ಮಂಗಳೂರು ಕರಾವಳಿ ಉತ್ಸವದಲ್ಲಿ ಜನಾಕರ್ಷಣೆಯ ಕೇಂದ್ರವಾಗಿ ‘ಐಸ್ ವರ್ಲ್ಡ್’ !
ವಸ್ತುಪ್ರದರ್ಶನ-ಮಾರಾಟ-ಮನೋರಂಜನೆ ಕಾರ್ಯಕ್ರಮ

ಮಂಗಳೂರು, ಡಿ.31: ನಗರದ ಲಾಲ್‌ಬಾಗ್ ಬಳಿಯ ಮಂಗಳಾ ಕ್ರೀಡಾಂಗಣದ ಸಮೀಪ ನಡೆಯುತ್ತಿರುವ ಕರಾವಳಿ ಉತ್ಸವದಲ್ಲಿರುವ ‘ಐಸ್ ವರ್ಲ್ಡ್’ ಜನಾಕರ್ಷಣೆಯ ಕೇಂದ್ರವಾಗುತ್ತಿದೆ.
ಡಿಸೆಂಬರ್ 21ರಿಂದ ಆರಂಭಗೊಂಡ ಕರಾವಳಿ ಉತ್ಸವವು ಫೆಬ್ರವರಿವರೆಗೂ ಮುಂದುವರಿಯಲಿದ್ದು, ದಿನದಿಂದ ದಿನಕ್ಕೆ ಸಾವಿರಾರು ಜನರು ಈ ಉತ್ಸವದಲ್ಲಿ ಭಾಗಿಯಾಗುತ್ತಿದ್ದಾರೆ. ಇಲ್ಲಿ ಸುಮಾರು 70ಕ್ಕೂ ಅಧಿಕ ಸ್ಟಾಲ್‌ಗಳಿವೆ. ಅದರಲ್ಲಿ ಬಟ್ಟೆಬರೆ, ಫ್ಯಾನ್ಸಿ, ಟಾಯ್ಸಿ, ಪ್ಲಾಸ್ಟಿಕ್ ಐಟಂ, ಆಟಿಕೆ ವಸ್ತುಗಳು, ಚಪ್ಪಲಿ-ಶೂ ಇತ್ಯಾದಿ ಮಳಿಗೆಯೂ ಸೇರಿವೆ.
ಈ ಬಾರಿಯ ಕರಾವಳಿ ಉತ್ಸವದಲ್ಲಿ ‘ಐಸ್ ವರ್ಲ್ಡ್’ ಜನಾಕರ್ಷಣೆಯ ಕೇಂದ್ರವಾಗುತ್ತಿದೆ. ಉತ್ಸವದ ಮೈದಾನವಿಡೀ ಸುತ್ತಾಡಿದ ಬಳಿಕ ‘ಐಸ್ ವರ್ಲ್ಡ್’ನೊಳಗೆ ಒಮ್ಮೆ ಹೊಕ್ಕರೆ ಸಾಕು, ಮನಸ್ಸು-ದೇಹಕ್ಕೆ ಆಹ್ಲಾದಕರ ಅನುಭವವಾಗುತ್ತದೆ. ಈ ಕೇಂದ್ರದೊಳಗೆ ಮಂಜುಗಡ್ಡೆಯನ್ನು ರಾಶಿ ಹಾಕಲಾಗಿದ್ದು, ಇದರೊಳಗೆ ಕೆಲಕಾಲ ವಿಹರಿಸಿ ಸಂತೃಪ್ತಿ ಪಡೆಯಬಹುದಾಗಿದೆ. ಇದೇ ಮೊದಲ ಬಾರಿಗೆ ಇದರ ಆಯೋಜಕರು ಇದನ್ನು ಇಲ್ಲಿ ಅಳವಡಿಸಿದ ಕಾರಣ ಜನರು ಹೆಚ್ಚಿನ ಸಂಖ್ಯೆಯಲ್ಲಿ ಇದರೊಳಗೆ ಪ್ರವೇಶಿಸಿ ಸಂತಸಪಡುವ ದೃಶ್ಯ ಸಾಮಾನ್ಯವಾಗಿ ಕಾಣಬಹುದಾಗಿದೆ.
ಉಳಿದಂತೆ ಜೋಯಿಂಟ್ ವ್ಹೀಲ್, ಬ್ರೇಕ್‌ಡ್ಯಾನ್ಸ್, ಟೈಟಾನಿಕ್, ಜಂಪಿಂಗ್ ಬೆಡ್ ಸಹಿತ ಮಕ್ಕಳಾಟದ ಅಮ್ಯೂಸ್‌ಮೆಂಟ್ ಕೂಡಾ ಇಲ್ಲಿದೆ. ಅಲ್ಲದೆ ತಂಪಾದ ಪಾನೀಯ, ಗೋಬಿಮಂಚೂರಿ, ಶವರ್ಮ, ನೂಡಲ್ಸ್ ಸಹಿತ ನಾಲಗೆಯ ರುಚಿಯನ್ನು ಹೆಚ್ಚಿಸುವ ಸ್ವಾಧಿಷ್ಟಕರ ಫುಡ್‌ಕೋರ್ಟ್ ಕೂಡ ಗ್ರಾಹಕರ ಗಮನ ಸೆಳೆಯುತ್ತಿವೆ. ಅದಲ್ಲದೆ ‘ಸೆಲ್ಫಿ ಫೋಟೊ’ ತೆಗೆದುಕೊಳ್ಳಲು ಪ್ರತ್ಯೇಕ ಗ್ಯಾಲರಿಯನ್ನೂ ಅಳವಡಿಸಲಾಗಿದೆ. ಈ ಗ್ಯಾಲರಿಯಲ್ಲಿ ದೇಶ-ವಿದೇಶದ ಪ್ರಖ್ಯಾತ ಸ್ಥಳಗಳು, ಕಟ್ಟಡಗಳು, ಪ್ರತಿಮೆಗಳು, ಖ್ಯಾತನಾಮರ ಚಿತ್ರಗಳಿದ್ದು, ಪ್ರೇಕ್ಷಕರು ಇಲ್ಲಿ ಉತ್ಸಾಹದಿಂದ ಸೆಲ್ಫಿ ತೆಗೆದುಕೊಳ್ಳುತ್ತಿದ್ದಾರೆ.
ಪ್ರತೀ ದಿನ ಸಂಜೆ 4 ರಿಂದ ರಾತ್ರಿ 9:30ರವರೆಗೆ ಕರಾವಳಿ ಉತ್ಸವ ಮೈದಾನ ತೆರದಿರುತ್ತದೆ. ಈಗಾಗಲೆ ಕುಂದಾಪುರ, ಉಡುಪಿ, ಕಾಸರಗೋಡು, ಪುತ್ತೂರು, ಸುಳ್ಯ, ಬೆಳ್ತಂಗಡಿ, ಬಂಟ್ವಾಳ ಸಹಿತ ಜಿಲ್ಲೆಯ ನಾನಾ ಕಡೆಯ ಪ್ರೇಕ್ಷಕರು ಆಗಮಿಸುತ್ತಿದ್ದಾರೆ. ಶನಿವಾರ ಮತ್ತು ರವಿವಾರ ಪ್ರೇಕ್ಷಕರ ಸಂಖ್ಯೆಯಲ್ಲಿ ಹೆಚ್ಚಳ ಕಂಡು ಬರುತ್ತದೆ ಎಂದು ಆಯೋಜಕರು ಅಭಿಪ್ರಾಯಪಡುತ್ತಾರೆ.
ಆರಂಭದಲ್ಲಿ ಪ್ರೇಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಬಂದಿಲ್ಲ ನಿಜ. ಆದರೆ ಶನಿವಾರ ಮತ್ತು ರವಿವಾರ ಹೆಚ್ಚಿನ ಜನರು ಆಗಮಿಸಿದ್ದಾರೆ. ಇದೀಗ ಎಲ್ಲಾ ಸ್ಟಾಲ್ ಗಳೂ ಭರ್ತಿಯಾಗಿವೆ. ಜನರು ಸಹಜವಾಗಿ ಆಕರ್ಷಿತರಾಗುತ್ತಿದ್ದಾರೆ. ವ್ಯಾಪಾರವೂ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಎಂದು ಸ್ಟಾಲ್‌ವೊಂದರ ಮ್ಯಾನೇಜರ್ ‘ಪತ್ರಿಕೆ’ಗೆ ತಿಳಿಸಿದ್ದಾರೆ.
ಶಾಲಾ ಮಕ್ಕಳಿಗೆ ವಿಶೇಷ ರಿಯಾಯಿತಿ: ಕರಾವಳಿ ಉತ್ಸವದಲ್ಲಿ ಸಾರ್ವಜನಿಕರಲ್ಲದೆ ಶಾಲೆಯ ಮಕ್ಕಳು ಕೂಡಾ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಮತ್ತು ಇಲ್ಲಿನ ಸೌಂದರ್ಯ ಸವಿಯಬೇಕು, ಸಂಭ್ರಮದಲ್ಲಿ ತೇಲಬೇಕು. ಈ ನಿಟ್ಟಿನಲ್ಲಿ ಶಾಲೆಗಳಿಗೆ ತೆರಳಿ ಪ್ರತಿಯೊಬ್ಬ ವಿದ್ಯಾರ್ಥಿಗೆ 100 ರೂ.ಗೆ 1 ಕೂಪನ್ ನೀಡಲಾಗುತ್ತದೆ. ಕೂಪನ್ ಪಡೆದವರು ಸಂಜೆ 4ರಿಂದ ರಾತ್ರಿ 9:30ರವರೆಗೆ ಇಲ್ಲಿ ಪ್ರವೇಶ ಪಡೆದು ‘ಐಸ್ ವರ್ಲ್ಡ್’ ಸಹಿತ ಅಮ್ಯೂಸ್‌ಮೆಂಟ್‌ನ ಪ್ರಯೋಜನ ಪಡೆದುಕೊಳ್ಳಬಹುದು. ಈ ಯೋಜನೆಗೆ ಈಗಾಗಲೆ ಚಾಲನೆ ನೀಡಲಾಗಿದ್ದು, ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯುವಂತಹ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಕರಾವಳಿ ಉತ್ಸವದ ವಸ್ತುಪ್ರದರ್ಶನ-ಮಾರಾಟದ ಗುತ್ತಿಗೆ ವಹಿಸಿಕೊಂಡ ಮುಶ್ತಾಕ್ ಮತ್ತು ಫಾರೂಕ್ ತಿಳಿಸಿದ್ದಾರೆ.