ಬೆಂಗಳೂರು: ವಿಷಪೂರಿತ ಆಹಾರ ಸೇವನೆಯಿಂದ 103 ಮಕ್ಕಳು ಆಸ್ಪತ್ರೆಗೆ ದಾಖಲು
ಮೂವರು ಮಕ್ಕಳು ತೀವ್ರ ಅಸ್ವಸ್ಥ

ಬೆಂಗಳೂರು, ಡಿ.31: ಸಿದ್ದಾಪುರದ ಸರಕಾರಿ ಬಾಲಮಂದಿರದಲ್ಲಿ ವಿಷಪೂರಿತ ಆಹಾರ ಸೇವನೆಯಿಂದ ಅಸ್ವಸ್ಥಗೊಂಡಿರುವ ನೂರಕ್ಕೂ ಅಧಿಕ ಮಕ್ಕಳು ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಬಾಲಮಂದಿರದಲ್ಲಿ ರವಿವಾರ ರಾತ್ರಿ ಊಟ ಸೇವನೆಯ ನಂತರ ಮಕ್ಕಳಲ್ಲಿ ಹೊಟ್ಟೆ ನೋವು ಹಾಗೂ ವಾಂತಿ ಕಾಣಿಸಿಕೊಂಡಿದೆ. ಕೂಡಲೇ ಎಚ್ಚೆತ್ತುಕೊಂಡ ಬಾಲಮಂದಿರದ ಮುಖ್ಯಸ್ಥರು ಮಕ್ಕಳನ್ನು ಚಿಕಿತ್ಸೆಗಾಗಿ ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಸಂಬಂಧ ಸಿದ್ದಾಪುರ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದಾರೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಸಿದ್ದಾಪುರದಲ್ಲಿ ಚೈಲ್ಡ್ ಪ್ರೊಟೆಕ್ಟ್ ಸ್ಕೀಂನಲ್ಲಿ ನಡೆಯುತ್ತಿರುವ ಸರಕಾರಿ ಬಾಲಮಂದಿರದಲ್ಲಿನ ಮಕ್ಕಳು ರವಿವಾರ ರಾತ್ರಿ ಊಟ ಮುಗಿಸಿದ್ದಾರೆ. ಊಟದ ನಂತರ ಮಕ್ಕಳಲ್ಲಿ ವಾಂತಿ, ಹೊಟ್ಟೆ ನೋವು ಕಾಣಿಸಿಕೊಂಡಿದೆ. ಅಸ್ವಸ್ಥಗೊಂಡ ಸುಮಾರು 103 ಮಕ್ಕಳನ್ನು ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆಗೆ ದಾಖಲಿಸಲಾಗಿದೆ.
ಆಸ್ಪತ್ರೆಗೆ ದಾಖಲಾಗಿರುವರಲ್ಲಿ ಮೂರು ಮಕ್ಕಳು ತೀವ್ರವಾಗಿ ಅಸ್ವಸ್ಥವಾಗಿದ್ದಾರೆ. ಆರೋಗ್ಯದಿಂದ ಚೇತರಿಸಿಕೊಂಡಿರುವ 60 ಮಕ್ಕಳನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಸುಮಾರು 40 ಮಕ್ಕಳಿಗೆ ಚಿಕಿತ್ಸೆ ಮುಂದುವರೆದಿದೆ. ಈ ಸಂಬಂಧ ಜಿಲ್ಲಾಧಿಕಾರಿ ವಿಜಯ್ ಶಂಕರ್ ಆಸ್ಪತ್ರೆಗೆ ಭೇಟಿ ನೀಡಿ ಮಕ್ಕಳ ಆರೋಗ್ಯ ವಿಚಾರಿಸಿದ್ದಾರೆ.
ಊಟದಲ್ಲಿ ಹಲ್ಲಿ ಬಿದ್ದಿರಬಹುದು ಅಥವಾ ಹಳಸಿದ ಪದಾರ್ಥಗಳಿಂದ ಅವಘಡ ಸಂಭವಿಸಿರಬಹುದು. ಈಗಾಗಲೇ, ಆಹಾರದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಪ್ರಯೋಗಾಲಯದ ವರದಿ ಆಧರಿಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆಸ್ಪತ್ರೆಗೆ ದಾಖಲಾಗಿರುವ ಎಲ್ಲ ಮಕ್ಕಳು ಆರೋಗ್ಯ ಚೇತರಿಸಿಕೊಂಡಿದ್ದಾರೆ. ಮೂರು ಮಕ್ಕಳು ತೀವ್ರ ಅಸ್ವಸ್ಥಗೊಂಡಿದ್ದಾರೆ. ದ್ರವರೂಪದ ಆಹಾರ ನೀಡಲಾಗುತ್ತಿದೆ. ಉಳಿದ ಮಕ್ಕಳಿಗೆ ಆಸ್ಪತ್ರೆಯ ಊಟವನ್ನು ನೀಡಲಾಗುತ್ತಿದೆ. ಪ್ರಾಣಾಪಾಯದಿಂದ ಪಾರಾಗಿದ್ದಾರೆ.
-ಡಾ.ಉಷಾ, ಜಿಲ್ಲಾ ಮಕ್ಕಳ ರಕ್ಷಣಾ ವೈದ್ಯೆ







