ಅಭಿಮಾನ್ ಸ್ಟುಡಿಯೋ ಜಾಗದ ಮೇಲಿರುವ ಕೇಸ್ ಇತ್ಯರ್ಥವಾಗಬೇಕಿದೆ: ನಟ ಅನಿರುದ್ಧ್

ಬೆಂಗಳೂರು, ಡಿ.30: ಡಾ.ವಿಷ್ಣುವರ್ಧನ್ ಸ್ಮಾರಕ ನಿರ್ಮಾಣದ ಬಗ್ಗೆ ಸಕಾರತ್ಮಕ ಪ್ರತಿಕ್ರಿಯೆ ಬಂದಿದೆ ಎಂದು ವಿಷ್ಣುವರ್ಧನ್ ಅಳಿಯ ನಟ ಅನಿರುದ್ಧ್ ಹೇಳಿದ್ದಾರೆ.
ರವಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈಸೂರಿನ ಜಾಗ ಸರಕಾರಕ್ಕೆ ಸೇರಬೇಕು. ಹೀಗಾಗಿ, ಸ್ಮಾರಕ ನಿರ್ಮಾಣದ ಬಗ್ಗೆ ಅಧಿಕಾರಿಗಳು ಚರ್ಚಿಸಿದ್ದಾರೆ. ಸ್ಮಾರಕ ನಿರ್ಮಾಣಕ್ಕೆ ಡಿಸೆಂಬರ್ 30 ಡೆಡ್ ಲೈನ್ ಇತ್ತು. ಕ್ರಿಸ್ಮಸ್ ರಜೆ ಇರುವುದರಿಂದ ತಡ ವಾಗುತ್ತಿದೆ. ಹೀಗಾಗಿ, ಜನವರಿಯಲ್ಲಿ ಈ ವಿಷಯವನ್ನ ಸರಿಪಡಿಸೋದಾಗಿ ತಿಳಿಸಿದ್ದಾರೆ ಎಂದರು.
ಅಭಿಮಾನ್ ಸ್ಟುಡಿಯೋದ ಸಮಾಧಿ ಹಾಗೇ ಇರುತ್ತೆ. ಮೈಸೂರಲ್ಲಿ ಸ್ಮಾರಕ ಆಗುತ್ತೆ ಅಷ್ಟೇ. ಸ್ಥಳಾಂತರ ಅಲ್ಲ ಎಂದು ಸ್ಪಷ್ಟಪಡಿಸಿದರು. ಬಾಲಣ್ಣ ಕುಟುಂಬದವರೊಂದಿಗೆ ಮಾತಾಡಿ ಈ ಎಲ್ಲ ಸಮಸ್ಯೆಗಳನ್ನು ಬಗೆ ಹರಿಸಲು ಪಯತ್ನಿಸಲಾಗುವುದು ಎಂದರು. ಯಾಕೆಂದರೆ ಅಭಿಮಾನ್ ಸ್ಟುಡಿಯೋದ ಜಾಗದ ಮೇಲೆ ಕೇಸ್ ಇದ್ದು, ಇವೆಲ್ಲವೂ ಇತ್ಯರ್ಥ ಆಗಬೇಕು. 2009ರಲ್ಲಿ 2 ಎಕರೆ ಜಾಗಕ್ಕೆ 2 ಕೋಟಿ ರೂಪಾಯಿ ಹಣ ಮಂಜೂರು ಮಾಡಲು ನಿರ್ಧರಿಸಿತ್ತು. ಆದರೆ, ಮಂಜೂರು ಮಾಡಿರಲಿಲ್ಲ. ಈಗ ಆ ಹಣವನ್ನು ಮಂಜೂರು ಮಾಡುತ್ತಾ ಎನ್ನುವುದನ್ನು ಸರಕಾರದ ಬಳಿ ಕೇಳಬೇಕಾಗಿದೆ. ಸಮಾಧಿಗೆ 2 ಗುಂಟೆ ಜಾಗ ಈಗಾಗಲೇ ಇದೆ. ಆದರೆ, ಸ್ಮಾರಕ ನಿರ್ಮಾಣಕ್ಕೆ ಇಲ್ಲ. ಹೀಗಾಗಿ, ಮೈಸೂರಿನಲ್ಲಿ ಸ್ಮಾರಕ ನಿರ್ಮಾಣ ಮಾಡಲು ನಾವು ನಿಧರಿರ್ಸಿದ್ದೇವೆ ಎಂದು ತಿಳಿಸಿದರು.







