ಹಾರ್ವರ್ಡ್ ವಿವಿಯಲ್ಲಿ ಶೇ.101 ಅಂಕ ಪಡೆದ ಐಎಎಸ್ ಅಧಿಕಾರಿ!
ತಂದೆಯ ಕನಸು ನನಸಾಗಿಸಿದ ಅಂಕುರ್ ಗರ್ಗ್

ಹೊಸದಿಲ್ಲಿ, ಡಿ.31: ಐಐಟಿ ಹಳೆ ವಿದ್ಯಾರ್ಥಿ, 2002ನೇ ಬ್ಯಾಚ್ ನ ಐಎಎಸ್ ಅಧಿಕಾರಿ ಅಂಕುರ್ ಗರ್ಗ್ ಅವರಿಗೆ ಬಾಲ್ಯದಲ್ಲಿ ತಂದೆ ಹೇಳುತ್ತಿದ್ದ ಮಾತುಗಳು ಅಕ್ಷರಶಃ ನಿಜವಾಗಿವೆ. ಹಾರ್ವರ್ಡ್ ವಿಶ್ವವಿದ್ಯಾನಿಲಯದಲ್ಲಿ "ಅಂತರರಾಷ್ಟ್ರೀಯ ಅಭಿವೃದ್ಧಿ" ಕೋರ್ಸ್ ನ "ಬಂಡವಾಳ ರೂಪಿಸುವಿಕೆ ಮತ್ತು ಪ್ರಗತಿ" ಎಂಬ ವಿಷಯದಲ್ಲಿ ಅವರು 170 ಅಂಕಗಳ ಪೈಕಿ 171 ಅಂಕ ಪಡೆದಿದ್ದಾರೆ.
"ನಾನು ಶಾಲೆಯಲ್ಲಿದ್ದಾಗ ತಂದೆ, ಪರೀಕ್ಷೆಯಲ್ಲಿ 10ಕ್ಕೆ 10 ಅಂಕ ಬಂದರೆ ಸಾಲದು. 10ರಲ್ಲಿ 11 ಅಂಕ ಪಡೆಯಲು ಪ್ರಯತ್ನಿಸಬೇಕು ಎಂದು ಹೇಳುತ್ತಿದ್ದರು" ಎಂದು ಅಂಕುರ್ ತಮ್ಮ ಫೇಸ್ ಬುಕ್ ಪೋಸ್ಟ್ ನಲ್ಲಿ ಹೇಳಿಕೊಂಡಿದ್ದಾರೆ.
ಅವರು ತಮ್ಮ ಅಂಕಪಟ್ಟಿಯ ಪ್ರತಿಯನ್ನೂ ಪೋಸ್ಟ್ ಮಾಡಿದ್ದಾರೆ. ಇದಕ್ಕೆ ಖ್ಯಾತ ಅಂತಾರಾಷ್ಟ್ರೀಯ ಅರ್ಥಶಾಸ್ತ್ರಜ್ಞ ಜೆಫ್ರಿ ಫ್ರಾಂಕೆಲ್ ಸಹಿ ಮಾಡಿದ್ದಾರೆ. ಅತ್ಯುತ್ತಮ ಸಾಧನೆ ಮಾಡಲು ತಂದೆಯೇ ಪ್ರೇರಣೆ ಎಂದು ಗರ್ಗ್ ಡಿಸೆಂಬರ್ 21ರಂದು ಮಾಡಿದ ಪೋಸ್ಟ್‍ನಲ್ಲಿ ವಿವರಿಸಿದ್ದು, ಈ ಸಾಧನೆಯ ಕೀರ್ತಿಯನ್ನು ತಂದೆಗೆ ಸಮರ್ಪಿಸಿದ್ದಾರೆ.
ಮ್ಯಾಕ್ರೊ ಎಕನಾಮಿಕ್ಸ್ ಕೋರ್ಸ್‍ನ ಕೊನೆಯ ಪರೀಕ್ಷೆಯಲ್ಲಿ, ನನ್ನ ವಿದ್ಯಾರ್ಥಿ ಜೀವನದ ಕೊನೆಯ ಹಂತದಲ್ಲಿ 170ರಲ್ಲಿ 171 ಅಂಕ ಪಡೆದಿದ್ದೇನೆ. ಈ ಅಪೂರ್ವ ಸಾಧನೆಗೆ ಜೆಫ್ರಿ ಫ್ರಾಂಕೆಲ್ ಸ್ವತಃ ಸಹಿ ಮಾಡಿದ್ದಾರೆ!. ಚಿತ್ರದಲ್ಲಿ ಕಂಡುಬರುವಂತೆ ಅವರ ಅಂಕ ವಿವರಗಳಲ್ಲಿ 101 % ಎಂದು ನಮೂದಿಸಲಾಗಿದೆ.







