ಹಿರಿಯ ಪತ್ರಕರ್ತ, ಸಂಗೀತ ವಿಮರ್ಶಕ ಎ.ಈಶ್ವರಯ್ಯ ನಿಧನ

ಉಡುಪಿ, ಡಿ.30: ಸಂಗೀತ ಹಾಗೂ ಛಾಯಾಗ್ರಹಣದ ಕುರಿತಂತೆ ಅಧಿಕಾರಯುತವಾಗಿ ಮಾತನಾಡಬಲ್ಲ, ಲಲಿತಕಲೆಗಳ ವಿಮರ್ಶೆಯಲ್ಲಿ ಹೊಸ ಛಾಪು ಮೂಡಿಸಿದ ಹಿರಿಯ ಪತ್ರಕರ್ತ ಎ. ಈಶ್ವರಯ್ಯ ಇಂದು ಬೆಳಗ್ಗೆ ಉಡುಪಿಯ ಲಕ್ಷ್ಮೀಂದ್ರನಗರದಲ್ಲಿರುವ ತಮ್ಮ ಸ್ವಗೃಹದಲ್ಲಿ ನಿಧನರಾದರು.
ಅನಂತಪುರ ಈಶ್ವರಯ್ಯ ಅವರಿಗೆ 78 ವರ್ಷ ಪ್ರಾಯವಾಗಿತ್ತು. ಅವರು ಪತ್ನಿ, ಪುತ್ರ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ಸಾಹಿತ್ಯ ಮಾಸಿಕ ‘ತುಷಾರ’ದ ಸಂಪಾದಕರಾಗಿ ಎರಡು ದಶಕಗಳಿಗೂ ಅಧಿಕ ಕಾಲ ಕಾರ್ಯನಿರ್ವಹಿಸಿದ್ದ ಅವರು ತನ್ನ ಪತ್ರಿಕೆಯ ಮೂಲಕ ನಾಡಿನ ನೂರಾರು ಯುವ, ಪ್ರತಿಭಾನ್ವಿತ ಬರಹಗಾರರು, ಸಾಹಿತಿಗಳನ್ನು ಬೆಳಕಿಗೆ ತಂದಿದ್ದರು. ಅಲ್ಲದೇ ನಾಡಿನ ಪ್ರಸಿದ್ಧ ಕಾದಂಬರಿಗಳು, ಸಣ್ಣ ಕಥೆಗಳು, ಕವನಗಳನ್ನು ‘ತುಷಾರ’ದ ಮೂಲಕವೇ ಅವರು ಮೊದಲು ಬೆಳಕಿಗೆ ತಂದಿದ್ದರು. ಪೂರ್ಣಚಂದ್ರ ತೇಜಸ್ವಿ ಅವರ ‘ಕರ್ವಾಲೊ’ ಇದಕ್ಕೊಂದು ಉತ್ತಮ ನಿದರ್ಶನ.
ಅಲ್ಲದೇ ತಮ್ಮ ಪತ್ರಿಕೆಯ ಮೂಲಕ ಕಲಾತ್ಮಕ ಛಾಯಾಚಿತ್ರಗಳಿಗೂ ವಿಶೇಷ ಅವಕಾಶ ನೀಡುತಿದ್ದ ಅವರು, ಚಿತ್ರ-ಲೇಖನವೆಂಬ ಪ್ರಕಾರಕ್ಕೂ ವಿಶೇಷ ಅವಕಾಶ ಕಲ್ಪಿಸುತಿದ್ದರು. ಇದರಿಂದ ತೇಜಸ್ವಿಯವರ ಛಾಯಾಗ್ರಹಣದ ಪ್ರತಿಭೆಯೂ ಹೊರಹೊಮ್ಮಲು ಸಾಧ್ಯವಾಗಿತ್ತು.
ಛಾಯಾಗ್ರಹಣದ ಬಗ್ಗೆ ವಿಶೇಷ ಜ್ಞಾನವನ್ನು ಹೊಂದಿದ್ದ ಅವರು, ಈ ಕುರಿತು ಅಂಕಣವನ್ನೂ ಬರೆಯುತಿದ್ದರು. ಆದರೆ ಡಿಜಿಟಲ್ ಕೆಮರಾ ಹಾಗೂ ಮೊಬೈಲ್ ಕೆಮರಾಗಳ ಬಳಕೆ ಹೆಚ್ಚಾದ ಬಳಿಕ ನಿಜವಾದ ಪೋಟೊಗ್ರಫಿಯ ಚಂದ (ಅದರಲ್ಲೂ ಕಪ್ಪು-ಬಿಳುಪು), ಕಲಾತ್ಮಕತೆ ಕಣ್ಮರೆಯಾಯಿತು ಎಂಬ ಕೊರಗು ಅವರಿಗಿತ್ತು.
ಕಾಸರಗೋಡು ಜಿಲ್ಲೆಯ ಕುಂಬಳೆಯ ಅನಂತಪುರದ ಜಮೀನುದಾರ ಹಾಗೂ ಪಟೇಲರಾಗಿದ್ದ ಅನಂತಪುರ ನಾರಾಯಣಯ್ಯ ಅವರು ಪುತ್ರರಾಗಿ 1940ರ ಆ.12ರಂದು ಜನಿಸಿದ ಅವರು ಉಡುಪಿ ಎಂಜಿಎಂ ಕಾಲೇಜಿನಲ್ಲಿ ಆಂಗ್ಲ ಭಾಷೆಯಲ್ಲಿ ಪದವಿ ಪಡೆದ ಬಳಿಕ ನೇರವಾಗಿ ಪ್ರವೇಶಿಸಿದ್ದು ಪತ್ರಿಕೋದ್ಯಮವನ್ನು. ಅದರಲ್ಲೇ ನಿವೃತ್ತಿಯವರೆಗೂ ದುಡಿದು, ಸಂಪಾದಕರಾಗಿ ನಾಡಿನ ವಿಶೇಷ ಗೌರವಕ್ಕೆ ಪಾತ್ರರಾಗಿದ್ದರು.
ಪ್ರಾಥಮಿಕ ವಿದ್ಯಾಭ್ಯಾಸದ ಕಾಲದಲ್ಲಿಯೇ ಸಂಗೀತಾಭ್ಯಾಸವನ್ನು ಮಾಡಿದ್ದ ಅವರು ಕೊಳಲು ಸೇರಿದಂತೆ ಹಲವು ವಾದ್ಯಗಳನ್ನು ನುಡಿಸಬಲ್ಲವರಾಗಿದ್ದರು. ಅವರು ಬಹುಮುಖ ಪ್ರತಿಭೆಯವರಾಗಿದ್ದರು. ಪತ್ರಕರ್ತರಾಗಿ ಸಂಗೀತ, ಯಕ್ಷಗಾನ, ಲಲಿತಕಲಾರಂಗಗಳಿಗೆ ವಿಶೇಷ ಆದ್ಯತೆ ನೀಡುತಿದ್ದ ಅವರು ಒಳ್ಳೆಯ ಛಾಯಾಗ್ರಾಹಕರೂ ಆಗಿದ್ದರು. ಲೇಖಕರಾಗಿ, ಕಥೆಗಾರರಾಗಿ ಖ್ಯಾತಿ ಪಡೆದಷ್ಟೇ, ವಿಮರ್ಶೆಯಲ್ಲೂ ಅಷ್ಟೇ ಪರಿಣಿತಿಯನ್ನು ಪಡೆದಿದ್ದರು. ತುಷಾರದಲ್ಲಿ ಅವರು ಬರೆಯುತಿದ್ದ ‘ಸರಸ’ ಲಲಿತ ಪ್ರಬಂಧಗಳ ಅಂಕಣ ಭಾರೀ ಜನಪ್ರಿಯತೆಯನ್ನು ಪಡೆದಿದ್ದು, ಪುಸ್ತಕ ರೂಪದಲ್ಲೂ ಹೊರ ಬಂದಿತ್ತು.
ಸಂಗೀತ ಪ್ರೇಮಿಯಾಗಿ ಉಡುಪಿಯಲ್ಲಿ ‘ರಾಗಧ್ವನಿ’ ಸಂಸ್ಥೆ ಹುಟ್ಟುಹಾಕಿದ್ದ ಅವರು, ಒಂದು ಸಂಗೀತ ಮಾಸಿಕದ ಸಂಪಾದಕರಾಗಿಯೂ ಕಾರ್ಯ ನಿರ್ವಹಿಸಿದ್ದರು. ಅವರಿಗೆ ಕರ್ನಾಟಕ ರಾಜ್ಯ ಪತ್ರಿಕಾ ಅಕಾಡೆಮಿ ಪ್ರಶಸ್ತಿ, ಮಂಗಳೂರಿನ ರಾಜ್ಯಮಟ್ಟದ ಸಂದೇಶ ಪ್ರಶಸ್ತಿ, ಪೊಲ್ಯ ಯಕ್ಷಗಾನ ಪ್ರಶಸ್ತಿ, ವ್ಯಾಸ ಸಾಹಿತ್ಯ ಪ್ರಶಸ್ತಿ, ಮೂಡಬಿದರೆಯ ನುಡಿಸಿರಿ ಪ್ರಶಸ್ತಿಗಳು ಅವರನ್ನು ಅರಸಿ ಬಂದಿದ್ದವು.
ಯುವ ಬರಹಗಾರರು, ಸಾಹಿತಿಗಳು ಹಾಗೂ ಯುವ ಛಾಯಾಗ್ರಾಹಕರಿಗೆ ಸದಾ ಬೆಂಬಲವಾಗಿ ನಿಲ್ಲುತಿದ್ದ ಅವರು ನಿಷ್ಟುರವಾದ ನೇರನಡೆ ನುಡಿಗಳಿಗೂ ಹೆಸರಾಗಿದ್ದರು. ಅವರು ಅಂತ್ಯಕ್ರಿಯೆ ಸೋಮವಾರ ಬೆಳಗ್ಗೆ ನಡೆಯಲಿವೆ ಎಂದು ಆಪ್ತ ಮೂಲಗಳು ತಿಳಿಸಿವೆ.







