ಗಡಿ ಸಮಸ್ಯೆ ಪರಿಹಾರಕ್ಕೆ ನೆರೆ ರಾಜ್ಯಗಳು ಚಿಂತಿಸಲಿ: ಪ್ರೊ.ಎಸ್.ಜಿ.ಸಿದ್ದರಾಮಯ್ಯ

ಹೈದರಾಬಾದ್, ಡಿ.30: ಗಡಿ ನಿವಾಸಿಗಳ ಸಮಸ್ಯೆಗಳನ್ನು ಪರಿಹರಿಸಿ, ಅವರನ್ನು ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ನೆರೆ ರಾಜ್ಯಗಳು ಚಿಂತಿಸಬೇಕಾದ ಅಗತ್ಯವಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಜಿ.ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.
ರವಿವಾರ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಆಶ್ರಯದಲ್ಲಿ ಹೈದರಾಬಾದಿನ ಉಸ್ಮಾನಿಯಾ ವಿಶ್ವವಿದ್ಯಾನಿಲಯದ ಸಭಾಂಗಣದಲ್ಲಿ ಆಂಧ್ರಪ್ರದೇಶ ಮತ್ತು ತೆಲಂಗಾಣ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ 2018-19ನೆ ಸಾಲಿನ ಕನ್ನಡ ಮಾಧ್ಯಮ ಪ್ರಶಸ್ತಿ ಪ್ರಧಾನ ಸಮಾರಂಭವನ್ನ ಉದ್ಘಾಟಿಸಿ ಅವರು ಮಾತನಾಡಿದರು.
ಕನ್ನಡ ಭಾಷೆಯು ಒಳಗೊಂಡಂತೆ ಯಾವುದೇ ಪ್ರಾದೇಶಿಕ ಭಾಷೆಯನ್ನು ರಕ್ಷಿಸಿಕೊಳ್ಳುವುದು ಆಯಾ ರಾಜ್ಯಗಳ ಹಕ್ಕು. ಅದನ್ನು ಪೋಷಿಸುವ ಭಾದ್ಯತೆ ಕೇಂದ್ರ ಸರಕಾರದ್ದಾಗಿದೆ. ದೇಶ ಒಕ್ಕೂಟ ವ್ಯವಸ್ಥೆಯನ್ನು ಹೊಂದಿರುವುದರಿಂದ ಗಡಿ ಸಮಸ್ಯೆಗಳನ್ನು ಕೆದಕುವುದ್ಕಕಿಂತ ಆ ಗಡಿಗಳಲ್ಲಿರುವ ನಮ್ಮ ನಮ್ಮ ಭಾಷಿಕರ ಸಮಸ್ಯೆಗಳನ್ನು ಪರಿಹರಿಸಲು ಸರಕಾರಗಳು ಮುಂದಾಗಬೇಕಿದೆ ಎಂದು ಅವರು ಹೇಳಿದರು.
ಗಡಿ ವಿಂಗಡಣೆಗೆ ಸಂಬಂಧಿಸಿದ ಸಮಸ್ಯೆಗಳನ್ನು ವೈಭವೀಕರಿಸದೇ ಅಲ್ಲಿನ ಜನರ ಬದುಕು ಹಸನುಗೊಳಿಸುವುದರ ಅಗತ್ಯವಿದೆ. ನಾವು ಎಲ್ಲೇ ಇರಲಿ ನಮ್ಮ ಮಾತೃಭಾಷಾ ಇಚ್ಛಾಶಕ್ತಿಯನ್ನು ಪ್ರತಿಯೊಬ್ಬರೂ ಗೌರವಿಸಬೇಕು. ಇಂತಹ ಇಚ್ಛಾಶಕ್ತಿಯಿಂದಲೇ ಕನ್ನಡ ಭಾಷೆ ಈ ತನಕ ಸಮೃದ್ಧ ಭಾಷೆಯಾಗಿಯೇ ಉಳಿದು ಬೆಳೆದು ಬಂದಿದೆ ಎಂದು ಸಿದ್ದರಾಮಯ್ಯ ಅಭಿಪ್ರಾಯಪಟ್ಟರು. ತೆಲುಗು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಎಸ್‌ವಿ.ಸತ್ಯನಾರಾಯಣ ಮಾತನಾಡಿ, ಕನ್ನಡ ಭಾಷೆ ಎಷ್ಟು ಸಮೃದ್ಧವಾಗಿದೆಯೋ ಅಷ್ಟೇ ಪುರಾತನ ಇತಿಹಾಸ ಹಾಗೂ ಉತ್ಕೃಷ್ಟ ಪರಂಪರೆಯನ್ನೂ ಹೊಂದಿದೆ ಎಂದರು.
ಉಸ್ಮಾನಿಯಾ ವಿಶ್ವವಿದ್ಯಾನಿಲಯದ ಕುಲಪತಿಗಳ ವಿಶೇಷ ಕರ್ತವ್ಯಾಧಿಕಾರಿ ಪ್ರೊ.ಟಿ.ಕೃಷ್ಣರಾವ್ ಮಾತನಾಡಿ, ನಮ್ಮ ನಿಜವಾದ ಅಭಿವೃದ್ಧಿ ನಮ್ಮ ಮಾತೃಭಾಷೆಯಿಂದಲೇ ಆರಂಭವಾಗುತ್ತದೆ. ಹಾಗಾಗಿ ನಮ್ಮ ಮಾತೃಭಾಷೆಯನ್ನು ಪ್ರತಿಯೊಬ್ಬರೂ ಗೌರವಿಸಬೇಕೆಂದರು. ಉಸ್ಮಾನಿಯಾ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಎಂ.ಲಿಂಗಪ್ಪ ಗೋನಾಳ್ ಮಾತನಾಡಿ, ಕನ್ನಡ ಸಮೃದ್ಧ ಹಾಗೂ ಸಮರ್ಥ ಭಾಷೆ. ಇಂತಹ ಭಾಷೆಯ ಕುರಿತು ಯಾರೂ ಕೀಳರಿಮೆ ಹೊಂದಬೇಕಾದ ಪ್ರಮೇಯವೇ ಇಲ್ಲ. ನಾವು ಕನ್ನಡ ಭಾಷಿಕರು ಎಂಬುದನ್ನು ಹೆಮ್ಮೆಯಿಂದ ಹೇಳಿಕೊಳ್ಳಬೇಕು. ಭಾಷೆಯ ಬೆಳವಣಿಗೆ ಹಾಗೂ ಅದರ ಅಸ್ತಿತ್ವವನ್ನು ನಾವು ಅದನ್ನು ಹೆಚ್ಚು ಹೆಚ್ಚಾಗಿ ಹೆಮ್ಮೆಯಿಂದ ಬಳಸುವುದರಿಂದಲೇ ಉಳಿಸಿಕೊಳ್ಳಬೇಕೆಂದರು.
ಹೊರನಾಡಿನಲ್ಲಿ ಕನ್ನಡದ ಮಕ್ಕಳ ಬೆಳವಣಿಗೆಗೆ ಹಾಗೂ ಕನ್ನಡದ ಮನಸುಗಳ ಅಭಿವೃದ್ಧಿಗೆ ಕರ್ನಾಟಕ ಸರಕಾರ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮೂಲಕ ನೀಡುತ್ತಿರುವ ನಾನಾ ರೀತಿಯ ಪ್ರೋತ್ಸಾಹವನ್ನು ವಿವರಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಅದನ್ನು ಹೀಗೆಯೇ ಮುಂದುವರೆಸಿ ಭಾಷೆಯ ಬೆಳವಣಿಗೆಗೆ ಅನುಕೂಲ ಮಾಡಿಕೊಡಬೇಕೆಂದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ. ಕೆ. ಮುರಳಿಧರ, ಹೈದರಾಬಾದ್ ಕನ್ನಡ ವೆಲ್ಫೇರ್ ಸೊಸೈಟಿ ಅಧ್ಯಕ್ಷ ಧರ್ಮೇಂದ್ರ ಪೂಜಾರಿ ಬಗ್ಡೂರಿ, ಪ್ರಾಧಿಕಾರದ ಸದಸ್ಯರಾದ ಪ್ರಕಾಶ್ ಎಂ. ಜೈನ್, ಮಹಾಂತೇಶ ಲಕ್ಷ್ಮಣ್ ಹಟ್ಟಿ ಮತ್ತಿತರರು ಭಾಗವಹಿಸಿದ್ದರು. ಇದೇ ವೇಳೆ ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳ 14 ಶಾಲೆಗಳಲ್ಲಿ ಎಸೆಸೆಲ್ಸಿ ಮತ್ತು ಪಿಯುಸಿ ತರಗತಿಗಳಲ್ಲಿ ಕನ್ನಡ ಮಾಧ್ಯಮದಲ್ಲಿ ಅಭ್ಯಸಿಸಿ ಅತಿ ಹೆಚ್ಚು ಅಂಕಗಳಿಸಿದ 102 ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ಹಾಗೂ ಹಾಗೂ ನಗದು ಬಹುಮಾನ ನೀಡಿ ಗೌರವಿಸಲಾಯಿತು.







