ತಪ್ಪು ಚಿಕಿತ್ಸೆಯಿಂದ ಮಧುಕರ್ ಶೆಟ್ಟಿ ಸಾವನ್ನಪ್ಪಿರುವ ಸಂಶಯ: ರೈತ ಸಂಘ
ಸೂಕ್ತ ತನಿಖೆಗೆ ಆಗ್ರಹ

ಮಧುಕರ್ ಶೆಟ್ಟಿ
ಬೆಂಗಳೂರು, ಡಿ. 31: ದಕ್ಷ, ಪ್ರಾಮಾಣಿಕ ಅಧಿಕಾರಿ ಮಧುಕರ್ ಶೆಟ್ಟಿ ಅವರಿಗೆ ತಪ್ಪು ಚಿಕಿತ್ಸೆ ನೀಡಿದ್ದರಿಂದಲೇ ಅವರು ಸಾವನ್ನಪ್ಪಿರುವ ಸಂಶಯವಿದ್ದು, ಈ ಬಗ್ಗೆ ರಾಜ್ಯ ಸರಕಾರ ತನಿಖೆಗೆ ಆದೇಶಿಸಬೇಕು ಎಂದು ರೈತ ಮುಖಂಡ ಪುಟ್ಟಸ್ವಾಮಿ ಆಗ್ರಹಿಸಿದ್ದಾರೆ.
ಸೋಮವಾರ ರಾಮನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸಮಾಜವಾದಿ ಮುತ್ಸದ್ದಿ ಡಾ.ರಾಮಮನೋಹರ ಲೋಹಿಯಾ ಸಾವಿಗೂ ಮಧುಕರ್ ಶೆಟ್ಟಿ ಸಾವಿಗೂ ಸಾಮ್ಯತೆ ಇದೆ. ತಪ್ಪು ಚಿಕಿತ್ಸೆಯಿಂದ ಲೋಹಿಯಾ ಮೃತಪಟ್ಟರು ಎಂದು ನಂತರ ವರದಿ ನೀಡಲಾಯಿತು. ಈಗಲೂ ಅದೇ ರೀತಿ ಆಗಿರುವ ಸಾಧ್ಯತೆ ಇದೆ ಎಂದು ಹೇಳಿದರು.
ಹಿರಿಯ ಐಪಿಎಸ್ ಅಧಿಕಾರಿ ಮಧುಕರ ಶೆಟ್ಟಿ ಮಾನಸಿಕ ಹಾಗೂ ದೈಹಿಕವಾಗಿ ಆರೋಗ್ಯವಂತರಾಗಿದ್ದರು. ಅವರಿಗೆ ಎಚ್1 ಎನ್1 ಬಂದಿದ್ದು ಹೇಗೆ ಎಂಬುದೇ ಅನುಮಾನ. ಸಾವಿನ ನಂತರ ಅವರ ಬಾಯಿಯ ಬಲಭಾಗದಲ್ಲಿ ಮತ್ತು ಮೂಗಿನಲ್ಲಿ ರಕ್ತದ ಕಲೆಗಳು ಕಂಡಿವೆ ಎಂದು ಅವರು ದೂರಿದರು.
ಅವರಿಗೆ ಚಕಿತ್ಸೆ ನೀಡಿದ ಆಸ್ಪತ್ರೆಯ ವೈದ್ಯರು ಹೃದಯ ಸಂಬಂಧಿ ಕಾಯಿಲೆಗೆ ಚಿಕಿತ್ಸೆ ನೀಡುವ ಬದಲು ಎಚ್1 ಎನ್1 ತಂದು ತಪ್ಪು ಗ್ರಹಿಕೆ ಮಾಡಿ ಚಿಕಿತ್ಸೆ ನೀಡಿದ್ದಾರೆಂಬ ಮಾತುಗಳಿವೆ. ಹೀಗಾಗಿ ಸರಕಾರವು ತನಿಖೆ ಆರಂಭಿಸಬೇಕು ಎಂದು ಅವರು ಒತ್ತಾಯ ಮಾಡಿದರು.
ತಜ್ಞ ವೈದ್ಯರು ಹಾಗೂ ಹಿರಿಯ ಅಧಿಕಾರಿಗಳನ್ನು ಒಳಗೊಂಡ ವಿಶೇಷ ತನಿಖಾ ತಂಡವನ್ನು ನೇಮಿಸಬೇಕು. ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಸಹಿತ ಹಲವರು ಮಧುಕರ ಶೆಟ್ಟಿ ಅವರ ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದು, ಸಾಕ್ಷ ನಾಶಕ್ಕೆ ಮೊದಲೇ ತನಿಖೆ ಆರಂಭಿಸಬೇಕು ಎಂದು ಕೋರಿದರು.







