ಡಿಸ್ನಿಲ್ಯಾಂಡ್ ಮಾದರಿ ಯೋಜನೆ ಕೈಬಿಡಲು ಒತ್ತಾಯ: ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಗೆ ಮನವಿ
ಮಂಡ್ಯ, ಡಿ.30: ಕೆಆರ್‍ಎಸ್ ಜಲಾಶಯ ವ್ಯಾಪ್ತಿಯಲ್ಲಿ ಉದ್ದೇಶಿತ ಡಿಸ್ನಿಲ್ಯಾಂಡ್ ಮಾದರಿ ಯೋಜನೆ ಹಾಗೂ 125 ಅಡಿ ಎತ್ತರ ಬೃಹತ್ ಕಾವೇರಿ ಮಾತೆ ನಿರ್ಮಾಣ ಮಾಡಬಾರದೆಂದು ಆರ್‍ಟಿಐ ಕಾರ್ಯಕರ್ತರೊಬ್ಬರು ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ಅವರನ್ನು ಒತ್ತಾಯಿಸಿದ್ದಾರೆ.
ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವಾಲಯ ಹೊರಡಿಸಿರುವ ಗೆಟೆಡ್ ನೊಟಿಫಿಕೇಷನ್ ಪ್ರಕಾರ ಸದರಿ ಕೆಆರ್‍ಎಸ್ ವ್ಯಾಪ್ತಿಯ ಪ್ರದೇಶ ವನ್ಯಜೀವಿ ಮತ್ತು ಸೂಕ್ಷ್ಮ ಪರಿಸರ ವಲಯ ವ್ಯಾಪ್ತಿಗೆ ಬರುವುದರಿಂದ ಉದ್ದೇಶಿತ ಯೋಜನೆ ಕಾನೂನು ಬಾಹಿರ ಎಂದು ಅರ್‍ಟಿಐ ಕಾರ್ಯಕರ್ತ ಕೆ.ಆರ್.ರವೀಂದ್ರ ಆರೋಪಿಸಿದ್ದಾರೆ.
ಈ ಸಂಬಂಧ ವಿವರವಾದ ಮನವಿಪತ್ರವನ್ನು ಮುಖ್ಯ ಕಾರ್ಯದರ್ಶಿ ಹಾಗೂ ಸಂಬಂಧಿಸಿದ ಇತರೆ ಅಧಿಕಾರಿಗಳಿಗೆ ನೀಡಿರುವ ರವೀಂದ್ರ, ಕಾವೇರಿ ಪ್ರತಿಮೆ ನಿರ್ಮಾಣ ಹಾಗೂ ಡಿಸ್ನಿಲ್ಯಾಂಡ್ ಮಾದರಿ ಯೋಜನೆಗೆ ವನ್ಯಜೀವಿ ಪ್ರದೇಶದ 2804.61 ಹೆಕ್ಟೇರ್ ಜಮೀನು ಒಳಪಡಲಿದೆ ಎಂದು ಹೇಳಿದ್ದಾರೆ.
ಡಿಸ್ನಿಲ್ಯಾಂಡ್ ಯೋಜನೆಗೆ ಬೇಕಾಗಿರುವ ಜಮೀನು ರಂಗನತಿಟ್ಟು ಪಕ್ಷಿಧಾಮದ ಜೊತೆಯಲ್ಲಿ ದೇವರಾಜ, ಯಡತಿಟ್ಟು, ಪುಟ್ಟಯ್ಯನಕೊಪ್ಪಲು, ಗೆಂಡೆಹೊಸಹಳ್ಳಿ ಮತ್ತು ಅರಕೆರೆ ಐಲ್ಯಾಂಡ್ ಸೇರಿದಂತೆ ಈ ಪಕ್ಷಿಧಾಮದ ವ್ಯಾಪ್ತಿಯ 26 ಗ್ರಾಮಗಳು ವನ್ಯಜೀವಿ ವಲಯ ವ್ಯಾಪ್ತಿಗೆ ಸೇರಿರುತ್ತದೆ. ಅಲ್ಲದೆ, ಕೆ.ಆರ್.ಎಸ್. ಬೃಂದಾವನ ಗಾರ್ಡನ್‍ಗೆ ಹೊಂದಿಕೊಂಡಂತಿರುವ ಪಾಂಡವಪುರ ಮತ್ತು ಶ್ರೀರಂಗಪಟ್ಟಣ ತಾಲೂಕಿಗೆ ಸೇರಿದ ಗ್ರಾಮಗಳಾದ ಪುಟ್ಟಿಕೊಪ್ಪಲು, ಚೆಲುವರಿಸಿನಕೊಪ್ಪಲು, ಅಗ್ರಹಾರ, ಅರಳಕುಪ್ಪೆ, ಕರಿಮಂಟಿ, ಪಾಲಹಳ್ಳಿ, ಬೆಳಗೊಳ, ಕಾರೇಪುರ, ಕೆಂಪಲಿಂಗಾಪುರ, ಚಿಕ್ಕಯಾರಹಳ್ಳಿ, ಕಟ್ಟೇರಿ ನಾಡ, ಹೊಂಗಳ್ಳಿ, ಯಡತಿಟ್ಟು, ಬಲಮುರಿ, ದುದ್ದಘಟ್ಟ ಪ್ರದೇಶವೂ ವನ್ಯಜೀವಿ ವಲಯಕ್ಕೆ ಸೇರಿವೆ.
ಉದ್ದೇಶಿತ ಡಿಸ್ನಿಲ್ಯಾಂಡ್ ಯೋಜನೆಯಿಂದ ದೇವರಾಜ ಪಕ್ಷಿಧಾಮ, ಇತರ ಸಣ್ಣದ್ವೀಪಗಳಲ್ಲಿರುವ ಪಕ್ಷಿಧಾಮಗಳು ಸಂಪೂರ್ಣ ನಾಶವಾಗಲಿವೆ. ರಂಗನತಿಟ್ಟು ಪಕ್ಷಿಧಾಮಕ್ಕೆ ಧಕ್ಕೆಯಾಗಲಿದೆ. ಇದು ಸುಪ್ರೀಂಕೋರ್ಟ್‍ನ ಆದೇಶಕ್ಕೆ ವ್ಯತಿರಿಕ್ತವಾಗಿರುತ್ತದೆ. ಅಲ್ಲದೇ ರಾಜ್ಯ ಸರಕಾರದ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಬಹುದಾಗಿರುತ್ತದೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.
ಗೆಜೆಟ್ ನೋಟಿಫಿಕೇಷನ್‍ನಂತೆ ಗಣಿಗಾರಿಕೆ, ಕೈಗಾರಿಕೆ, ಕಿರು ಜಲವಿದ್ಯುತ್ ಯೋಜನೆ, ಕೋಳಿ ಫಾರಂ, ಇಟ್ಟಿಗೆ ಕಾರ್ಖಾನೆ, ಮರ ಸಾಮಿಲ್‍ಗಳನ್ನು ನಡೆಸುವ ಬಗ್ಗೆ ನಿಷೇಧವಿದ್ದರೂ ಕೂಡ ಗಣಿಗಾರಿಕೆ, ಕೈಗಾರಿಕೆ, ಕೋಳಿ ಫಾರಂ, ಇಟ್ಟಿಗೆ ಕಾರ್ಖಾನೆ ನಡೆಯುತ್ತಿವೆ. ಕಿರು ಜಲವಿದ್ಯುತ್ ಯೋಜನೆ ಪ್ರಾರಂಭಿಸಲಾಗಿದೆ. ಹೊಟೇಲ್ ಮತ್ತು ರೆಸಾರ್ಟ್‍ಗಳಿಗೆ ಕಾನೂನುಬಾಹಿರ ಅನುಮತಿ ನೀಡಲಾಗಿದೆ ಎಂದು ಅವರು ದೂರಿದ್ದಾರೆ.
ಅರಣ್ಯ ಸಂರಕ್ಷಣಾ ಕಾಯ್ದೆ 1980, ವನ್ಯಜೀವಿ ಸಂರಕ್ಷಣಾ ಕಾಯ್ದೆ 1972, ಪರಿಸರ ಸಂರಕ್ಷಣಾ ಕಾಯ್ದೆ 1986, ಜಲ ಸಂರಕ್ಷಣಾ ಕಾಯ್ದೆ ಮತ್ತು ಇತರೆ ಕೇಂದ್ರ ಹಾಗೂ ರಾಜ್ಯ ಸರಕಾರದ ಕಾಯ್ದೆ, ಸುಪ್ರೀಂ ಕೋರ್ಟ್‍ನ ಆದೇಶಕ್ಕೆ ಒಳಪಡುವುದರಿಂದ ಉದ್ದೇಶಿತ ಡಿಸ್ನಿಲ್ಯಾಂಡ್ ಮಾದರಿ ಯೋಜನೆಯನ್ನು ಕೈಬಿಡಬೇಕು ಹಾಗೂ ಉಲ್ಲೇಖದ ಗೆಜೆಟ್ ನೋಟಿಫಿಕೇಷನ್‍ನಲ್ಲಿರುವ ನಿಯಮಗಳನ್ನು ಪಾಲಿಸದ ಸಂಬಂಧಪಟ್ಟ ಅಧಿಕಾರಿ, ಸಿಬ್ಬಂದಿ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.







