ಹಿರಿಯ ನಟ ಲೋಕನಾಥ್ ನಿಧನ

ಬೆಂಗಳೂರು, ಡಿ.31: ಹಿರಿಯ ನಟ ಲೋಕನಾಥ್ (90) ಸೋಮವಾರ ಬೆಳಗಿನ ಜಾವ ಹೃದಯಾಘಾತದಿಂದ ಬನಶಂಕರಿಯ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ.
ನಟ ಲೋಕನಾಥ್ ನಾಲ್ಕು ಪುತ್ರಿಯರು, ಒಬ್ಬ ಮಗ ಹಾಗೂ ಪತ್ನಿ ಸೇರಿದಂತೆ ಸಾವಿರಾರು ಅಭಿಮಾನಿಗಳನ್ನು ಅಗಲಿದ್ದಾರೆ.
ಅವರ ಪ್ರಾರ್ಥಿವ ಶರೀರವನ್ನು ಮಧ್ಯಾಹ್ನ 2ರವರೆಗೆ ರವೀಂದ್ರ ಕಲಾಕ್ಷೇತ್ರದಲ್ಲಿ ಇಡಲಾಗಿತ್ತು. ನಂತರ ಬನಶಂಕರಿ ಚಿತಾಗಾರದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು.
ಕಂಬನಿ ಮಿಡಿದ ಚಿತ್ರರಂಗ: ಹಿರಿಯ ನಟ ಲೋಕನಾಥ್ ಪ್ರಾರ್ಥಿವ ಶರೀರದ ಅಂತಿಮ ದರ್ಶನ ಪಡೆದ ಚಿತ್ರನಟರಾದ ಪುನೀತ್ ರಾಜಕುಮಾರ್, ದರ್ಶನ್, ಸುದೀಪ್, ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎಸ್.ಎ.ಚಿನ್ನೇಗೌಡ ಸೇರಿದಂತೆ ಕಲಾವಿದರು, ತಂತ್ರಜ್ಞರು, ನಿರ್ಮಾಪಕರು, ನಿರ್ದೇಶಕರು ಕಂಬನಿ ಮಿಡಿದಿದ್ದಾರೆ.
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ, ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಜಯಮಾಲಾ ಸೇರಿದಂತೆ ಜನಪ್ರತಿನಿಧಿಗಳು ಹಿರಿಯ ನಟ ಲೋಕನಾಥ್ ಚಿತ್ರರಂಗಕ್ಕೆ ನೀಡಿದೆ ಸೇವೆಯನ್ನು ಸ್ಮರಿಸಿ, ಅಂತಿಮ ನಮನ ಸಲ್ಲಿಸಿದ್ದಾರೆ.
ಹಿರಿಯ ನಟ ಲೋಕನಾಥ್ 1929ರ ಆಗಸ್ಟ್ 14ರಂದು ಬೆಂಗಳೂರಿನಲ್ಲಿ ಜನಿಸಿದರು. ಕೆ.ವಿ.ಐಯ್ಯರ್ ಅವರಿಂದ ನಾಟಕ ಲೋಕಕ್ಕೆ ಪರಿಚಯವಾದ ಲೋಕನಾಥ್ ಬಂಡವಾಳವಿಲ್ಲದ ಬಡಾಯಿ ನಾಟಕದ ಮೂಲಕ ಕಲಾಸೇವೆ ಆರಂಭಿಸಿದರು. ರವಿ ಕಲಾವಿದರು, ನಟರಂಗ, ಸಮುದಾಯ, ಸೂತ್ರಧಾರ ಸೇರಿದಂತೆ ಹಲವು ನಾಟಕ ಕಂಪನಿಗಳಲ್ಲಿ ಗುರುತಿಸಿಕೊಂಡಿದ್ದ ಅವರು, ಸುಮಾರು 1000ಕ್ಕೂ ಹೆಚ್ಚು ನಾಟಕಗಳಲ್ಲಿ ನಟಿಸಿದ್ದಾರೆ.
ಚಿತ್ರರಂಗ
ಸುಮಾರು 650ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದ ಈ ಮೇರು ಕಲಾವಿದ, ಸಂಸ್ಕಾರ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದರಾದರೂ, ಗೆಜ್ಜೆಪೂಜೆ ಅವರ ಮೊದಲು ಬಿಡುಗಡೆಯಾದ ಚಿತ್ರ. ಮುಂದೆ ಬಂಗಾರದ ಮನುಷ್ಯ, ದೂರದ ಬೆಟ್ಟ, ಭೂತಯ್ಯನ ಮಗ ಅಯ್ಯು, ಶರಪಂಜರ, ನಾಗರಹಾವು, ಹೇಮಾವತಿ, ಬಂಗಾರದ ಪಂಜರ, ಹೃದಯ ಸಂಗಮ, ಕೃಷ್ಣ ರುಕ್ಮಿಣಿ ಸತ್ಯಭಾಮ, ಭಾಗ್ಯಜ್ಯೋತಿ, ಕೂಡಿ ಬಾಳೋಣ, ಮಿಂಚಿನ ಓಟ, ಹೊಸ ನೀರು, ಮನೆ ಮನೆ ಕಥೆ, ಒಲವಿನ ಆಸರೆ ಹೀಗೆ ಹಲವು ಚಿತ್ರಗಳಲ್ಲಿ ನಟಿಸಿ ಸುಮಾರು 5 ದಶಕಕ್ಕೂ ಹೆಚ್ಚು ಕಾಲ ಕಲಾಸೇವೆ ಮಾಡಿದ್ದಾರೆ.
ಇಂಜಿನಿಯರ್ ಪದವೀಧರರಾಗಿದ್ದ ಲೋಕನಾಥ್ ಖ್ಯಾತ ಸಾಹಿತಿ ಯು.ಆರ್.ಅನಂತಮೂರ್ತಿಯವರ ಕಥೆ ಆಧರಿಸಿದ, ಪಟ್ಟಾಭಿ ರಾಮರೆಡ್ಡಿ ನಿರ್ದೇಶಿಸಿದ, 1970ರಲ್ಲಿ ತೆರೆಕಂಡ ಸಂಸ್ಕಾರ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಇದುವರೆಗೂ 650ಕ್ಕೂ ಹೆಚ್ಚು ಚಿತ್ರಗಳಲ್ಲಿ ತಮ್ಮ ನಟನೆಯ ಮೂಲಕ ಗಮನ ಸೆಳೆದಿದ್ದಾರೆ.
ಚಿತ್ರರಂಗದ ಖ್ಯಾತ ನಿರ್ದೇಶಕರಾದ ಪುಟ್ಟಣ್ಣ ಕಣಗಾಲ್, ಸಿದ್ಧಲಿಂಗಯ್ಯ ಮುಂತಾದ ನಿರ್ದೇಶಕರ ಚಿತ್ರಗಳಲ್ಲಿ ಖಾಯಂ ನಟರಾಗಿದ್ದ ಲೋಕನಾಥ್ ಅವರು, ಸಿದ್ಧಲಿಂಗಯ್ಯ ನಿರ್ದೇಶಿಸಿದ್ದ ಭೂತಯ್ಯನ ಮಗ ಅಯ್ಯು ಚಿತ್ರದ ಉಪ್ಪಿನಕಾಯಿಗಾಗಿ ಆಸೆ ಬೀಳುವ ಚಮ್ಮಾರನ ಪಾತ್ರದಲ್ಲಿ ನಟಿಸಿದ ನಂತರ ನಾಡಿನಾದ್ಯಂತ ಜನಪ್ರಿಯರಾಗಿದ್ದರು.
ಹಿರಿಯ ನಟರಾದ ಡಾ.ರಾಜುಕುಮಾರ್ ಡಾ.ವಿಷ್ಣುವರ್ಧನ್, ಅಂಬರೀಷ್, ಅನಂತನಾಗ್, ಶಂಕರನಾಗ್ ಪ್ರಭಾಕರ್ ಅವರಂತಹ ಕಲಾವಿದರೊಂದಿಗೆ ನಟಿಸಿದ್ದ ಲೋಕನಾಥ್‌ಗೆ ಗೆಜ್ಜೆಪೂಜೆ, ಬಂಗಾರದ ಮನುಷ್ಯ, ಮಿಂಚಿನ ಓಟ, ಭೂತಯ್ಯನ ಮಗ ಅಯ್ಯು ಸೇರಿದಂತೆ ಹಲವು ಚಿತ್ರಗಳು ಹೆಸರು ತಂದುಕೊಟ್ಟಿವೆ.
2012ರಲ್ಲಿ ತೆರೆಕಂಡ ದುನಿಯಾ ವಿಜಯ್ ಅಭಿನಯದ ಭೀಮಾತೀರದ ಹಂತಕರು ಚಿತ್ರ ಲೋಕನಾಥ್ ನಟಿಸಿದ ಅಂತಿಮ ಚಿತ್ರವಾಗಿದೆ.ಬಾಕ್ಸ್‌ಕನ್ನಡ ಸಿನೆಮಾಗಳಲ್ಲಿ ಪೋಷಕ ಪಾತ್ರಗಳಿಗೆ ಜೀವ ತುಂಬಿದ ನಟ ಲೋಕನಾಥ್ ಭೂತಯ್ಯನ ಮಗ ಅಯ್ಯು ಚಿತ್ರದ ಪಾತ್ರ ಜನಮನದಲ್ಲಿ ಸದಾ ಹಸಿರಾಗಿ ಉಳಿದಿದೆ. ಚಿತ್ರರಂಗ, ರಂಗಭೂಮಿ ಎರಡರಲ್ಲೂ ಅವರ ಕೊಡುಗೆ ಸ್ಮರಣೀಯ.
ಲೋಕನಾಥ್ ಅವರ ಆತ್ಮಕ್ಕೆ ಶಾಂತಿ ಸಿಗಲಿ, ಕುಟುಂಬಕ್ಕೆ ಅಗಲಿಕೆಯ ದುಃಖ ಭರಿಸುವ ಶಕ್ತಿ ದೊರೆಯಲಿ.
-ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ
ರಂಗಭೂಮಿ ಹಾಗೂ ಚಿತ್ರರಂಗದ ಹಿರಿಯ ನಟರಾದ ಲೋಕನಾಥ್ ನಿಧನರಾದ ಸುದ್ದಿ ಕೇಳಿ ಬೇಸರವಾಗಿದೆ. ಅವರ ಕುಟುಂಬ ವರ್ಗ ಹಾಗೂ ಅಭಿಮಾನಿಗಳಿಗೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ನೀಡಲೆಂದು ಪ್ರಾರ್ಥಿಸುತ್ತೇನೆ.
-ಎಚ್.ಡಿ.ದೇವೇಗೌಡ ಮಾಜಿ ಪ್ರಧಾನಿ
ಮನೋಜ್ಞ ನಟ ಲೋಕನಾಥರವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬಕ್ಕೆ, ಸ್ನೇಹಿತರಿಗೆ ಹಾಗೂ ಅಭಿಮಾನಿಗಳಿಗೆ ಆ ಭಗವಂತನು ನೀಡಲಿ ಎಂದು ಪ್ರಾರ್ಥಿಸುತ್ತೇನೆ.
-ಸದಾನಂದ ಗೌಡ ಕೇಂದ್ರ ಸಚಿವ
ಹಿರಿಯ ನಟ ಲೋಕನಾಥ ಅವರು ವಿಧಿವಶರಾದ ಸುದ್ದಿ ತಿಳಿದು ಅತೀವ ದುಃಖವಾಗಿದೆ. 650ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿರುವ ಇವರು ಕನ್ನಡ ಚಿತ್ರರಂಗಕ್ಕೆ ಅಪಾರ ಸೇವೆ ಸಲ್ಲಿಸಿದ್ದಾರೆ. ಇವರ ಅಗಲಿಕೆಯ ನೋವು ಭರಿಸುವ ಶಕ್ತಿಯನ್ನು ಕುಟುಂಬದವರಿಗೆ, ಬಂಧುಮಿತ್ರರಿಗೆ, ಅಭಿಮಾನಿಗಳಿಗೆ ದೇವರು ನೀಡಲಿ. ಇವರ ಆತ್ಮಕ್ಕೆ ಶಾಂತಿ ದೊರಕಲಿ.
-ಬಿ.ಎಸ್.ಯಡಿಯೂಪ್ಪ ಬಿಜೆಪಿ ರಾಜ್ಯಾಧ್ಯಕ್ಷ







