ಭೀಮಾ ಕೋರೆಂಗಾವ್ ವಿಜಯ ದಿವಸದಲ್ಲಿ ಪ್ರೊ.ಉಮೇಶ್ಚಂದ್ರ
'ದಲಿತರ ಸ್ವಾಭಿಮಾನಕ್ಕೆ ಸಾಕ್ಷಿ ಭೀಮಾ ಕೋರೆಂಗಾವ್ ಯುದ್ಧ'
ಮಂಗಳೂರು, ಡಿ.31: ದಲಿತ ಇತಿಹಾಸದ ಹಲವು ಕಥನಗಳನ್ನು ಅಂಬೇಡ್ಕರ್ ತೋರಿಸಿಕೊಟ್ಟಿದ್ದಾರೆ. ದಲಿತರ ಸ್ವಾಭಿಮಾನಕ್ಕೆ ಭೀಮಾಕೋರೆಂಗಾವ್ ಸ್ಥಂಭ ಸಾಕ್ಷಿಯಾಗಿ ನಿಂತಿದೆ. ಇದನ್ನು ಹಾಳುಮಾಡಲು ಕೆಲವು ಮತಾಂಧರು ಕಳೆದ ವರ್ಷ ಪ್ರಯತ್ನಿಸಿದರು. ಬಾಬ್ರಿ ಮಸೀದಿಯ ಸ್ಥಿತಿ ಈ ಸ್ತಂಭಕ್ಕೆ ಬರ ದಂತೆ ನಾವು ತಡೆಯಬೇಕಾಗಿದೆ ಎಂದು ಪ್ರೊ. ಉಮೇಶ್ಚಂದ್ರ ತಿಳಿಸಿದರು.
ನಗರದ ಎನ್‌ಜಿಒ ಸಭಾಂಗಣದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಆಯೋಜಿಸಿದ್ದ ಶೋಷಿತರ ಮೊತ್ತ ಮೊದಲ ಸ್ವಾಭಿಮಾನದ ಭೀಮಾ ಕೋರೆಂಗಾವ್ ವಿಜಯ ದಿವಸದ ಅಂಗವಾಗಿ ಸೋಮವಾರ ನಡೆದ ವಿಚಾರ ಸಂಕಿರಣದಲ್ಲಿ ಮಾತನಾಡಿದರು.
ದೇಶದ ಇತಿಹಾಸದಲ್ಲಿ ಭೀಮಾಕೋರೆಂಗಾವ್ ಯುದ್ದ ಮಹತ್ವದ್ದಾಗಿದೆ. 500 ಜನ ದಲಿತ ಮಹಾಡ್ ಸೈನಿಕರು 30ಸಾವಿರ ಪೇಶ್ವೆಗಳ ವಿರುದ್ಧ ವೀರಾ ವೇಶದಿಂದ ಹೋರಾಡಿ ದಿಗ್ವಿಜಯವನ್ನು ತಂದು ಕೊಟ್ಟಿದ್ದಾರೆ ಇದನ್ನು ನೆನೆಸಿಕೊಳ್ಳಬೇಕಾದುದು ಇಂದಿನ ಅಗತ್ಯ ಎಂದು ಹೇಳಿದರು.
ದಲಿತರ ಬದುಕಿನ ಬವಣೆಗಳೂ ಇವೆ. ಅತ್ಯಾಚಾರ, ಕೊಲೆಗಳು ಇಂದಿಗೂ ನಡೆಯುತ್ತಲೇ ಇದೆ. ಪೇಶ್ವೆಗಳ ಕಾಲದಲ್ಲಿ ದಲಿತರು ಹೊಸ ಬಟ್ಟೆ ಉಡುವಂತಿ ರಲಿಲ್ಲ. ದೂರದಲ್ಲೇ ನಿಂತು ಬಟ್ಟೆ ಕೇಳುವ ಸ್ಥಿತಿ ಇತ್ತು. ದಲಿತನಿಗೆ ಬೇಕಾದ ಬಟ್ಟೆಗಳನ್ನು ಹರಿದು ಮಣ್ಣಿನಲ್ಲಿ ಅದ್ದಿ ತೆಗೆದು ದಲಿತರಿಗೆ ನೀಡುವ ಪದ್ಧತಿ ಇತ್ತು. ಇಂತಹ ಘಟನೆಗಳು ಖೈರ್ಲಾಂಜಿ, ಕಂಬಾಲಪಲ್ಲಿ ಘಟನೆಗಳವರೆಗೂ ನಡೆಯಿತು. ದಲಿತರು ತಿರುಗಿಸಿ ಹೊಡೆದದ್ದು ಕಡಿಮೆ. ಹೊಡೆದ ಸಾಹಿತ್ಯವನ್ನು ಬರೆದರೆ ಯಾರಿಗೂ ಇಷ್ಟವಾಗುವುದಿಲ್ಲ. ದಲಿತ ಸಾಹಿತಿಗಳಿಗೇ ಪಥ್ಯವಾಗದಿರುವುದು ದುರಂತ ಎಂದು ವಿಷಾದ ವ್ಯಕ್ತಪಡಿಸಿದರು.
ಶಿವಾಜಿಯ ಸೈನ್ಯಕ್ಕೆ ದಲಿತರು, ಮುಸ್ಲಿಮರು ಸೇರಿಕೊಂಡಿದ್ದರು. ಶಿವಾಜಿಯ ಪೋಷಾಕು, ಕಿರೀಟ, ಖಡ್ಗಗಳಲ್ಲಿ ಇದರ ಕುರುಹು ಕಾಣಬಹುದು. ಶಿವಾಜಿ ಮತಾಂಧನಾಗಿರಲಿಲ್ಲ. ಟಿಪ್ಪು ಸುಲ್ತಾನ್ ಕಾಲದಲ್ಲೂ ಮಲಬಾರ್ ಪ್ರಾಂತದಲ್ಲಿ ಎದೆತೆರಿಗೆಯನ್ನು ರದ್ದುಪಡಿಸಿದ್ದ. ತನ್ನ ಸೈನ್ಯದಲ್ಲಿ ದಲಿತರನ್ನು ಸೇರಿಸಿ ಕೊಂಡದ್ದಕ್ಕಿಂತಲೂ ಹೆಚ್ಚಾಗಿ ಶಸ್ತ್ರಾಗಾರ, ಕೋಟೆಯ ಕಾವಲಿಗೂ ನೇಮಿಸಿದ್ದ. ಬ್ರಿಟಿಷರು 1702ರಲ್ಲಿ ಬೃಹತ್ ಪ್ರಮಾಣದಲ್ಲಿ ದಲಿತರನ್ನು ನೇಮಿಸಿಕೊಂಡಿದ್ದರೆನ್ನುವುದನ್ನು ಅಂಬೇಡ್ಕರ್ ದಾಖಲಿಸಿದ್ದಾರೆ ಎಂದು ಮಾಹಿತಿ ನೀಡಿದರು.
ಭಾರತಕ್ಕೆ ಯಾರೇ ಹೊರಗಿನಿಂದ ದಾಳಿ ನಡೆಸಿದರೂ ಆಸೆಗಣ್ಣಿನಿಂದ ಇವರಾದರೂ ಬ್ರಾಹ್ಮಣಶಾಹಿ ಮತ್ತು ಮನುವಾದದಿಂದ ಬಿಡುಗಡೆ ಮಾಡಬಲ್ಲರೇ ಎಂದು ನೋಡುತ್ತಿದ್ದರು. ಇದು ಸಹಜವಾಗಿತ್ತು. ಅಂತೆಯೇ ಬ್ರಿಟಿಷರ ಜೊತೆಗೂ ದಲಿತರು ಸೇರಿಕೊಂಡರು. ರಾಬರ್ಟ್ ಕ್ಲೈವ್ ಬ್ರಿಟಿಷ್ ರಾಣಿಗೆ ಪತ್ರ ಬರೆದು, ಇಲ್ಲಿ ಕಪ್ಪು ಜನ ಇದ್ದಾರೆ. ಇವರು ಊರೊಳಗೆ ಇರುವುದಿಲ್ಲ. ರಾಜರು, ಚಕ್ರವರ್ತಿಗಳು, ಆಡಳಿತಗಾರರು ತಮ್ಮ ನಾಡಿನಲ್ಲಿ ಇವರನ್ನು ಪರಿಗಣಿಸುತ್ತಿಲ್ಲ. ಇವರನ್ನು ನಮ್ಮ ಸೈನ್ಯಕ್ಕೆ ಸೇರಿಸಿಕೊಂಡರೆ ದೇಶೀ ರಾಜರು ಕೇಳುವುದಿಲ್ಲ ಎಂದು ಪತ್ರ ಬರೆದಿದ್ದನ್ನು ಅಂಬೇಡ್ಕರ್ ದಾಖಲಿಸಿದ್ದಾರೆ ಎಂದರು.
ದಲಿತರ ಪರಾಕ್ರಮವನ್ನು ನೋಡಿದ ಬ್ರಿಟಿಷರು ತನ್ನ ಸೈನ್ಯದಲ್ಲಿ ಇವರನ್ನು ಸೇರಿಸಿಕೊಂಡರು. ಐನೂರು ಜನ ಇಡೀ ಬ್ರಿಟಿಷ್ ಸೈನ್ಯಕ್ಕೆ ಸ್ಫೂರ್ತಿಯಾದರು. ಇದಕ್ಕಾಗಿ ಭೀಮಾ ಕೋರೆಂಗಾವ್‌ನಲ್ಲಿ ತನ್ನ ಕೃತಜ್ಞತೆ ಸಲ್ಲಿಸಲು ವಿಜಯಸ್ಥಂಭವನ್ನು ನಿರ್ಮಿಸಿದ್ದಾರೆ. ನಾವು ಅಂದಿನ ದಲಿತ ಸಮುದಾಯದ ಧೈರ್ಯ ಮತ್ತು ಸ್ವಾಭಿಮಾನಕ್ಕಾಗಿ ಈ ಘಟನೆಯನ್ನು ನೆನೆಸಿಕೊಳ್ಳಬೇಕು. ನಮಗೆ ಇವತ್ತಿಗೂ ಆ ಶಕ್ತಿ ಇದೆ. ಆ ಶಕ್ತಿಯನ್ನು ನಾವು ಚಲಾಯಿದುವುದೊಂದೇ ಬಾಕಿಯಿದೆ ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಎಂ.ದೇವದಾಸ್ ಮಾತನಾಡಿದರು. ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ರಘು ಎಕ್ಕಾರು ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ದಸಂಸ ಜಿಲ್ಲಾ ಮಹಿಳಾ ಸಂಚಾಲಕಿ ಸರೋಜಿನಿ ಉಪಸ್ಥಿತರಿದ್ದರು. ಕೃಷ್ಣಾನಂದ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.