ನೆಹರು ಯುವ ಕೇಂದ್ರದ ಜಿಲ್ಲಾ ಸಮನ್ವಯಾಧಿಕಾರಿಯಾಗಿ ರಘುವೀರ್ ಅಧಿಕಾರ ಸ್ವೀಕಾರ

ಮಂಗಳೂರು, ಡಿ.30: ನೆಹರು ಯುವ ಕೇಂದ್ರದ ದಕ್ಷಿಣ ಕನ್ನಡ ಜಿಲ್ಲಾ ಸಮನ್ವಯಾಧಿಕಾರಿಯಾಗಿ ರಘುವೀರ್ ಸೂಟರ್ ಪೇಟೆ ನೇಮಕಗೊಂಡು ಶನಿವಾರ ಅಧಿಕಾರ ಸ್ವೀಕರಿಸಿದ್ದಾರೆ.
ಮಂಗಳೂರು ನಗರದ ಸೂಟರ್ ಪೇಟೆಯ ನಿವಾಸಿಯಾದ ರಘುವೀರ್ ಮಂಗಳೂರು ವಿಶ್ವ ವಿದ್ಯಾನಿಲಯದ ಪದವೀಧರರಾಗಿದ್ದು, ಎನ್.ಸಿ.ಸಿ ಯಲ್ಲಿ ಅತ್ಯುತ್ತಮ ಸಾಧನೆಗಾಗಿ ಚಿನ್ನದ ಪದಕ ಪಡೆದವರು.
2016ರಲ್ಲಿ ಅಂತಾರಾಷ್ಟ್ರೀಯ ಯುವ ಸಮ್ಮೇಳನದಲ್ಲಿ ಕರ್ನಾಟಕದ ಪ್ರತಿನಿಧಿಯಾಗಿ ಭಾಗವಹಿಸಿದ್ದರು. ಕಳೆದ 10 ವರ್ಷಗಳಿಂದ ಯುವ ಸಂಘಟನಾ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು, 2017-18ರಲ್ಲಿ ಇಂಡೋನೇಷ್ಯಾದಲ್ಲಿ ನಡೆದ ಅಂತಾರಾಷ್ಟ್ರೀಯ ಅಭಿವೃದ್ಧಿ ಕಾರ್ಯಕ್ರಮಗಳ ಸಮ್ಮೇಳನದಲ್ಲಿ ಭಾರತದ ಪ್ರತಿನಿಧಿಯಾಗಿ ಭಾಗವಹಿಸಿದ್ದರು.
ಜಿಲ್ಲಾ ನೆಹರು ಯುವ ಕೇಂದ್ರವನ್ನು ಬಲಪಡಿಸುವುದರ ಜೊತೆಗೆ ಎನ್‌ಎಸ್‌ಎಸ್ ಹಾಗೂ ಯುವ ಸಬಲೀಕರಣ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ವಿವಿಧ ಯುವ ಜನ ಸಂಘಟನೆಗಳ ಜಿಲ್ಲಾ ಸಮನ್ವಯಕಾರರಾಗಿ ಕಾರ್ಯ ನಿರ್ವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
Next Story