ಅಜಿತ್ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಕೊಣಾಜೆ ಠಾಣೆಗೆ ಮುತ್ತಿಗೆ: ದೂರು

ಕೊಣಾಜೆ, ಡಿ. 31: ಸುವರ್ಣ ನ್ಯೂಸ್ ಚಾನೆಲ್ ನಿರೂಪಕ ಅಜಿತ್ ಎಂಬವರು ಪ್ರವಾದಿ ಪೈಗಂಬರ್ ಅವರನ್ನು ಅವಹೇಳನಕಾರಿಯಾಗಿ ನಿಂದಿಸಿ ಹೇಳಿಕೆ ನೀಡಿರುವುದರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ವಿವಿಧ ಮುಸ್ಲಿಂ ಸಂಘಟನೆಗಳು ಕೊಣಾಜೆ ಠಾಣೆಗೆ ಮುತ್ತಿಗೆ ಹಾಕಿ ಸೋಮವಾರ ದೂರು ಸಲ್ಲಿಸಿದೆ.
ಮಂಜನಾಡಿ ಜುಮ್ಮಾ ಮಸೀದಿ ಮತ್ತದರ ವ್ಯಾಪ್ತಿಯಲ್ಲಿರುವ ಸಂಘಟನೆಗಳು ಮತ್ತು ಮಸೀದಿಗಳ ಸದಸ್ಯರು ಒಟ್ಟಾಗಿ ದೂರು ನೀಡಿದ್ದು, ಒಟ್ಟು 16 ದೂರುಗಳನ್ನು ಕೊಣಾಜೆ ಠಾಣೆಯಲ್ಲಿ ಸ್ವೀಕಾರ ಮಾಡಲಾಗಿದೆ.
ಅಜಿತ್ ವಿರುದ್ಧ ದೂರು ದಾಖಲು ಮಾಡಲೇಬೇಕೆಂದು ಒತ್ತಾಯಿಸಿ ಹಲವು ಮಸೀದಿಗಳ , ಸಂಘಟನೆಗಳ ಸಮಿತಿ ಸದಸ್ಯರು ಸೋಮವಾರ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಒತ್ತಡ ಹೇರಿದರು.
ಈ ಸಂದರ್ಭ ಮಾತನಾಡಿದ ಕೊಣಾಜೆ ಇನ್ಸ್‍ಪೆಕ್ಟರ್ ರವಿನಾಯ್ಕ್ ಅವರು, ಅಜಿತ್ ಅಹವೇಳನಕಾರಿ ಹೇಳಿಕೆ ವಿರುದ್ಧ ವಿಶ್ವ ವ್ಯಾಪ್ತಿಯಲ್ಲಿ ಪ್ರತಿಭಟನೆ ನಡೆಯುತ್ತಿದೆ. ಎಲ್ಲಾ ಠಾಣೆಗಳಲ್ಲಿ ದೂರು ಸ್ವೀಕಾರ ಆಗುತ್ತಿದೆ. ಇದು ಕೇವಲ ಕೊಣಾಜೆ ಠಾಣೆಗೆ ಸಂಬಂಧಿಸಿದ ದೂರು ಆಗದ ಕಾರಣ ಮೇಲಾಧಿಕಾರಿಗಳ ಆದೇಶ ಪರಿಗಣಿಸಿ ದೂರು ದಾಖಲಿಸಿ ಸೂಕ್ತ ಕಾನೂನು ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದರು.
ಈ ಸದಂರ್ಭ ಮಂಜನಾಡಿ ಜುಮಾ ಮಸೀದಿ ಕಾರ್ಯದರ್ಶಿ ಅಝೀಝ್ ಪರ್ತಿಪ್ಪಾಡಿ. ಕೆಎಂಕೆ ಮಂಜನಾಡಿ, ಎನ್‍ಎಸ್ ಕರೀಂ, ಇಝುದ್ದೀನ್ ಅಹ್ಸನಿ, ಇಬ್ರಾಹಿಂ ಮದನಿ , ಮೋನು ಕಲ್ಕಟ್ಟ, ಮಂಜನಾಡಿ ಗ್ರಾ.ಪಂ. ಅಧ್ಯಕ್ಷ ಮಹಮ್ಮದ್ ಅಸೈ ಇಸ್ಮಾಯಿಲ್ ದೊಡ್ಡಮನೆ, ಕುಂಞಿ ಬಾವ್, ಅಶ್ರಫ್ ಮೊದಲಾದವರು ಉಪಸ್ಥಿತರಿದ್ದರು.