'ಕನಕ ಜಯಂತಿ' ಆಸ್ತಿಕ ಸಮಾಜದ ಜಯಂತಿ: ಪಲಿಮಾರುಶ್ರೀ

ಉಡುಪಿ, ಡಿ. 30: ಕಳೆದ 531 ವರ್ಷಗಳಿಂದ ಕನಕದಾಸರು ಆಸಕ್ತಿ ಸಮಾಜದ ದೊಡ್ಡ ಸ್ತಂಭ. ನಾವು ಆಚರಿಸುವ ಕನಕ ಜಯಂತಿ, ಆಸ್ತಿಕ ಸಮಾಜದ ಜಯಂತಿಯಾಗಿ ಎಂದು ಪರ್ಯಾಯ ಪಲಿಮಾರು ಮಠದ ಶ್ರೀವಿದ್ಯಾಧೀಶ ತೀರ್ಥ ಶ್ರೀಪಾದರು ಹೇಳಿದ್ದಾರೆ.
ಪರ್ಯಾಯ ಪಲಿಮಾರು ಮಠದ ಆಶ್ರಯದಲ್ಲಿ ಬೆಂಗಳೂರಿನ ಕನಕ ಸದ್ಭಾವನಾ ಜ್ಯೋತಿ ರಥಯಾತ್ರೆ ಸಮಿತಿ ಹಾಗೂ ಉಡುಪಿ ಜಿಲ್ಲಾ ಶ್ರೀಕನಕದಾಸ ಸಮಾಜ ಸೇವಾ ಸಂಘದ ವತಿಯಿಂದ ಇಂದು ಉಡುಪಿಯಲ್ಲಿ ನಡೆದ ಕನಕ ಸದ್ಭಾವನಾ ಜ್ಯೋತಿ ರಥಯಾತ್ರೆ ಹಾಗೂ ಭಕ್ತ ಕನಕದಾಸರ 531ನೇ ಜಯಂತ್ಯುತ್ಸ ವನ್ನು ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡುತಿದ್ದರು.
ಕನಕದಾಸರ ಪದಗಳಿಗೆ ನಾಸ್ತಿಕರನ್ನು ಆಸ್ತಿಕನಾಗಿ ಮಾಡುವ ಶಕ್ತಿಯಿದೆ. ಇಂಥ ಕನಕದಾಸರಿಂದ ಉಡುಪಿಗೆ ವೈಭವ ಬಂದಿದೆ. ಕನಕದಾಸರು ಅಂದು ಉಡುಪಿಯಲ್ಲಿ ಕೃಷ್ಣನಿಗೆ ಅರ್ಪಿಸಿದ ನೈವೇದ್ಯವಾದ ರೊಟ್ಟಿ ಮತ್ತು ಗಂಜಿ,ಇಂದು ಸಹ ಕೃಷ್ಣನಿಗೆ ಪ್ರತಿದಿನ ನೈವೇಧ್ಯದ ರೂಪದಲ್ಲಿ ಸಮರ್ಪಿ ತವಾಗುತ್ತಿರುವುದು ಕನಕದಾಸರು ಉಡುಪಿಯಲ್ಲಿ ಹೊಂದಿರುವ ಪ್ರಭಾವವನ್ನು ತೋರಿಸುತ್ತದೆ ಎಂದು ಪಲಿಮಾರು ಶ್ರೀಗಳು ಅಭಿಪ್ರಾಯ ಪಟ್ಟರು.
ವೇದಿಕೆಯಲ್ಲಿ ಮಾಜಿ ಶಾಸಕ ಪ್ರಮೋದ್ ಮಧ್ವರಾಜ್, ಅಲೆವೂರು ಗ್ರಾಪಂ ಅಧ್ಯಕ್ಷ ಶ್ರೀಕಾಂತ್ ನಾಯಕ್, ಕನಕ ಸದ್ಭಾವನಾ ಜ್ಯೋತಿ ರಥಯಾತ್ರೆಯ ರಾಜ್ಯಾಧ್ಯಕ್ಷ ಓಂ ಶ್ರೀಕೃಷ್ಣಮೂರ್ತಿ,ಚಿಕ್ಕಮಗಳೂರಿನ ಸಾಹಿತಿ ಚೊಕ್ಕನಳ್ಳಿ ಮಹೇಶ್, ಉಡುಪಿ ಜಿಲ್ಲಾ ಕನಕದಾಸ ಸಮಾಜ ಸೇವಾ ಸಂಘದ ಅಧ್ಯಕ್ಷ ಡೊಳ್ಳಿನ ಹನುಮಂತ, ಕರಾವಳಿ ಕುರುಬರ ಸಂಘದ ಅಧ್ಯಕ್ಷ ಡಾ.ಪ್ರಕಾಶ್, ಮಂಗಳೂರು ಸಂಘದ ಮಾಜಿಅಧ್ಯಕ್ಷ ಶಿವಾನಂದ ಮುಂತಾದವರು ಉಪಸ್ಥಿತರಿದ್ದರು.
ಡಾ.ಎನ್.ಕೆ.ರಾಮಶೇಷನ್ ಕನಕದಾಸರ ಕುರಿತು ವಿಶೇಷ ಉಪನ್ಯಾಸ ನೀಡಿದರು. ಉಡುಪಿ ಜಿಲ್ಲಾ ಸಂಘದ ಗೌರವಾಧ್ಯಕ್ಷ ಮೇಟಿ ಮುದಿಯಪ್ಪ ಅತಿಥಿಗಳನ್ನು ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಮಲ್ಪೆಯ ಸರಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಎಸ್.ಜಿ.ಭಾಗವತ್ ಕಾರ್ಯಕ್ರಮ ನಿರೂಪಿಸಿದರು. ಹನುಮಂತ ಐಹೊಳೆ ವಂದಿಸಿದರು.
ಇದಕ್ಕೆ ಮೊದಲು ಉಡುಪಿ ಜೋಡುಕಟ್ಟೆಯಿಂದ ನಗರದ ಪ್ರಮುಖ ರಸ್ತೆಗಳಲ್ಲಿ ಕನಕ ಸದ್ಭಾವನಾ ಜ್ಯೋತಿ ರಥಯಾತ್ರೆಯ ಮೆರವಣಿಗೆ ನಡೆಯಿತು. ಮೆರವಣಿಗೆ ರಥಬೀದಿಗೆ ಬಂದಾಗ, ಪರ್ಯಾಯ ಶ್ರೀಗಳು ರಥಬೀದಿಯಲ್ಲಿರುವ ಕನಕ ಗುಡಿಯಲ್ಲಿರುವ ಕನಕ ಮೂರ್ತಿಗೆ ಆರತಿ ಬೆಳಗಿದರು.