ಆರ್ಥಿಕ ಸಬಲೀಕರಣದಿಂದ ಪ್ರವಾಸೋದ್ಯಮ ಅಭಿವೃದ್ಧಿ: ಸಚಿವ ಖಾದರ್
ಕರಾವಳಿ ಉತ್ಸವ ಸಮಾರೋಪ

ಪ್ರೊ. ಹಿಲ್ಡಾ ರಾಯಪ್ಪನ್‌ಗೆ ಕರಾವಳಿ ಗೌರವ ಪ್ರಶಸ್ತಿ ಪ್ರದಾನ
ಮಂಗಳೂರು, ಡಿ.30: ಕರಾವಳಿ ಪ್ರದೇಶದಲ್ಲಿನ ಬೀಚ್‌ಗಳನ್ನು ಜನತೆ ಸದುಪಯೋಗಪಡಿಸಿಕೊಳ್ಳಬೇಕು. ಆರ್ಥಿಕ ಚಲಾವಣೆ ಮತ್ತು ಆರ್ಥಿಕ ಸಬಲೀಕರಣ ದಿಂದ ಪ್ರವಾಸೋದ್ಯಮ ಬೆಳೆಯಲಿದೆ ಎಂದು ನಗರಾಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ತಿಳಿಸಿದರು.
ನಗರದ ಪಣಂಬೂರು ಬೀಚ್‌ನಲ್ಲಿ ರವಿವಾರ ನಡೆದ ಕರಾವಳಿ ಉತ್ಸವ-ಪಣಂಬೂರು ಬೀಚ್ ಉತ್ಸವಗಳ ಸಮಾರೋಪ ಸಮಾರಂಭದಲ್ಲಿ ಪ್ರೊ. ಹಿಲ್ಡಾ ರಾಯಪ್ಪನ್ ಅವರಿಗೆ ಕರಾವಳಿ ಗೌರವ ಪ್ರಶಸ್ತಿ ನೀಡಿ ನಂತರ ಖಾದರ್ ಮಾತನಾಡಿದರು.
ನೆರೆಯ ಗೋವಾ, ಕೇರಳದಲ್ಲಿ ಬೆರಳೆಣಿಕೆಯಷ್ಟೇ ಬೀಚ್‌ಗಳಿವೆ. ಅವುಗಳಿಂದಲೇ ಆ ರಾಜ್ಯಗಳಿಗೆ ಸಂಪತ್ತು ಹರಿದುಬರುತ್ತಿವೆ. ಕರಾವಳಿ ಪ್ರದೇಶದಲ್ಲೂ ಹಲವಾರು ಬೀಚ್‌ಗಳಿವೆ. ಕೇವಲ ಬೀಚ್‌ಗಳ ಸದುಪಯೋಗದಿಂದಲೇ ನಮ್ಮ ಕರಾವಳಿಯೂ ಅಭಿವೃದ್ಧಿ ಹೊಂದಲಿದೆ. ಇದಕ್ಕೆ ಕರಾವಳಿ ಜನತೆ ಬಂಡವಾಳ ವನ್ನು ಹೂಡಬೇಕು. ಆರ್ಥಿಕ ಸಬಲತೆಯಿಂದ ಸದೃಢತೆ ಹೊಂದಲು ಸಾಧ್ಯವಾಗಲಿದೆ ಎಂದು ಹೇಳಿದರು.
ಕೇರಳ, ಗೋವಾದಲ್ಲಿನ ಬೀಚ್‌ಗಳಿಗಿಂತ ನಮ್ಮ ಕರಾವಳಿಯಲ್ಲಿ ನಾಲ್ಕು ಪಟ್ಟು ಬೀಚ್‌ಗಳಿವೆ. ಧಾರ್ಮಿಕ ಕೇಂದ್ರಗಳು, ಪ್ರವಾಸಿತಾಣಗಳನ್ನು ಹೊಂದಿದೆ. ಆದರೂ ಕೆಲವೊಂದು ವಿಚಾರಗಳಲ್ಲಿ ದ.ಕ. ಜಿಲ್ಲೆ ಹಿಂದುಳಿದಿದೆ. ಇಂಥಹ ಲೋಪದೋಷಗಳನ್ನು ಸರಿಪಡಿಸಿಕೊಂಡು ಮುಂದಿನ ದಿನಗಳಲ್ಲಿ ಅಭಿವೃದ್ಧಿಯತ್ತ ಹೆಜ್ಜೆ ಹಾಕೋಣ. ಕರಾವಳಿ ಸಂಸ್ಕೃತಿ, ಆಚಾರ-ವಿಚಾರ ಪ್ರತಿಬಿಂಬಿಸಲು ಕರಾವಳಿ ಉತ್ಸವವನ್ನು ಕೈಗೊಳ್ಳಲಾಗಿತ್ತು. ಪ್ರತಿಯೊಂದು ಉತ್ಸವಗಳ ಸಂದೇಶವು ಪ್ರೀತಿ, ವಿಶ್ವಾಸ, ಪರಸ್ಪರ ಬೆರೆತುಕೊಂಡು ಸೌಹಾರ್ದದಿಂದ ಬಾಳುವುದಾಗಿದೆ ಎಂದರು.
ಅಹಿತಕರ ಘಟನೆಯಿಂದ ಕಂಗೆಟ್ಟ ಕರಾವಳಿ
ಕರಾವಳಿ ಗೌರವ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಪ್ರಜ್ಞಾ ಸಲಹಾ ಕೇಂದ್ರದ ನಿರ್ದೇಶಕಿ ಪ್ರೊ. ಹಿಲ್ಡಾ ರಾಯಪ್ಪನ್, ಕರಾವಳಿಯಲ್ಲಿ ಇತ್ತೀಚೆಗೆ ನಡೆದ ಕೆಲವು ಅಹಿತಕರ ಘಟನೆಗಳಿಂದ ಕರಾವಳಿ ಜನತೆ ಕಂಗೆಟ್ಟಿದೆ. ಜಿಲ್ಲೆಯಲ್ಲಿ ಆಕ್ರಮಣ ಮತ್ತು ಆಕ್ರೋಶ ಶಾಶ್ವತವಲ್ಲ. ಆಕ್ರಮಣದಿಂದ ಕರಾವಳಿಯಲ್ಲಿ ಬದುಕಲಾಗುವುದಿಲ್ಲ. ಎಲ್ಲರೂ ಸೌಹಾರ್ದದಿಂದ ಬಾಳಬೇಕು ಎಂದು ಕರೆ ನೀಡಿದರು.
ಪ್ರಜ್ಞಾ ಸಲಹಾ ಕೇಂದ್ರದ ನಿರ್ದೇಶಕಿ ಪ್ರೊ. ಹಿಲ್ಡಾ ರಾಯಪ್ಪನ್ ಅವರಿಗೆ ಸಚಿವ ಯು.ಟಿ.ಖಾದರ್ ಕರಾವಳಿ ಗೌರವ ಪ್ರಶಸ್ತಿ, ಸ್ಮರಣಿಕೆ ನೀಡಿ ಗೌರವಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್, ಅಪರ ಜಿಲ್ಲಾಧಿಕಾರಿ ಕುಮಾರ್, ಪಣಂಬೂರು ಬೀಚ್ ಸಮಿತಿ ಅಧ್ಯಕ್ಷ ಹಾಗೂ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಶ್ರೀಕಾಂತ್ ರಾವ್ ಉಪಸ್ಥಿತರಿದ್ದರು.
ಜ.12-13ರಂದು ನದಿ ಉತ್ಸವ
ಕರಾವಳಿ ಜಿಲ್ಲೆಗಳಲ್ಲಿ ಹೋಸ್ಟೇಗಳನ್ನು ಆರಂಭಿಸಬಹುದಾಗಿದೆ. ಇದರಿಂದಾಗಿ ಹಲವಾರಿ ಜನರಿಗೆ ಉದ್ಯೋಗಾವಕಾಶ ಕಲ್ಪಿಸಿದಂತಗಲಿದೆ. ಜೊತೆಗೆ ಪ್ರವಾಸೋದ್ಯಮಕ್ಕೂ ಸಹಕಾರಿಯಾಗಲಿದೆ. ಇಂತಹ ಎಲ್ಲ ಅವಕಾಶಗಳನ್ನು ಒದಗಿಸಲು ಜಿಲ್ಲಾಡಳಿತ ಸಿದ್ಧತೆ ಮಾಡಿಕೊಂಡಿದೆ. ಇದಕ್ಕೆ ಅನುಗುಣವಾಗಿ ಜ.12 ಮತ್ತು 13ರಂದು ನದಿ ಬದಿಯಲ್ಲಿ ಬೆಂಗ್ರೆ-ಕೂಳೂರು ಪ್ರದೇಶದಲ್ಲಿ ‘ನದಿ ಉತ್ಸವ’ವನ್ನು ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ ಎಂದು ನಗರಾಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ತಿಳಿಸಿದರು.
ಫೆಬ್ರವರಿಯಲ್ಲಿ ಅಬ್ಬಕ್ಕ ಉತ್ಸವ-ಉಳ್ಳಾಲ ಬೀಚ್ ಉತ್ಸವ
ಬೆಂಗ್ರೆ-ಕೂಳೂರು ಪ್ರದೇಶದಲ್ಲಿ ನದಿ ಉತ್ಸವ ಹಮ್ಮಿಕೊಂಡ ಬಳಿಕ ಫೆಬ್ರವರಿ ಮೊದಲ ವಾರದಲ್ಲಿ ಅಬ್ಬಕ್ಕ ಉತ್ಸವ ಹಾಗೂ ಉಳ್ಳಾಲ ಬೀಚ್ ಉತ್ಸವ ಗಳನ್ನು ಜಂಟಿಯಾಗಿ ಆಯೋಜಿಸುವುದಾಗಿ ಜಿಲ್ಲಾಡಳಿತದಿಂದ ತೀರ್ಮಾನಿಸಲಾಗಿದೆ. ಶೀಘ್ರದಲ್ಲಿಯೇ ಇದಕ್ಕೆ ಅನುಗುಣವಾಗಿ ಜಿಲ್ಲಾಡಳಿತ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಿದೆ ಎಂದು ನಗರಾಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಹೇಳಿದರು.
ಗಮನ ಸೆಳೆದ ಸೌಹಾರ್ದ ಸಾರುವ ಮರಳು ಶಿಲ್ಪ ಕಲಾಕೃತಿ
ಕರಾವಳಿ ಉತ್ಸವದ ಅಂಗವಾಗಿ ಪಣಂಬೂರು ಕಡಲ ಕಿನಾರೆಯಲ್ಲಿ ನಡೆದ ಬೀಚ್ ಉತ್ಸವದಲ್ಲಿ ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಬ್ರಾಂಡ್ ಮಂಗಳೂರು ಪರಿಕಲ್ಪನೆಯ ಕೋಮು ಸೌಹಾರ್ದ ಸಾರುವ ಮರಳು ಶಿಲ್ಪ ಕಲಾಕೃತಿ ಗಮನ ಸೆಳೆಯುತ್ತಿದೆ.
ಸಂದೇಶ ಮಡಪಾಡಿ ರವಿ ಹಿರೇಬೆಟ್ಟು ಹಾಗೂ ಪುರಂದರ ತೊಟ್ಟಮ್ ಮೂರು ಮಂದಿ ಕಲಾವಿದರು ಈ ಮರಳಿನ ಕಲಾಕೃತಿ ರಚಿಸಿದ್ದಾರೆ. ಈ ಮರಳು ಶಿಲ್ಪ ರಚನೆಗೆ 6 ಗಂಟೆ ತಗಲಿದೆ. ಕಲಾವಿದ ದಿನೇಶ್ ಹೊಳ್ಳ ಅವರ ಪರಿಕಲ್ಪನೆ ಹಾಗೂ ಮಾರ್ಗದರ್ಶನದಲ್ಲಿ ಇದನ್ನು ರಚಿಸಲಾಗಿದೆ. ಮಂಗಳೂರು ನಗರ ಪೊಲೀಸ್, ದ.ಕ. ಜಿಲ್ಲಾಡಳಿತ ಹಾಗೂ ಬೀಚ್ ಉತ್ಸವ ಸಮಿತಿ ಸಹಭಾಗಿತ್ವ ನೀಡಿದೆ.