ಆಸ್ಟ್ರೇಲಿಯದ 7ರ ಪೋರ, ಸಹ ನಾಯಕ ಆರ್ಚಿಗೆ ಶುಭ ಹಾರೆಸಿದ ಟೀಮ್ ಇಂಡಿಯಾ
ಮೆಲ್ಬೋರ್ನ್, ಡಿ.30: ಭಾರತ ತಂಡದ ಆಟಗಾರರು ಆಸ್ಟ್ರೇಲಿಯ ವಿರುದ್ಧ ಎಂಸಿಜಿಯಲ್ಲಿ ನಡೆದ 3ನೇ ಟೆಸ್ಟ್ ಪಂದ್ಯವನ್ನು ಭಾರೀ ಅಂತರದಿಂದ ಜಯಿಸಿದ ಬಳಿಕ ಏಳರ ಪೋರ, ಆಸ್ಟ್ರೇಲಿಯದ ಸಹ ನಾಯಕ ಆರ್ಚಿ ಚಿಲ್ಲರ್ ಕೈಕುಲುಕಿ ಶುಭ ಹಾರೈಸಿದರು.
ಕ್ರಿಸ್‌ಮಸ್‌ಗೆ ಮೊದಲು ಬಾಕ್ಸಿಂಗ್ ಟೆಸ್ಟ್‌ಗೆ ಆಸ್ಟ್ರೇಲಿಯ ಕ್ರಿಕೆಟ್ ತಂಡ ಪ್ರಕಟಿಸಿದ ತಂಡದಲ್ಲಿ 15ನೇ ಸದಸ್ಯನಾಗಿ ಬಾಲಕ ಚಿಲ್ಲರ್‌ರನ್ನು ಸೇರ್ಪಡೆಗೊಳಿಸಲಾಗಿತ್ತು. ಭರ್ಜರಿ ಜಯ ಸಾಧಿಸಿದ ಭಾರತ ತಂಡದ ಆಟಗಾರರು, ಅಂಪೈರ್‌ಗಳು, ಭಾರತೀಯ ಕ್ರಿಕೆಟ್ ತಂಡದ ಸಿಬ್ಬಂದಿ ಸದಸ್ಯರುಗಳು ಹಾಗೂ ಕೋಚ್‌ಗಳು ಚಿಲ್ಲರ್ ಕೈಹಿಡಿದು ಶುಭ ಕೋರಿದರು. ಮನಕಲಕುವ ಈ ದೃಶ್ಯವನ್ನು ಕ್ರಿಕೆಟ್ ಡಾಟ್‌ಕಾಮ್‌ಡಾಟ್ ಎಯು ಪೋಸ್ಟ್ ಮಾಡಿದೆ.
ಮಾರಣಾಂತಿಕ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ ಚಿಲ್ಲರ್‌ಗೆ ಆಸ್ಟ್ರೇಲಿಯ ಕ್ರಿಕೆಟ್ ನಾಯಕನಾಗಬೇಕೆಂಬ ಆಸೆ ಇತ್ತು. ಮೇಕ್-ಎ-ವಿಶ್ ಆಸ್ಟ್ರೇಲಿಯ ಫೌಂಡೇಶನ್, ಕ್ರಿಕೆಟ್ ಆಸ್ಟ್ರೇಲಿಯದೊಂದಿಗೆ ಮಾತುಕತೆ ನಡೆಸಿ ಚಿಲ್ಲರ್ ತಂಡದ ಸಹ ನಾಯಕನಾಗಿ ಆಯ್ಕೆಯಾಗಲು ಮುತುವರ್ಜಿ ವಹಿಸಿತ್ತು.
ಕೋಚ್ ಜಸ್ಟಿನ್ ಲ್ಯಾಂಗರ್ ಫೋನ್ ಮುಖಾಂತರ ಚಿಲ್ಲರ್‌ಗೆ ಈ ಸುದ್ದಿ ಮುಟ್ಟಿಸಿದ್ದರು. ಚಿಲ್ಲರ್‌ರನ್ನು ಟೆಸ್ಟ್ ತಂಡಕ್ಕೆ ಸೇರಿಸಿಕೊಳ್ಳಲು ಈ ತಿಂಗಳಾರಂಭದಲ್ಲಿ ನಿರ್ಧರಿಸಲಾಗಿತ್ತು.
ಯುವ ಲೆಗ್ ಸ್ಪಿನ್ನರ್ ಚಿಲ್ಲರ್ ಈ ತಿಂಗಳಾರಂಭದಲ್ಲಿ ಅಡಿಲೇಡ್ ಓವಲ್‌ನಲ್ಲಿ ಆಸ್ಟ್ರೇಲಿಯ ತಂಡದೊಂದಿಗೆ ಅಭ್ಯಾಸ ನಡೆಸಿದ್ದ. ಚಿಲ್ಲರ್ 3 ತಿಂಗಳ ಮಗುವಾಗಿದ್ದಾಗ ಹೃದಯ ಸಮಸ್ಯೆ ಕಾಣಿಸಿಕೊಂಡಿತ್ತು. ಆತ ಈಗಾಗಲೇ ಹಲವು ಬಾರಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾನೆ.







