ಮೀನುಗಾರರನ್ನು ಕಡೆಗಣಿಸಬೇಡಿ: ಡಾ. ಜಿ.ಶಂಕರ್
ಮಲ್ಪೆ, ಡಿ.31: ಕಡಲಿನಲ್ಲಿ ಸಂಕಷ್ಟದಿಂದ ದುಡಿಯುವ ಮೀನುಗಾರರನ್ನು ಸರಕಾರಗಳು ಕಡೆಗಣಿಸಬಾರದು ಎಂದು ಡಾ.ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಪ್ರವರ್ತಕ ಡಾ.ಜಿ.ಶಂಕರ್ ಹೇಳಿದ್ದಾರೆ.
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಷನ್, ಮೀನುಗಾರಿಕಾ ಇಲಾಖೆ ಸಹಭಾಗಿತ್ವದಲ್ಲಿ ರವಿವಾರ ಮಲ್ಪೆ ಬೀಚ್‌ನಲ್ಲಿ ಆಯೋಜಿಸಿದ್ದ ಬೃಹತ್ ಮತ್ಸ್ಯ ಮೇಳ ‘ಫಿಶ್ ಫೆಸ್ಟ್-2018’ನ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡುತಿದ್ದರು.
ಇತ್ತೀಚಿನ ದಿನಗಳಲ್ಲಿ ದಿನಗಳಲ್ಲಿ ಮೀನುಗಾರರು ಹಲವು ರೀತಿಯಲ್ಲಿ ಸಂಕಷ್ಟದಿಂದ ಬದುಕುವಂತಾಗಿದೆ. ಸರಕಾರದ ವತಿಯಿಂದ ಕೃಷಿಕರಿಗೆ ನೀಡುವ ಸೌಲಭ್ಯ ಹಾಗೂ ಪರಿಹಾರಗಳನ್ನು ಮೀನುಗಾರರಿಗೂ ಕೊಡುವಂತಾಗಬೇಕು ಎಂದವರು ಮನವಿ ಮಾಡಿದರು.
ಉತ್ತರ ಕರ್ನಾಟಕದಲ್ಲಿ ಒಬ್ಬ ರೈತ ಸಾವಿಗೀಡಾದರೆ ಆಡಳಿತ ವ್ಯವಸ್ಥೆ ಮೇಲೆ ಕೆಳಗಾಗುತ್ತದೆ. ಆದರೆ ಮೀನುಗಾರನಿಗೆ ಸಮಸ್ಯೆ ಆದರೆ ಅದನ್ನು ಸರಕಾರ ಗಂಭೀರವಾಗಿ ಪರಿಗಣಿಸುವುದಿಲ್ಲ ಎಂಬ ನೋವಿದೆ ಎಂದರು. ಮಲ್ಪೆಯ ಮೀನುಗಾರಿಕೆ ಬೋಟು ಮತ್ತು 7 ಮಂದಿ ಮೀನುಗಾರರು ನಾಪತ್ತೆಯಾಗಿ ಹಲವು ದಿನ ಕಳೆದರು ಸರಕಾರಗಳು ಇದನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ ಎಂದು ಅಸಮಾಧಾನ ವ್ಯಕ್ತ ಪಡಿಸಿದರು.
ಈ ನಿಟ್ಟಿನಲ್ಲಿ ಕೇಂದ್ರ ಸರಕಾರ, ರಕ್ಷಣಾ ಸಚಿವಾಲಯ ಮೀನುಗಾರರ ರಕ್ಷಣೆಗೆ ಕೂಡಲೇ ಕ್ರಮಕೈಗೊಳ್ಳಬೇಕು. ಈ ನಿಟ್ಟಿನಲ್ಲಿ ರಾಜ್ಯ ಬಿಜೆಪಿ ನಾಯಕರು ಕೇಂದ್ರದ ಮೆೀಲೆ ಒತ್ತಡ ಹೇರಬೇಕು ಎಂದರು.
ಕಾರ್ಯಕ್ರಮದಲ್ಲಿ ಡಾ.ಜಿ.ಶಂಕರ್, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಉದ್ಯಮಿ ಆನಂದ ಸಿ.ಕುಂದರ್, ಗುಜರಾತ್ ರಾಜ್ಯ ಸರಕಾರಿ ಮೀನುಗಾರಿಕೆ ಸಹಕಾರಿ ಸಂಘದ ಅಧ್ಯಕ್ಷ ವೆಲ್ಜಿಭಾಯಿ ಕೆ.ವುಸಾನಿ ಅವರನ್ನು ಸನ್ಮಾನಿಸಲಾಯಿತು.
ಶಾಸಕ ಸುನಿಲ್ ಕುಮಾರ್, ವಿಧಾನ ಪರಿಷತ್ತಿನ ವಿಪಕ್ಷ ನಾಯಕ ಕೋಟ ಶ್ರೀನಿವಾಸ್ ಪೂಜಾರಿ, ಶಾಸಕ ಲಾಲಾಜಿ ಮೆಂಡನ್, ಜಿಪಂ ಅಧ್ಯಕ್ಷ ದಿನಕರ ಬಾಬು, ಉಪಾಧ್ಯಕ್ಷೆ ಶೀಲಾ ಕೆ.ಶೆಟ್ಟಿ, ಮೀನುಗಾರರ ಸಂಘದ ಅಧ್ಯಕ್ಷ ಸತೀಶ್ ಕುಂದರ್, ಅದಾನಿ ಯುಪಿಸಿಎಲ್ ಅಧ್ಯಕ್ಷ ಕಿಶೋರ್ ಆಳ್ವ, ನಗರಸಭೆ ಸದಸ್ಯೆ ಲಕ್ಷ್ಮೀ ಮಂಜುನಾಥ ಕೊಳ, ಉದ್ಯಮಿ ಮನೋಹರ ಶೆಟ್ಟಿ, ಉಡುಪಿ ತಾಪಂ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್, ದ.ಕ ಜಿಲ್ಲಾ ಮೋಗವೀರ ಮಹಾಸಂಘದ ಅಧ್ಯಕ್ಷ ಜಯ ಸಿ.ಕೊಟ್ಯಾನ್ ಮುಂತಾದವರು ಉಪಸ್ಥಿತರಿದ್ದರು.
ಮೀನುಗಾರಿಕೆ ಫೆಡರೇಶನ್ ಅಧ್ಯಕ್ಷ ಯಶಪಾಲ್ ಸುವರ್ಣ ಸ್ವಾಗತಿಸಿದರು. ಚಂದ್ರೇಶ್ ಪಿತ್ರೋಡಿ ಕಾರ್ಯಕ್ರಮ ನಿರೂಪಿಸಿದರು. ಸತೀಶ್ಚಂದ್ರ ಶೆಟ್ಟಿ ವಂದಿಸಿದರು.