ವಳಚ್ಚಿಲ್ ಹಂಝ ಕೊಲೆ ಪ್ರಕರಣ: ಆರೋಪಿಗಳ ಖುಲಾಸೆ
ಮಂಗಳೂರು, ಡಿ.31: ನಗರದ ವಳಚ್ಚಿಲ್ ನಿವಾಸಿ ವಿ.ಎಚ್. ಹಂಝ ಎಂಬವರ ಕೊಲೆ ಪ್ರಕರಣದ ಆರೋಪಿಗಳಾದ ನೌಷದ್ ಯಾನೆ ಪಸ್ಸೆ ನೌಷದ್ ಮತ್ತು ಅಲ್ತಾಫ್ ಎಂಬವರನ್ನು ನಾಲ್ಕನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಖುಲಾಸೆಗೊಳಿಸಿದೆ.
ಪ್ರಕರಣದ ವಿವರ: 2016ರ ಜ.6ರಂದು ರಾತ್ರಿ ವಳಚ್ಚಿಲ್ ರೈಲ್ವೆಗೇಟ್ ಬಳಿ ರೈಲ್ವೆ ಹಳಿಯಲ್ಲಿ ಹಂಝ ಮೃತಪಟ್ಟಿದ್ದು, ಈ ಬಗ್ಗೆ ಮಂಗಳೂರು ರೈಲ್ವೆ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿತ್ತು.
ಇದೊಂದು ರೈಲಿಗೆ ಢಿಕ್ಕಿ ಹೊಡೆದ ಪ್ರಕರಣ ಎಂದು ಪೊಲೀಸರು ವರದಿ ಸಲ್ಲಿಸಿದ್ದರು. ಆದರೆ 2016ರ ಫೆ.12ರಂದು ವಳಚ್ಚಿಲ್ ನಿವಾಸಿಯೊಬ್ಬರು ಫರಂಗಿಪೇಟೆಯ ಬಾರ್‌ವೊಂದರಲ್ಲಿರುವಾಗ ಪ್ರಕರಣ ಆರೋಪಿಗಳಾದ ಅಲ್ತಾಫ್ ಮತ್ತು ನೌಷದ್‌ರವರು ಹಂಝ ಅವರನ್ನು ಕೊಲೆ ಮಾಡಿ ರೈಲ್ವೆ ಗೇಟಿಗೆ ಹಾಕಿದ ಬಗ್ಗೆ ಮಾತನಾಡಿಕೊಳ್ಳುತ್ತಿದ್ದರು.
ಈ ವಿಷಯ ಹಂಝರವರ ಮಗನಲ್ಲಿ ತಿಳಿಸಿದಾಗ ಅವರು ಈ ಬಗ್ಗೆ ರೈಲ್ವೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಕೊಲೆ ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ಮರು ತನಿಖೆ ನಡೆಸಿದ ಮಂಗಳೂರು ರೈಲ್ವೆ ಪೊಲೀಸರು ಈ ಪ್ರಕರಣದ ಆರೋಪಿಗಳಾದ ನೌಷದ್ ಯಾನೆ ಪಸ್ಸೆ ನೌಷದ್ ಮತ್ತು ಅಲ್ತಾಫ್ ನನ್ನು ವಶಕ್ಕೆ ಪಡೆದು ಕೂಲಂಕಷವಾಗಿ ವಿಚಾರಣೆ ನಡೆಸಿದರು.
ಜ.6ರಂದು ಸಂಜೆ 8ಗಂಟೆಗೆ ಹಂಝ ವಳಚ್ಚಿಲ್‌ನ ಬಸ್ ನಿಲ್ದಾಣ ಬಳಿ ಕುಳಿತುಕೊಂಡಿದ್ದರು. ಈ ಸಂದರ್ಭ ಆರೋಪಿಗಳು ಹಂಝವನ್ನು ಕುತ್ತಿಗೆ ಹಿಸುಕಿ ಕೊಲೆ ಮಾಡಿದ್ದು, ನಂತರ ಹೆಣವನ್ನು ರೈಲ್ವೆ ಹಳಿಯ ಮೇಲೆ ಮಲಗಿಸಿ ಪರಾರಿಯಾಗಿದ್ದರು. ರೈಲ್ವೆ ಪೊಲೀಸರು ಮೃತದೇಹವನ್ನು ನೋಡಿ ಇದೊಂದು ಅಸಹಜ ಪ್ರಕರಣ ಎಂದು ಕೇಸು ದಾಖಲಿಸಿದ್ದರು.
ವಿಚಾರಣೆ ಕೈಗೆತ್ತಿಕೊಂಡ ನಾಲ್ಕನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನ್ಯಾಯಾಧೀಶೆ ನೇರಳೆ ವೀರಭದ್ರಯ್ಯ ಭವಾನಿ ಅವರು ಪ್ರಕರಣದ ಆರೋಪಿಗಳ ಮೇಲಿನ ಆರೋಪವನ್ನು ಸಾಬೀತುಪಡಿಸುವಲ್ಲಿ ಪ್ರಾಸಿಕ್ಯೂಶನ್ ವಿಲವಾಗಿದೆ ಎಂಬುವುದನ್ನು ಮನಗಂಡು ಆರೋಪಿಗಳನ್ನು ಖುಲಾಸೆ ಗೊಳಿಸಿದರು. ಆರೋಪಿಗಳ ಪರವಾಗಿ ವೇಣುಕುಮಾರ್ ಮತ್ತು ಯುವರಾಜ್ ಕೆ. ಅಮೀನ್ ವಾದಿಸಿದ್ದರು.







