ಪ್ರೊ.ಅರವಿಂದ ಹೆಬ್ಬಾರ್‌ಗೆ ಸಾರ್ವಜನಿಕ ಸನ್ಮಾನ

ಉಡುಪಿ, ಡಿ. 30: ಸಂಗೀತ ವಿದ್ವಾಂಸ, ಸಂಘಟಕ, ಬಹುಮುಖ ಪ್ರತಿಭೆಯ ಸಾಧಕ, ನಿವೃತ್ತ ಸಸ್ಯಶಾಸ್ತ್ರ ಪ್ರಾಧ್ಯಾಪಕ ಪ್ರೊ.ಅರವಿಂದ ಹೆಬ್ಬಾರ್ ಅವರಿಗೆ ಉಡುಪಿಯ ಕಲಾಸಕ್ತರು, ಅಭಿಮಾನಿಗಳು ಹಾಗೂ ಶಿಷ್ಯರು ಸೇರಿ ಎಂಜಿಎಂ ಕಾಲೇಜಿನ ನೂತನ ರವೀಂದ್ರಮಂಟಪದಲ್ಲಿ ರವಿವಾರ ಸಂಜೆ ‘ವಸಂತಾರವಿಂದ’ ಕಾರ್ಯಕ್ರಮದಲ್ಲಿ ಆತ್ಮೀಯವಾಗಿ ಸನ್ಮಾನಿಸಿದರು.
ವಸಂತಾರವಿಂದ ಸಮಿತಿಯ ವತಿಯಿಂದ ಆಯೋಜಿಸಲಾದ ಈ ಸನ್ಮಾನ ಕಾರ್ಯಕ್ರಮವನ್ನು ಬೆಳಗ್ಗೆ ಅಂಬಲಪಾಡಿ ದೇವಸ್ಥಾನದ ಧರ್ಮಾಧಿಕಾರಿ ಡಾ. ಎನ್.ಬಿ.ವಿಜಯ ಬಲ್ಲಾಳ್ ಉದ್ಘಾಟಿಸಿದ್ದು, ಪೇಜಾವರ ಮಠದ ಕಿರಿಯ ಯತಿಗಳಾದ ಶ್ರೀವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಆಶೀರ್ವಚನ ನೀಡಿದ್ದರು. ಸಮಾರಂಭದಲ್ಲಿ ಪ್ರೊ.ಅರವಿಂದ ಹೆಬ್ಬಾರರ ಎರಡು ಕೃತಿ ಹಾಗೂ ಸಿಡಿಗಳನ್ನು ಬಿಡುಗಡೆಗೊಳಿಸಲಾಗಿತ್ತು.
ಸಂಜೆ ನಡೆದ ಸನ್ಮಾನ ಸಮಾರಂಭದಲ್ಲಿ ಅಭಿಮಾನಿಗಳ, ಶಿಷ್ಯರ ಹಾಗೂ ಸಂಗೀತ ವಿದ್ಯಾರ್ಥಿಗಳಿಂದ ಸನ್ಮಾನ ಸ್ವೀಕರಿಸಿದ ಮಾತನಾಡಿದ ಪ್ರೊ. ಅರವಿಂದ ಹೆಬ್ಬಾರ್, ಜೀವನದಲ್ಲಿ ನಾನು ನಿಂದನೆ, ಟೀಕೆ, ಅವಮರ್ಯಾದೆಗಳನ್ನು ಸಾಕಷ್ಟು ಅನುಭವಿಸಿದ್ದೇನೆ. 30ರ ಹರೆಯದ ಬಳಿಕ ಸಂಗೀತಾಸಕ್ತಿ ಬೆಳೆದು, ಗುರುಗಳಾದ ಮಧೂರು ಬಾಲಸುಬ್ರಹ್ಮಣ್ಯ ಅವರಲ್ಲಿ ಸಂಗೀತಾಭ್ಯಾಸ ಮಾಡುವಾಗ ಯಮಸಾಧನೆ ಮಾಡಿದ್ದೇನೆ ಎಂದರು.
ಪ್ರೊ.ಹೆಬ್ಬಾರ್ ಅವರನ್ನು ಅಭಿನಂದಿಸಿ ಮಾತನಾಡಿದ ಅವರ ಶಿಷ್ಯ ಹಾಗೂ ಸುರತ್ಕಲ್ ಎನ್‌ಐಟಿಕೆಯ ಪ್ರಾಧ್ಯಾಪಕ ಡಾ.ಶಶಿಕಾಂತ್ ಕೌಡೂರು, ಉಡುಪಿಯಲ್ಲಿ ಗೃಹ ಸಂಗೀತ ಎಂಬ ಪರಿಕಲ್ಪನೆಯನ್ನು ಜಾರಿಗೊಳಿಸಿದವರೇ ಪ್ರೊ.ಹೆಬ್ಬಾರ್‌ರು. ಉಡುಪಿಯಲ್ಲಿ ಇಲ್ಲಿಯವರೇ ಆದ ಒಳ್ಳೆಯ ಸಂಗೀತ ವಿದ್ವಾಂಸರಿಲ್ಲದಿರುವುದನ್ನು ಗಮನಿಸಿ, ಆಸಕ್ತರಿಗೆ ಸಂಗೀತ ಕಲಿಸಲು ‘ರಾಗಧನ’ ಎಂಬ ಸಂಸ್ಥೆಯನ್ನು ಆರಂಭಿಸಿದರು ಎಂದರು.
ಉಡುಪಿಯ ಜನತೆಯಲ್ಲಿ ಸಾಂಸ್ಕೃತಿಕ ಸಾಂಧ್ರತೆ ಹಾಗೂ ಸಾಂಸ್ಕೃತಿಕ ಜಾಗೃತಿ ಹೆಚ್ಚಾಗಲು ಪ್ರೊ.ಅರವಿಂದ ಹೆಬ್ಬಾರ್ ಅವರ ಸತತ ಪ್ರಯತ್ನಗಳು ಕಾರಣವಾದವು ಎಂದು ಡಾ.ಶಶಿಕಾಂತ್ ಕೌಡೂರು ಅಭಿಪ್ರಾಯ ಪಟ್ಟರು.
ಸನ್ಮಾನ ಸಮಿತಿಯ ಅಧ್ಯಕ್ಷ ಪ್ರೊ.ಎಂ.ಎಲ್.ಸಾಮಗ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಮಣಿಪಾಲ ಅಕಾಡೆಮಿ ಆಫ್ ಜನರಲ್ ಎಜ್ಯುಕೇಶನ್‌ನ ಆಡಳಿತಾಧಿಕಾರಿ ಡಾ.ಎಚ್.ಶಾಂತಾರಾಮ್ ಮುಖ್ಯ ಅತಿಥಿಗಳಾಗಿ ಉಪಸ್ಥಿತ ರಿದ್ದರು. ವಸಂತಲಕ್ಷ್ಮೀ ಹೆಬ್ಬಾರ್ ಸಹ ಭಾಗವಹಿಸಿದ್ದರು.
ಸಮಿತಿಯ ಕಾರ್ಯದರ್ಶಿ ನಿತ್ಯಾನಂದ ರಾವ್ ಅತಿಥಿಗಳನ್ನು ಸ್ವಾಗತಿಸಿದರೆ, ಕೆ.ವಿ.ರಮಣ್ ಕಾರ್ಯಕ್ರಮ ನಿರೂಪಿಸಿದರು. ಸ್ಥಳೀಯ ಯುವ ಪ್ರತಿಭೆಗಳಾದ ಅರ್ಚನಾ ಹಾಗೂ ಸಮನ್ವಿಯವರಿಂದ ಕರ್ನಾಟಕ ಸಂಗೀತ, ಮೈಸೂರಿನ ಶ್ರೀಮತಿದೇವಿ ಇವರಿಂದ ಹಿಂದೂಸ್ತಾನಿ ಸಂಗೀತ ಹಾಗೂ ಎನ್.ರವಿಕಿರಣ್‌ರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕೇರಿಗಳು ನಡೆದವು.