ದ್ವಿತೀಯ ಟೆಸ್ಟ್: ಶ್ರೀಲಂಕಾಕ್ಕೆ ಹೀನಾಯ ಸೋಲು
ನ್ಯೂಝಿಲೆಂಡ್‌ಗೆ 423 ರನ್ ಜಯ
ಮೊದಲ ಬಾರಿ ಸತತ 4 ಸರಣಿ ಜಯಿಸಿದ ಕಿವೀಸ್
ಕ್ರೈರ್ಸ್ಟ್‌ಚರ್ಚ್, ಡಿ.30: ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು 423 ರನ್‌ಗಳಿಂದ ಮಣಿಸಿದ ನ್ಯೂಝಿಲೆಂಡ್ ಐತಿಹಾಸಿಕ ಗೆಲುವು ದಾಖಲಿಸಿದೆ.
ಐದನೇ ಹಾಗೂ ಅಂತಿಮ ದಿನವಾದ ರವಿವಾರ ಶ್ರೀಲಂಕಾವನ್ನು 236 ರನ್‌ಗೆ ಆಲೌಟ್ ಮಾಡಿದ ನ್ಯೂಝಿಲೆಂಡ್ ಗೆಲುವಿನ ದಡ ಸೇರಿತು. ತನ್ನ 88 ವರ್ಷಗಳ ಟೆಸ್ಟ್ ಇತಿಹಾಸದಲ್ಲಿ ಸತತ ನಾಲ್ಕನೇ ಸರಣಿಯನ್ನು ವಶಪಡಿಸಿಕೊಂಡು ಐತಿಹಾಸಿಕ ಸಾಧನೆ ಮಾಡಿತು.
ನ್ಯೂಝಿಲೆಂಡ್ ತಂಡ ಶ್ರೀಲಂಕಾ ವಿರುದ್ಧ ಭಾರೀ ಅಂತರದ ಜಯ ಸಾಧಿಸಿತು. ಇದು ರನ್‌ಗಳ ಅಂತರದಲ್ಲಿ 8ನೇ ದೊಡ್ಡ ಅಂತರದ ಗೆಲುವಾಗಿದೆ. ಈ ವರ್ಷ ವೆಸ್ಟ್‌ಇಂಡೀಸ್, ಇಂಗ್ಲೆಂಡ್ ಹಾಗೂ ಪಾಕಿಸ್ತಾನ ವಿರುದ್ಧ ಸರಣಿ ಜಯಿಸಿರುವ ಕಿವೀಸ್‌ಗೆ ಸತತ 4ನೇ ಸರಣಿ ಜಯ ಇದಾಗಿದೆ.
ಶ್ರೀಲಂಕಾ 2ನೇ ಟೆಸ್ಟ್ ಪಂದ್ಯ ಗೆಲ್ಲಲು 660 ರನ್ ಕಠಿಣ ಗುರಿ ಪಡೆದಿತ್ತು. ಅಂತಿಮ ದಿನವಾದ ರವಿವಾರ 6 ವಿಕೆಟ್ ನಷ್ಟಕ್ಕೆ 231 ರನ್‌ನಿಂದ ಎರಡನೇ ಇನಿಂಗ್ಸ್ ಮುಂದುವರಿಸಿತು. 14 ಎಸೆತಗಳಲ್ಲಿ ಕೊನೆಯ 4 ವಿಕೆಟ್‌ಗಳನ್ನು ಕಳೆದುಕೊಂಡಿತು. ದಿನದಾಟ ಆರಂಭವಾದ ತಕ್ಷಣ ಸುರಂಗ ಲಕ್ಮಲ್(18)ಟ್ರೆಂಟ್ ಬೌಲ್ಟ್‌ಗೆ ಕ್ಲೀನ್‌ಬೌಲ್ಡಾದರು. ನೈಲ್ ವಾಗ್ನರ್ ಅವರು ದಿಲ್ರುವಾನ್ ಪೆರೇರ(22)ವಿಕೆಟ್ ಉರುಳಿಸಿದರು. ಬೆಳಗ್ಗಿನ ಅವಧಿಯ ಮೂರನೇ ಓವರ್‌ನಲ್ಲಿ ದುಶ್ಮಂತಾ ಚಾಮೀರ ವಿಕೆಟನ್ನು ಪಡೆದ ಬೌಲ್ಟ್ ಶ್ರೀಲಂಕಾ ಇನಿಂಗ್ಸ್‌ಗೆ ಮಂಗಳ ಹಾಡಿದರು.
ಶನಿವಾರ 22 ರನ್ ಗಳಿಸಿ ಗಾಯಗೊಂಡು ನಿವೃತ್ತಿಯಾಗಿದ್ದ ಮಾಜಿ ನಾಯಕ ಆ್ಯಂಜೆಲೊ ಮ್ಯಾಥ್ಯೂಸ್ ಮತ್ತೆ ಇನಿಂಗ್ಸ್ ಮುಂದುವರಿಸಲಿಲ್ಲ.
ಈ ಪಂದ್ಯದಲ್ಲಿ ಟಾಸ್ ಜಯಿಸಿದ ಶ್ರೀಲಂಕಾ ಮೊದಲು ಫೀಲ್ಡಿಂಗ್ ಆಯ್ದುಕೊಂಡಿತು. ನ್ಯೂಝಿಲೆಂಡ್ ಒಂದು ಹಂತದಲ್ಲಿ 64 ರನ್‌ಗೆ 6 ವಿಕೆಟ್‌ಗಳನ್ನು ಕಳೆದುಕೊಂಡಿತು. ಬಿರುಸಿನ ಬ್ಯಾಟಿಂಗ್ ಮಾಡಿದ ಬಾಲಂಗೋಚಿ ಟಿಮ್ ಸೌಥಿ(68)ನ್ಯೂಝಿಲೆಂಡ್ ಸ್ಕೋರನ್ನು 178 ರನ್‌ಗೆ ತಲುಪಿಸಿದರು.
ಶ್ರೀಲಂಕಾ ಮೊದಲ ಇನಿಂಗ್ಸ್‌ನಲ್ಲಿ ಟ್ರೆಂಟ್ ಬೌಲ್ಟ್ ಬಿರುಗಾಳಿ ವೇಗಕ್ಕೆ ತತ್ತರಿಸಿ 104 ರನ್ ಗಳಿಸಿ ಆಲೌಟಾಯಿತು. ಎರಡನೇ ಇನಿಂಗ್ಸ್‌ನಲ್ಲಿ ಭರ್ಜರಿ ಪ್ರದರ್ಶನ ನೀಡಿದ ನ್ಯೂಝಿಲೆಂಡ್ ತಂಡ ಟಾಮ್ ಲಥಾಮ್(176) ಹಾಗೂ ಹೆನ್ರಿ ನಿಕೊಲ್ಸ್(162)ಶತಕದ ನೆರವಿನಿಂದ 4 ವಿಕೆಟ್‌ಗೆ 585 ರನ್ ಗಳಿಸಿ ಇನಿಂಗ್ಸ್ ಡಿಕ್ಲೇರ್ ಮಾಡಿತು. ಶ್ರೀಲಂಕಾ ಗೆಲುವಿಗೆ ಕಠಿಣ ಗುರಿ ನೀಡಿತು.
ಕುಶಾಲ್ ಮೆಂಡಿಸ್ ಹಾಗೂ ದಿನೇಶ್ ಚಾಂಡಿಮಲ್ ಕ್ರೀಸ್‌ನಲ್ಲಿರುವ ತನಕ ಶ್ರೀಲಂಕಾ ಪಂದ್ಯ ಡ್ರಾಗೊಳಿಸುವ ವಿಶ್ವಾಸದಲ್ಲಿತ್ತು. ಮೆಂಡಿಸ್(67) ವಿಕೆಟ್‌ನ್ನು ಉರುಳಿಸಿದ ನೀಲ್ ವಾಗ್ನರ್ 53 ರನ್ ಜೊತೆಯಾಟ ಮುರಿದರು. ಶ್ರೀಲಂಕಾದ 7 ಬ್ಯಾಟ್ಸ್‌ಮನ್‌ಗಳು 50 ಓವರ್‌ಗಳನ್ನು ಎದುರಿಸಿ ಕೇವಲ 110 ರನ್ ಗಳಿಸಿದರು. ಬೌಲ್ಟ್ ಎರಡನೇ ಇನಿಂಗ್ಸ್‌ನಲ್ಲಿ 77 ರನ್‌ಗೆ 3 ವಿಕೆಟ್ ಉರುಳಿಸಿದರು.
ಮೊದಲ ಇನಿಂಗ್ಸ್‌ನಲ್ಲಿ 68 ರನ್ ಹಾಗೂ ಒಟ್ಟು 5 ವಿಕೆಟ್ ಪಡೆದು ಆಲ್‌ರೌಂಡ್ ಪ್ರದರ್ಶನ ನೀಡಿ ಟಿಮ್ ಸೌಥಿ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.







