ಬಿಜೆಪಿಯ ದಲಿತ ವೋಟ್ ಬ್ಯಾಂಕ್ ಕುಸಿತ: ಆಂತರಿಕ ಸಮೀಕ್ಷೆಯಿಂದ ಬಹಿರಂಗ
ಹೊಸದಿಲ್ಲಿ, ಡಿ.31: ಪಂಚರಾಜ್ಯಗಳ ಚುನಾವಣೆಯಲ್ಲಿ ಹೀನಾಯವಾಗಿ ಸೋತ ಬಿಜೆಪಿಗೆ ಮತ್ತೊಂದು ಆಘಾತಕಾರಿ ಸುದ್ದಿ ಎದುರಾಗಿದೆ. ಪಕ್ಷದ ದಲಿತ ವೋಟ್ ಬ್ಯಾಂಕ್ ಕುಸಿಯುತ್ತಿದೆ ಎಂಬ ಅಂಶ, ಬಿಜೆಪಿಯ ಆಂತರಿಕ ಸಮೀಕ್ಷೆಯಿಂದ ತಿಳಿದುಬಂದಿದ್ದು, ಪಕ್ಷದ ಮುಖಂಡರನ್ನು ಚಿಂತೆಗೀಡು ಮಾಡಿದೆ. 2019ರ ಸಾರ್ವತ್ರಿಕ ಚುನಾವಣೆಯಲ್ಲಿ ಇದರ ಪರಿಣಾಮ ಏನಾಗುತ್ತದೆ ಎಂಬ ಆತಂಕ ಬಿಜೆಪಿಯಲ್ಲಿ ಮನೆಮಾಡಿದೆ.
ಮಧ್ಯಪ್ರದೇಶ, ಛತ್ತೀಸ್‌ಗಢ ಮತ್ತು ರಾಜಸ್ಥಾನದ ಮೀಸಲು ಕ್ಷೇತ್ರಗಳಲ್ಲಿ ನಡೆಸಿದ ಸಾಧನೆಯ ಆಂತರಿಕ ಮೌಲ್ಯಮಾಪನದಲ್ಲಿ ಈ ಆಘಾತಕಾರಿ ಅಂಶ ತಿಳಿದುಬಂದಿದೆ. ವಿಧಾನಸಭಾ ಚುನಾವಣೆಯ ಫಲಿತಾಂಶದ ಆಧಾರದಲ್ಲಿ ಇಡೀ ಲೋಕಸಭಾ ಕ್ಷೇತ್ರದ ಮತಗಳನ್ನು ಲೆಕ್ಕ ಹಾಕಿದರೆ, ಮಧ್ಯಪ್ರದೇಶದಲ್ಲಿ ಬಿಜೆಪಿ 10 ಮೀಸಲು ಕ್ಷೇತ್ರಗಳ ಪೈಕಿ 8 ಕ್ಷೇತ್ರಗಳನ್ನು ಕಳೆದುಕೊಳ್ಳಲಿದೆ. ಛತ್ತೀಸ್‌ಗಢದಲ್ಲಿ ಪರಿಶಿಷ್ಟ ಜಾತಿ ಹಾಗೂ ಪಂಗಡಕ್ಕೆ ಮೀಸಲಾಗಿರುವ ಎಲ್ಲ ಐದು ಕ್ಷೇತ್ರಗಳಲ್ಲೂ ಸೋಲು ಅನುಭವಿಸಲಿದೆ. ಮಧ್ಯಪ್ರದೇಶದ ಎಲ್ಲ ಬುಡಕಟ್ಟು ಕ್ಷೇತ್ರಗಳಲ್ಲಿ ಬಿಜೆಪಿಗೆ ವೈಟ್‌ವಾಶ್ ಕಾದಿದೆ. ಉಜ್ಜಯಿನಿ ಮತ್ತು ಟಿಕಂಘರ್ ಸ್ಥಾನಗಳಷ್ಟೇ ಬಿಜೆಪಿ ಪಾಲಿಗೆ ಉಳಿಯಲಿವೆ.
ಕಳೆದ ಲೋಕಸಭಾ ಚುನಾವಣೆಯಲ್ಲಿ ದೇಶದ 131 ಮೀಸಲು ಸ್ಥಾನಗಳ ಪೈಕಿ 67ನ್ನು ಗೆದ್ದುಕೊಂಡಿದ್ದ ಬಿಜೆಪಿಗೆ ಈ ಬಾರಿ ಅಷ್ಟೊಂದು ಸ್ಥಾನಗಳನ್ನು ಗೆಲ್ಲುವುದು ಅಸಾಧ್ಯ ಎನಿಸಲಿದೆ ಎಂದು ಸಮೀಕ್ಷೆ ಹೇಳಿದೆ.
ಮಧ್ಯಪ್ರದೇಶದಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ 35 ಮೀಸಲು ಸ್ಥಾನಗಳ ಪೈಕಿ 28 ಸ್ಥಾನಗಳನ್ನು ಬಗಲಿಗೆ ಹಾಕಿಕೊಂಡಿದ್ದ ಬಿಜೆಪಿ ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕೇವಲ 18 ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿತ್ತು. ಅಂತೆಯೇ ರಾಜಸ್ಥಾನದಲ್ಲಿ 32 ಮೀಸಲು ಸ್ಥಾನಗಳನ್ನು ಹಿಂದಿನ ಚುನಾವಣೆಯಲ್ಲಿ ಗೆದ್ದಿದ್ದ ಬಿಜೆಪಿ ಈ ಬಾರಿ ಕೇವಲ 12 ಸ್ಥಾನ ಗೆದ್ದಿತ್ತು. ಅಂತೆಯೇ ಛತ್ತೀಸ್‌ಗಢದಲ್ಲಿ ಬಿಜೆಪಿ ಬಲ ಒಂಬತ್ತು ಮೀಸಲು ಕ್ಷೇತ್ರಗಳಿಂದ ಎರಡಕ್ಕೆ ಇಳಿದಿದೆ.
ದಲಿತರ ಹತ್ಯೆ ಪ್ರಕರಣಗಳ ಬಗ್ಗೆ ವಿರೋಧ ಪಕ್ಷಗಳು ಮಾಡುತ್ತಿರುವ ದಾಳಿಯನ್ನು ಪಕ್ಷದ ಮುಖಂಡರು ಸಮರ್ಥವಾಗಿ ಎದುರಿಸದಿರುವುದೇ ಪಕ್ಷಕ್ಕೆ ಮಾರಕವಾಗಿದೆ ಎಂದು ಆಂತರಿಕ ಸಮೀಕ್ಷೆ ಸ್ಪಷ್ಟಪಡಿಸಿದೆ.