ನಕಲಿ ಛಾಪಾ ಕಾಗದ ಹಗರಣ: ಮೃತಪಟ್ಟ 1 ವರ್ಷದ ಬಳಿಕ ತೆಲಗಿ ಖುಲಾಸೆ
ಹೊಸದಿಲ್ಲಿ, ಡಿ. 31: ಹಲವು ರಾಜ್ಯಗಳಲ್ಲಿ ವಿಸ್ತರಿಸಿಕೊಂಡಿದ್ದ ಬಹು ಕೋಟಿ ರೂಪಾಯಿ ನಕಲಿ ಛಾಪಾ ಕಾಗದ ಹಗರಣದ ಆರೋಪಿಗಳಾದ ಅಬ್ದುಲ್ ಕರೀಂ ತೆಲಗಿ ಹಾಗೂ ಇತರರನ್ನು ಮಹಾರಾಷ್ಟ್ರ ನ್ಯಾಯಾಲಯ ಸೋಮವಾರ ಬಿಡುಗಡೆ ಮಾಡಿದೆ. ಆದರೆ, ಅಬ್ದುಲ್ ಕರೀಮ್ ತೆಲಗಿ ಕಳೆದ ವರ್ಷ ಮೃತಪಟ್ಟಿದ್ದಾರೆ.
ಕರ್ನಾಟಕ ಪೊಲೀಸರು 2001ರಲ್ಲಿ ಬಂಧಿಸುವ ವರೆಗೆ ರೈಲ್ವೆ ಉದ್ಯೋಗಿಯ ಪುತ್ರ ಹಾಗೂ ಮಾಜಿ ಟ್ರಾವೆಲ್ ಏಜೆಂಟ್ ಆಗಿದ್ದ ತೆಲಗಿ ದಶಕಗಳ ಕಾಲ ನ ಕಲಿ ಛಾಪಾ ಕಾಗದ ಹಗರಣ ನಡೆಸುತ್ತಿದ್ದರು ಎಂದು ಆರೋಪಿಸಲಾಗಿತ್ತು. ಅವರ ವಿರುದ್ಧ 11 ರಾಜ್ಯಗಳಲ್ಲಿ ಹಲವು ಪ್ರಕರಣಗಳನ್ನು ದಾಖಲಿಸಲಾಗಿತ್ತು. ತನಿಖೆ ಸಂದರ್ಭ ತೆಲಗಿಯೊಂದಿಗೆ ಹಲವು ಉನ್ನತ ಪೊಲೀಸ್ ಅಧಿಕಾರಿಗಳು ಹಾಗೂ ರಾಜಕಾರಣಿಗಳು ಶಾಮೀಲಾಗಿರುವುದು ಬೆಳಕಿಗೆ ಬಂದಿತ್ತು.
ಅಧಿಕಾರಿಗಳು ಹಾಗೂ ರಾಜಕಾರಣಿಗಳನ್ನು ಮನವೊಲಿಸಿ ತೆಲಗಿ ನಕಲಿ ಛಾಪಾ ಕಾಗದ ಮುದ್ರಿಸುತ್ತಿದ್ದರು. ಅದನ್ನು ಬ್ಯಾಂಕ್, ಸ್ಟಾಕ್ ಬ್ರೋಕರೇಜ್ ಸಂಸ್ಥೆ ಹಾಗೂ ವಿಮಾ ಕಂಪೆನಿಯಂತಹ ಸಂಸ್ಥೆಗಳಿಗೆ ದೊಡ್ಡ ಪ್ರಮಾಣದಲ್ಲಿ ಪೂರೈಸುತ್ತಿದ್ದರು. ಈ ದಂಧೆ 18 ರಾಜ್ಯಗಳ 70 ನಗರಗಳಲ್ಲಿ 350 ಏಜೆಂಟರ ಮೂಲಕ ನಿರ್ವಹಣೆಯಾಗುತ್ತಿತ್ತು ಎಂದು ಆರೋಪಿಸಲಾಗಿತ್ತು.