ಜ.27: ಬೆಂಗಳೂರಿನಲ್ಲಿ ‘ಕರ್ನಾಟಕ ಮುಸ್ಲಿಂ ಜಮಾಅತ್’ ಘೋಷಣೆ

ಮಂಗಳೂರು, ಡಿ.31: ರಾಜ್ಯದ ಮುಸ್ಲಿಮರ ಪ್ರಬಲ ವೇದಿಕೆಯಾಗಿ ‘ಕರ್ನಾಟಕ ಮುಸ್ಲಿಂ ಜಮಾಅತ್’ ಎಂಬ ಹೊಸ ಸಂಘಟನೆಯೊಂದನ್ನು ಅಸ್ತಿತ್ವಕ್ಕೆ ಬರಲಿದ್ದು, ಜನವರಿ 27ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುವ ಬೃಹತ್ ಸಮಾವೇಶದಲ್ಲಿ ಈ ಸಂಘಟನೆಗೆ ಚಾಲನೆ ನೀಡಲಾಗುವುದು ಎಂದು ಕರ್ನಾಟಕ ಜಂ ಇಯ್ಯತುಲ್ ಉಲಮಾದ ಅಧ್ಯಕ್ಷ ಖಾಝಿ ಪಿ.ಎಂ. ಇಬ್ರಾಹೀಂ ಮುಸ್ಲಿಯಾರ್ ಬೇಕಲ್ ತಿಳಿಸಿದ್ದಾರೆ.
ಸೋಮವಾರ ನಗರದ ಖಾಸಗಿ ಹೊಟೇಲಿನಲ್ಲಿ ನಡೆದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಸಮುದಾಯದ ಗಣ್ಯರು ಮತ್ತು ವಿವಿಧ ಕ್ಷೇತ್ರದ ಪರಿಣತರನ್ನು ಸೇರಿಸಿಕೊಂಡು ಸಮುದಾಯ ಮತ್ತು ಸಮಾಜದ ಸರ್ವತೋಮುಖ ಪ್ರಗತಿಗಾಗಿ ಸಂಘಟಿತ ರೀತಿಯಲ್ಲಿ ಕಾರ್ಯಾಚರಿಸುವುದು ಕರ್ನಾಟಕ ಮುಸ್ಲಿಂ ಜಮಾಅತ್‌ನ ಮುಖ್ಯ ಗುರಿಯಾಗಿದೆ ಎಂದರು.
ಈಗಾಗಲೆ ವಿವಿಧ ಜಿಲ್ಲೆಗಳಲ್ಲಿ ಸಮಾವೇಶಗಳನ್ನು ನಡೆಸಲಾಗಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಸಮಾವೇಶದಲ್ಲಿ ಸಾವಿರಾರು ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆ ಇದೆ ಎಂದ ಪಿ.ಎಂ. ಇಬ್ರಾಹೀಂ ಮುಸ್ಲಿಯಾರ್ ಬೇಕಲ್, ದೇಶದ ಮುಸ್ಲಿಮರ ಸ್ಥಿತಿಗತಿಗಳನ್ನು ಅವಲೋಕಿಸಿ ಅಭಿವೃದ್ಧಿಪಡಿಸಲು ಮತ್ತು ವಿವಿಧ ಮತ-ಧರ್ಮಗಳ ಮಧ್ಯೆ ಸಾಮರಸ್ಯ ಹಾಗೂ ಪರಸ್ಪರ ಪ್ರೀತಿ-ವಿಶ್ವಾಸ ಮೂಡಿಸಿ ರಾಷ್ಟ್ರದ ಅಖಂಡತೆ ಮತ್ತು ಪ್ರಗತಿಯಲ್ಲಿ ನಿರ್ಣಾಯಕ ಪಾತ್ರ ವಹಿಸಲು ರಾಜಕೀಯ ರಹಿತವಾಗಿ ದೇಶದ ಪ್ರಮುಖ ಧಾರ್ಮಿಕ-ಸಾಮಾಜಿಕ ಮುಖಂಡರ ನಾಯಕತ್ವದಲ್ಲಿ ಈಗಾಗಲೆ ಅಖಿಲ ಭಾರತ ಮುಸ್ಲಿಂ ಜಮಾಅತ್‌ಗೆ ರೂಪುಗೊಡಲಾಗಿದ್ದು, ಅದರ ಅಧೀನದಲ್ಲಿ ‘ಕರ್ನಾಟಕ ಮುಸ್ಲಿಂ ಜಮಾಅತ್’ ಕಾರ್ಯಾಚರಿಸಲಿದೆ ಎಂದರು.
ಬೆಂಗಳೂರಿನಲ್ಲಿ ನಡೆಯುವ ಸಮಾವೇಶದಲ್ಲಿ ದೇಶದ ಪ್ರಮುಖ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದ ಧುರೀಣರು ಪಾಲ್ಗೊಳ್ಳಲಿದ್ದಾರೆ. ಅವರ ಸಮ್ಮುಖದಲ್ಲಿ ಅಖಿಲ ಭಾರತ ಸುನ್ನಿ ಜಂ ಇಯ್ಯತುಲ್ ಉಲಮಾದ ಪ್ರಧಾನ ಕಾರ್ಯದರ್ಶಿ ಸುಲ್ತಾನುಲ್ ಉಲಮಾ ಕಾಂತಪುರಂ ಎ.ಪಿ. ಅಬೂಬಕರ್ ಮುಸ್ಲಿಯಾರ್ ಅವರು ‘ಕರ್ನಾಟಕ ಮುಸ್ಲಿಂ ಜಮಾಅತ್’ ಸಂಘಟನೆಯನ್ನು ಘೋಷಿಸಲಿದ್ದಾರೆ. ಬಳಿಕ ಜಿಲ್ಲಾ, ತಾಲೂಕು, ವಲಯ ಮಟ್ಟದಲ್ಲಿ ‘ಜಮಾಅತ್’ನ್ನು ಅಸ್ತಿತ್ವಕ್ಕೆ ತರಲಾಗುವುದು. ಘೋಷಣಾ ಸಮಾವೇಶದಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಧಾರ್ಮಿಕ ವಿದ್ವಾಂಸರಾದ ಸೈಯದ್ ಕೂರತ್ ತಂಙಳ್ ಮತ್ತಿತರ ಪ್ರಮುಖರು ಪಾಲ್ಗೊಳ್ಳಲಿದ್ದಾರೆ ಎಂದು ಪಿ.ಎಂ. ಇಬ್ರಾಹೀಂ ಮುಸ್ಲಿಯಾರ್ ಬೇಕಲ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ಜಂ ಇಯ್ಯತುಲ್ ಉಲಮಾದ ಪ್ರಧಾನ ಕಾರ್ಯದರ್ಶಿ ಎಂ. ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ, ಸುನ್ನಿ ಕೋ ಆರ್ಡಿನೇಶನ್ ಸಮಿತಿಯ ರಾಜ್ಯ ಉಪಾಧ್ಯಕ್ಷ ಎಸ್.ಪಿ. ಹಂಝ ಸಖಾಫಿ ಬಂಟ್ವಾಳ, ಎಸ್‌ವೈಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ. ಎಂಎಸ್‌ಎಂ ಅಬ್ದುರ್ರಶೀದ್ ಝೈನಿ ಕಾಮಿಲ್, ಎಸೆಸ್ಸೆಫ್ ಅಖಿಲ ಭಾರತ ನಾಯಕ ಶಾಫಿ ಸಅದಿ ಬೆಂಗಳೂರು, ಎಸೆಸ್ಸೆಫ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೆ.ಎಂ. ಅಬೂಬಕರ್ ಸಿದ್ದೀಖ್ ಮೋಂಟುಗೋಳಿ, ಸುನ್ನಿ ಜಂ ಇಯ್ಯತುಲ್ ಮುಅಲ್ಲಿಮೀನ್‌ನ ಅಧ್ಯಕ್ಷ ಆತೂರು ಸಅದ್ ಮುಸ್ಲಿಯಾರ್, ಎಸ್‌ಇಡಿಸಿ ಮತ್ತು ಎಸ್‌ಎಂಎ ಕರ್ನಾಟಕ ಇದರ ಪ್ರಧಾನ ಕಾರ್ಯದರ್ಶಿ ಅಬ್ದುರ್ರಹ್ಮಾನ್ ಮದನಿ ಜೆಪ್ಪು ಮತ್ತಿತರರು ಉಪಸ್ಥಿತರಿದ್ದರು.