜಿಸಲಾಗದ ಕಾರ್ಯಕ್ರಮದಲ್ಲಿ ವಿಮರ್ಶಕ ಡಾ. ನಾ. ದಾಮೋದರ ಶೆಟ್ಟಿ ಸ್ವಾಗತಿಸಿದರು. ಶ್ರೇಯಾ ಕಲ್ಲೂರು ‘ಎಕ್ಕಸಕ’ ಹಾಡನ್ನು ಹಾಡಿದರು. ಶಶಿರಾಜ್ ರಾವ್ ಕಾವೂರು ಕಾರ್ಯಕ್ರಮ ನಿರ್ವಹಿಸಿದರು.
ಅಗಲಿದ ಚೇತನಗಳ ಸ್ಮರಣೆ
ಕಾರ್ಯಕ್ರಮದ ಆರಂಭದಲ್ಲಿ ಕೃತಿಕರ್ತೃ ಡಾ. ವಿವೇಕ ರೈಯವರು ಇಂದು ಅಗಲಿದ ಹಿರಿಯ ಪತ್ರಕರ್ತ, ಕಲಾವಿಮರ್ಶಕ ಈಶ್ವರಯ್ಯ, ನಿನ್ನೆ ರಾತ್ರಿ ನಿಧನರಾದ ತುಳು ಜನಪದ ಸಾಹಿತ್ಯವನ್ನು ಜಗತ್ತಿಗೆ ತಿಳಿಸಿದ ಪೀಟರ್ ಜೆ. ಕ್ರಾಸ್ ಹಾಗೂ ದಕ್ಷ ಐಪಿಎಸ್ ಅಧಿಕಾರಿ ಡಾ. ಕೆ. ಮಧುಕರ್ ಶೆಟ್ಟಿಯವರಿಗೆ ನುಡಿ ನಮನದ ಮೂಲಕ ಸ್ಮರಿಸಿಕೊಂಡರು.







