ಆಧ್ಯಾತ್ಮಿಕ ಇಲಾಖೆ ಸ್ಥಾಪಿಸಿದ ಕಮಲ್ ನಾಥ್ ಸರಕಾರ !

ಭೋಪಾಲ, ಡಿ.30: ಈಗ ಇರುವ ಹಲವು ಇಲಾಖೆಗಳನ್ನು ವಿಲೀನಗೊಳಿಸಿ ‘ಆಧ್ಯಾತ್ಮಿಕ ಇಲಾಖೆ’ ಎಂಬ ಹೊಸ ಇಲಾಖೆಯನ್ನು ರಾಜ್ಯದಲ್ಲಿ ಆರಂಭಿಸುವುದಾಗಿ ಮಧ್ಯಪ್ರದೇಶದ ಮುಖ್ಯಮಂತ್ರಿ ಕಮಲನಾಥ್ ತಿಳಿಸಿದ್ದಾರೆ.
ಕಳೆದ ತಿಂಗಳು ನಡೆದಿದ್ದ ವಿಧಾನಸಭೆ ಚುನಾವಣೆಯಲ್ಲಿ ಹಿಂದೂ ಮತಗಳ ಮೇಲೆ ಕಣ್ಣಿಟ್ಟಿದ್ದ ಕಾಂಗ್ರೆಸ್ , ಹೊಸ ಇಲಾಖೆಯನ್ನು ಆರಂಭಿಸುವುದಾಗಿ ಪ್ರಣಾಳಿಕೆಯಲ್ಲಿ ತಿಳಿಸಿತ್ತು. ಅಲ್ಲದೆ ಸಂಸ್ಕೃತಕ್ಕೆ ಉತ್ತೇಜನ ನೀಡುವುದು, ಗೋಶಾಲೆಗಳ ಸ್ಥಾಪನೆ ಹಾಗೂ ರಾಮಪಥ(ಪುರಾಣಶಾಸ್ತ್ರದಲ್ಲಿ ತಿಳಿಸಿರುವಂತೆ ವನವಾಸದ ಸಂದರ್ಭ ರಾಮ ಸಾಗಿದ ದಾರಿ)ದ ಅಭಿವೃದ್ಧಿ ಮಾಡುವ ಭರವಸೆಯನ್ನೂ ನೀಡಿತ್ತು.
ಈ ಹಿಂದಿನ ಬಿಜೆಪಿ ಸರಕಾರ ದೇಶದಲ್ಲೇ ಪ್ರಥಮ ಬಾರಿಯಾಗಿ ‘ಆನಂದ ಇಲಾಖೆ’ ಎಂಬ ಹೊಸ ಇಲಾಖೆಯನ್ನು ಆರಂಭಿಸಿತ್ತು. ಇದೀಗ ಕಾಂಗ್ರೆಸ್ ನೇತೃತ್ವದ ಸರಕಾರ ಆರಂಭಿಸಿರುವ ನೂತನ ಇಲಾಖೆಯಲ್ಲಿ ಆನಂದ ಇಲಾಖೆಯೂ ವಿಲೀನಗೊಳ್ಳಲಿದೆ.
ಹೊಸ ಇಲಾಖೆಯಲ್ಲಿ ಧಾರ್ಮಿಕ ಟ್ರಸ್ಟ್ ಮತ್ತು ದತ್ತಿ ಇಲಾಖೆ, ಆನಂದ್ ವಿಭಾಗ(ಆನಂದ ಇಲಾಖೆ), ಧಾರ್ಮಿಕ ದತ್ತಿ ನಿರ್ದೇಶನಾಲಯ, ರಾಜ್ಯ ಆನಂದ ಸಂಸ್ಥಾನ ಹಾಗೂ ಮಧ್ಯಪ್ರದೇಶ ತೀರ್ಥ ಮತ್ತು ಮೇಳ ಪ್ರಾಧೀಕರಣಗಳನ್ನು ವಿಲೀನಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಕಚೇರಿ ಟ್ವೀಟ್ ಮೂಲಕ ತಿಳಿಸಿದೆ.