ಮಿಶೆಲ್, ಇತರ ಮಧ್ಯವರ್ತಿಗಳಿಗೆ 431 ಕೋಟಿ ರೂ. ಪಾವತಿಯ ದಾಖಲೆ ಸಂಗ್ರಹ: ಸಿಬಿಐ
ಹೊಸದಿಲ್ಲಿ, ಡಿ.31: ಆಗಸ್ಟಾ ವೆಸ್ಟ್‌ಲ್ಯಾಂಡ್ ವಿವಿಐಪಿ ಹೆಲಿಕಾಪ್ಟರ್ ಹಗರಣಕ್ಕೆ ಸಂಬಂಧಿಸಿದ ಮಹತ್ವದ ದಾಖಲೆಪತ್ರವನ್ನು ತಾನು ಸಂಗ್ರಹಿಸಿದ್ದು ಇದರಲ್ಲಿ ಮಧ್ಯವರ್ತಿಗಳಾದ ಕ್ರಿಶ್ಚಿಯನ್ ಮಿಶೆಲ್ ಮತ್ತು ಗಿಡೊ ಹಷ್ಕೆಗೆ ಪಾವತಿಸಿರುವ 58 ಮಿಲಿಯನ್ ಲಂಚದ ಹಣದಲ್ಲಿ ಕನಿಷ್ಟ 54 ಮಿಲಿಯನ್(431 ಕೋಟಿ ರೂ.) ಮೊತ್ತದ ಬಗ್ಗೆ ವಿವರವಿದೆ ಎಂದು ಸಿಬಿಐ ತಿಳಿಸಿದೆ.
2011ರ ಮೇ 8ರಂದು ದುಬೈಯಲ್ಲಿ ಮಿಶೆಲ್ ಹಾಗೂ ಹಷ್ಕೆ ನಡುವೆ ನಡೆದ ಒಡಂಬಡಿಕೆಯಲ್ಲಿ 58 ಮಿಲಿಯ ಮೊತ್ತದ ಬಗ್ಗೆ ಉಲ್ಲೇಖವಿದೆ ಎಂದು ಮೂಲಗಳು ತಿಳಿಸಿವೆ. ಒಪ್ಪಂದದಲ್ಲಿ ಭಾಗಿಯಾಗಿದ್ದ ‘ಟೀಮ್’ ಮತ್ತು ‘ಫ್ಯಾಮಿಲಿ’ ಎಂಬ ಸಂಕೇತನಾಮದ ಮಧ್ಯವರ್ತಿಗಳ ಎರಡು ತಂಡಗಳ ನಡುವಿನ ಭಿನ್ನಾಭಿಪ್ರಾಯವನ್ನು ಬಗೆಹರಿಸಲು ಈ ಮಾತುಕತೆ ವ್ಯವಸ್ಥೆಗೊಳಿಸಲಾಗಿತ್ತು. ಮಿಶೆಲ್‌ಗೆ 42 ಮಿಲಿಯನ್ ಮತ್ತು ತಮಗೆ 30 ಮಿಲಿಯನ್ ನೀಡುವ ಬಗ್ಗೆ ಎರಡನೇ ತಂಡ ತಕರಾರು ತೆಗೆದಿತ್ತು. ಅಂತಿಮವಾಗಿ ಮಿಶೆಲ್‌ಗೆ 30 ಮಿಲಿಯನ್, ಹಷ್ಕೆ ಮತ್ತು ಇತರರಿಗೆ 28 ಮಿಲಿಯನ್ ಪಾವತಿಸುವ ನಿರ್ಧಾರಕ್ಕೆ ಇಬ್ಬರೂ ಸಮ್ಮತಿಸಿದ್ದರು.
ದುಬೈಯಲ್ಲಿ ನಡೆದಿದ್ದ ಮಾತುಕತೆಗೂ ಮೊದಲೇ ಮಧ್ಯವರ್ತಿಗಳಿಗೆ ನೀಡಬೇಕಿದ್ದ ಬಹುತೇಕ ಹಣವನ್ನು ‘ಸಲಹಾ ಸೇವೆ’ಯ ಶುಲ್ಕದ ಹೆಸರಲ್ಲಿ ಪಾವತಿಸಲಾಗಿತ್ತು. ಮಿಶೆಲ್ ಹಾಗೂ ಇತರರು ‘ಟೀಂ’ ಎಂಬ ಹೆಸರಿನಲ್ಲಿ, ಹಷ್ಕೆ, ಜೆರೋಸಾ ಮತ್ತು ತ್ಯಾಗಿಯವರನ್ನು ‘ಫ್ಯಾಮಿಲಿ’ ಎಂಬ ಹೆಸರಿನಲ್ಲಿ ಉಲ್ಲೇಖಿಸಲಾಗುತ್ತಿತ್ತು. ಲಂಚದ ರೂಪದಲ್ಲಿ ಪಡೆದಿರುವ ಹಣವನ್ನು ತನ್ನ ತಂಡದ ಇತರರಿಗೆ ವರ್ಗಾಯಿಸಲು ದುಬೈಯ ಗ್ಲೋಬಲ್ ಸರ್ವಿಸಸ್ ಎಫ್‌ಝೆಡ್‌ಇ ಮತ್ತು ಲಂಡನ್‌ನ ಗ್ಲೋಬಲ್ ಟ್ರೇಡ್ ಆ್ಯಂಡ್ ಕಾಮರ್ಸ್ ಸರ್ವಿಸಸ್ ಎಂಬ ಸಂಸ್ಥೆಗಳನ್ನು ಮಿಶೆಲ್ ಬಳಸಿಕೊಂಡಿದ್ದಾನೆ ಎಂದು ಸಿಬಿಐ ತಿಳಿಸಿದೆ. ಹೆಲಿಕಾಪ್ಟರ್ ಪೂರೈಕೆ ವ್ಯವಹಾರದಲ್ಲಿ ಸಲಹೆ ಮತ್ತು ಸಹಾಯ ನೀಡಲು ಮಿಶೆಲ್‌ಗೆ ಆಗಸ್ಟಾ ವೆಸ್ಟ್‌ಲ್ಯಾಂಡ್ ಸಂಸ್ಥೆ 2010ರ ಎಪ್ರಿಲ್‌ನಿಂದ 2011ರ ಡಿಸೆಂಬರ್‌ವರೆಗೆ 6.5 ಮಿಲಿಯನ್ ಹಾಗೂ 2010ರ ಜೂನ್‌ನಿಂದ 2011ರ ಡಿಸೆಂಬರ್‌ವರೆಗೆ 18.20 ಮಿಲಿಯನ್ ಮೊತ್ತ ಪಾವತಿಸಿದೆ.
ಪವನ್ ಹನ್ಸ್ ಸಂಸ್ಥೆಯಿಂದ 14 ಡಬ್ಲೂಜಿ ಹೆಲಿಕಾಪ್ಟರ್‌ಗಳ ಮರುಖರೀದಿಯ ನೆಪದಲ್ಲಿ ಈ ಹಣ ಪಾವತಿಸಲಾಗಿದೆ. ಆದರೆ 2000ನೇ ಇಸವಿಯ ಬಳಿಕ ಪವನ್‌ಹನ್ಸ್ ಯಾವುದೇ ಹೆಲಿಕಾಪ್ಟರನ್ನು ಮಾರಿಲ್ಲ ಎಂಬುದು ತನಿಖೆಯಿಂದ ತಿಳಿದುಬಂದಿರುವುದಾಗಿ ಸಿಬಿಐ ತಿಳಿಸಿದೆ.
ಅಲ್ಲದೆ ಲಂಚದ ಹಣದಲ್ಲಿ ಭಾರತೀಯರಿಗೆ ನೀಡಲಾಗಿರುವ ಮೊತ್ತದ ಬಗ್ಗೆಯೂ ಮಾಹಿತಿ ಸಂಗ್ರಹಿಸಿರುವುದಾಗಿ ಸಿಬಿಐ ತಿಳಿಸಿದೆ. ದಿಲ್ಲಿ ಮೂಲದ ವಕೀಲ ಗೌತಮ್ ಖೇತಾನ್ ಹಾಗೂ ಅವರಿಗೆ ಸಂಬಂಧಿಸಿದ ಸಂಸ್ಥೆಗಳಿಗೆ 24 ಮಿಲಿಯನ್ ಮೊತ್ತ ಪಾವತಿಸಲಾಗಿದೆ. ಭಾರತೀಯ ವಾಯುಪಡೆಯ ಮಾಜಿ ಮುಖ್ಯಸ್ಥ ಎಸ್‌ಪಿ ತ್ಯಾಗಿ ಹಾಗೂ ಅವರ ಸಂಬಂಧಿಕರಿಗೆ 10.5 ಮಿಲಿಯನ್ ಹಣ ನೀಡಲು ಒಪ್ಪಂದವಾಗಿದ್ದು ಇದರಲ್ಲಿ 3 ಮಿಲಿಯನ್ ಹಣವನ್ನು ನೀಡಲಾಗಿದೆ ಎಂದು ಸಿಬಿಐ ತಿಳಿಸಿದೆ.