ಕಿಸೆಯಲ್ಲಿ ಸ್ಫೋಟಗೊಂಡ ಹೊಸ ಐಫೋನ್ XS ಮ್ಯಾಕ್ಸ್

ನ್ಯೂಯಾರ್ಕ್, ಡಿ.31: ಖರೀದಿಸಿ ಮೂರು ವಾರಗಳಷ್ಟೇ ಆಗಿದ್ದ ಐಫೋನ್ XS ಮ್ಯಾಕ್ಸ್ ತನ್ನ ಪ್ಯಾಂಟ್ ಕಿಸೆಯಲ್ಲಿಯೇ ಸ್ಫೋಟಗೊಂಡಿದೆ ಎಂದು ಹೇಳಿರುವ ಓಹಿಯೋದ ಕೊಲಂಬಸ್ ನಿವಾಸಿ ಜೋಷ್ ಹಿಲ್ಲಾರ್ಡ್ ಎಂಬಾತ ಆ್ಯಪಲ್ ಕಂಪೆನಿ ವಿರುದ್ಧ ಮೊಕದ್ದಮೆ ಹೂಡಿದ್ದಾನೆ.
ಕಿಸೆಯಲ್ಲಿದ್ದಾಗ ಫೋನ್ ಬಹಳಷ್ಟು ಬಿಸಿಯಾದಂತೆ ಹಾಗೂ ವಿಚಿತ್ರ ವಾಸನೆ ಹೊರಸೂಸುವಂತೆ ಅನಿಸಿತ್ತು. ಕೆಲ ಕ್ಷಣಗಳ ನಂತರ ಹಳದಿ ಮತ್ತು ಹಸಿರು ಬಣ್ಣದ ಹೊಗೆ ಕಾಣಿಸಿಕೊಂಡಿತ್ತು.
‘‘ನಾನಿದ್ದ ವಿರಾಮದ ಕೊಠಡಿಯಲ್ಲಿ ಬೇರೊಬ್ಬ ಮಹಿಳೆಯೂ ಇದ್ದುದರಿಂದ ನಾನು ಅಲ್ಲಿಂದ ಇನ್ನೊಂದು ಕೊಠಡಿಗೆ ಓಡಿ ಆದಷ್ಟು ಬೇಗ ನನ್ನ ಶೂ ಹಾಗೂ ಪ್ಯಾಂಟ್ ಕಳಚಿ ಬಿಟ್ಟೆ. ನಮ್ಮ ಕಂಪೆನಿಯ ಉಪಾಧ್ಯಕ್ಷರು ನನ್ನ ಬೊಬ್ಬೆ ಕೇಳಿ ಅಲ್ಲಿಗೆ ಬಂದು ಅಗ್ನಿಶಾಮಕ ಉಪಕರಣದ ಸಹಾಯದಿಂದ ಬೆಂಕಿ ನಂದಿಸಿದರು’’ ಎಂದು ಜೋಷ್ ವಿವರಿಸಿದ್ದಾರೆ. ಫೋನ್ ಕಿಸೆಯಲ್ಲಿಯೇ ಸ್ಫೋಟಗೊಂಡಿದ್ದರಿಂದ ಪ್ಯಾಂಟ್ ನಲ್ಲಿ ದೊಡ್ಡ ತೂತಾಗಿತ್ತು.
ಆ್ಯಪಲ್ ಕಂಪೆನಿಯನ್ನು ಸ0ಪರ್ಕಿಸಿದಾಗ ಹೊಸ ಸ್ಮಾರ್ಟ್ ಫೋನ್ ನೀಡುವ ಆಫರ್ ಮಾಡಲಾಯಿತಾದರೂ ಗ್ರಾಹಕ ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ. ಲೇಟೆಸ್ಟ್ ಐಒಎಸ್ 12.1.1ಗೆ ಅಪ್ಡೇಟ್ ಮಾಡುವ ಸಂದರ್ಭ ಐಫೋನ್ ಎಕ್ಸ್ ಸ್ಫೋಟಗೊಂಡ ಕೆಲವೇ ದಿನಗಳಲ್ಲಿ ಈ ಘಟನೆ ನಡೆದಿದೆ.





