ಫಿಲಿಪ್ಪೀನ್ಸ್: ಚಂಡಮಾರುತದ ಅಬ್ಬರಕ್ಕೆ 22 ಬಲಿ
ಹಲವು ಗ್ರಾಮಗಳು ಜಲಾವೃತ, ಭೂಕುಸಿತ

ಮನಿಲಾ,ಡಿ.30: ಮಧ್ಯ ಫಿಲಿಪ್ಪೀನ್ಸ್‌ನ ದ್ವೀಪಸ್ತೋಮಕ್ಕೆ ಅಪ್ಪಳಿಸಿದ ಭೀಕರ ಚಂಡಮಾರುತಕ್ಕೆ ಕನಿಷ್ಠ 22 ಮಂದಿ ಬಲಿಯಾಗಿದ್ದಾರೆ ಹಾಗೂ ಪ್ರವಾಹಪೀಡಿತ ಪ್ರದೇಶಗಳಲ್ಲಿ ಸಿಕ್ಕಿಹಾಕಿಕೊಂಡಿರುವ ಸಂತ್ರಸ್ತರನ್ನು ಪಾರು ಮಾಡಲು ರಕ್ಷಣಾ ಕಾರ್ಯಾಚರಣೆಗಳು ಭರದಿಂದ ನಡೆಯುತ್ತಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಮಧ್ಯ ಫಿಲಿಪ್ಪೀನ್ಸ್‌ನ ಬೈಕೊಲ್ ಹಾಗೂ ಪೂರ್ವ ವಿಸಯಾಸ್ ಪ್ರಾಂತದಲ್ಲಿ ಶನಿವಾರವಿಡೀ ಭಾರೀ ಮಳೆ ಸುರಿದಿದ್ದು, ಹಲವು ಗ್ರಾಮಗಳು ಜಲಾವೃತ ಗೊಂಡಿವೆ ಹಾಗೂ ಭೂಕುಸಿತದ ಘಟನೆಗಳು ವ್ಯಾಪಕವಾಗಿ ವರದಿ ಯಾಗಿವೆಯೆಂದು ಪೌರ ರಕ್ಷಣೆಗಾಗಿನ ಸರಕಾರಿ ಕಾರ್ಯಾಲಯ ತಿಳಿಸಿದೆ.
ಬಹುತೇಕ ಸಾವುಗಳು ಪ್ರವಾಹ ಹಾಗೂ ಭೂಕುಸಿತದಿಂದ ಉಂಟಾಗಿ ರುವುದಾಗಿ ಅದು ಹೇಳಿದೆ. ಉಸ್ಮಾನ್ ಎಂದು ಹೆಸರಿಡಲಾದ ಈ ಚಂಡ ಮಾರುತವು ಇದೀಗ ಒತ್ತಡದ ಸಾಗರಪ್ರದೇಶದಲ್ಲಿ ದುರ್ಬಲಗೊಂಡಿರುವುದಾಗಿ ಅಧಿಕೃತ ಮೂಲಗಳು ತಿಳಿಸಿವೆ.
‘‘ಬಹುತೇಕ ನೆರೆಪೀಡಿತ ಪ್ರದೇಶಗಳು ನೀರಿನಡಿ ಮುಳುಗಿವೆ. ಸಂತ್ರಸ್ತ ಕುಟುಂಬಗಳನ್ನು ರಕ್ಷಿಸಲು ನಾವು ಸೈನಿಕರನ್ನು ಹಾಗೂ ರಬ್ಬರ್ ದೋಣಿಗಳನ್ನು ಕಳುಹಿಸುತ್ತಿದ್ದೇವೆ. ಇನ್ನು ಕೆಲವು ಪ್ರದೇಶಗಳಲ್ಲಿ ನೆರೆನೀರು, ಮನೆಗಳ ಛಾವಣಿಯವರೆಗೂ ತಲುಪಿದೆ’’ ಎಂದು ನಾಗರಿಕ ರಕ್ಷಣಾ ಕಾರ್ಯಾಲಯದ ವರಿಷ್ಠ ಕ್ಲೌಡಿಯೊ ಯುಕೊಟ್ ತಿಳಿಸಿದ್ದಾರೆ.
ಬೈಕೊಲ್‌ನಲ್ಲಿ ಕನಿಷ್ಠ 16 ಮಂದಿ ಹಾಗೂ ಪೂರ್ವ ವಿಸಾಯಾಸ್ ಪ್ರಾಂತದಲ್ಲಿ ಆರು ಮಂದಿ ಚಂಡಮಾರುತಕ್ಕೆ ಬಲಿಯಾಗಿದ್ದಾರೆಂದು ಪೌರ ರಕ್ಷಣಾ ಅಧಿಕಾರಿಗಳು ತಿಳಿಸಿದ್ದಾರೆ.
ಚಂಡಮಾರುತ ಅಪ್ಪಳಿಸುವ ಮುನ್ನ ತೀರಪ್ರದೇಶದಲ್ಲಿ ವಾಸಿಸುತ್ತಿದ್ದ 22 ಸಾವಿರಕ್ಕೂ ಅಧಿಕ ಮಂದಿ ಮನೆಗಳನ್ನು ತೊರೆದು ಸುರಕ್ಷಿತ ಸ್ಥಳಗಳಿಗೆ ಪರಾರಿಯಾಗಿದ್ದರು. ಪ್ರವಾಹದಿಂದಾಗಿ ಭತ್ತ ಹಾಗೂ ಜೋಳ ಬೆಳೆ ಗಳು ನಾಶವಾಗಿದ್ದು, ಹಲವು ಗ್ರಾಮಗಳು ರಸ್ತೆ ಹಾಗೂ ಸೇತುವೆ ಸಂಪರ್ಕ ಕಡಿದುಕೊಂಡಿವೆ ಎಂದು ಪ್ರಾಂತೀಯ ವಿಪತ್ತು ನಿರ್ವಹಣಾ ಅಧಿಕಾರಿಗಳು ತಿಳಿಸಿದ್ದಾರೆ. ಮುಂದಿನ 24 ತಾಸುಗಳಲ್ಲಿ ಇನ್ನೂ ಭಾರೀ ಮಳೆಯಾಗಲಿದೆಯೆಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.







