ಕಿರುಕುಳ ವಿರೋಧಿಸಿದ ಮಹಿಳೆಯನ್ನು ಥಳಿಸಿ, ಬೆತ್ತಲೆ ಓಡಿಸಿದರು !
ಹದಗೆಟ್ಟ ಉ.ಪ್ರದೇಶದ ಕಾನೂನು ವ್ಯವಸ್ಥೆ

ಭದೋಹಿ,ಡಿ.30: ತನ್ನನ್ನು ಚುಡಾಯಿಸಿದ್ದನ್ನು ವಿರೋಧಿಸಿದ್ದ ಮಹಿಳೆಯನ್ನು ದುಷ್ಕರ್ಮಿಗಳು ಥಳಿಸಿ,ಬಳಿಕ ಆಕೆಯನ್ನು ವಿವಸ್ತ್ರಗೊಳಿಸಿ ಗ್ರಾಮದಲ್ಲಿ ಓಡುವಂತೆ ಮಾಡಿದ ಹೇಯ ಘಟನೆ ಭದೋಹಿ ಜಿಲ್ಲೆಯ ಗೋಪಾಲಗಂಜ್ ಪ್ರದೇಶದಲ್ಲಿ ಶನಿವಾರ ನಡೆದಿದೆ.
ಘಟನೆಯಲ್ಲಿ ಭಾಗಿಯಾಗಿದ್ದ ನಾಲ್ವರ ವಿರುದ್ಧ ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ಓರ್ವನನ್ನು ಬಂಧಿಸಿದ್ದು,ಉಳಿದವರಿಗಾಗಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಗ್ರಾಮದ ಲಾಲಚಂದ್ರ ಯಾದವ ಎಂಬಾತ ನೇಕಾರ ಸಮುದಾಯದ ಮಹಿಳೆಯೋರ್ವಳನ್ನು ಚುಡಾಯಿಸಿದ್ದ. ಇದನ್ನು ಆಕೆ ಆಕ್ಷೇಪಿಸಿದ್ದಳು. ಸಂಜೆ ತನ್ನ ಮೂವರು ಸಹಚರರೊಂದಿಗೆ ಮಹಿಳೆಯ ಮನೆಗೆ ನುಗ್ಗಿದ್ದ ಯಾದವ ಆಕೆಯನ್ನು ಹಿಗ್ಗಾಮುಗ್ಗಾ ಥಳಿಸಿದ್ದ. ಬಳಿಕ ದುಷ್ಕರ್ಮಿಗಳು ಆಕೆಯನ್ನು ವಿವಸ್ತ್ರಗೊಳಿಸಿ ಗ್ರಾಮದಲ್ಲಿ ಓಡುವಂತೆ ಮಾಡಿದ್ದರು. ಕೆಲವು ಗ್ರಾಮಸ್ಥರು ಘಟನೆಯನ್ನು ತಮ್ಮ ಮೊಬೈಲ್‌ಗಳಲ್ಲಿ ಚಿತ್ರೀಕರಿಸಿದ್ದು, ಅದೀಗ ವೈರಲ್ ಆಗಿದೆ.
ಸಂತ್ರಸ್ತ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಗೋಪಾಲಗಂಜ್ ಠಾಣಾಧಿಕಾರಿಯನ್ನು ಎತ್ತಂಗಡಿ ಮಾಡಲಾಗಿದೆ.





