ರಕ್ಷಣಾ ಒಪ್ಪಂದದಲ್ಲಿ ಸೋನಿಯಾ, ರಾಹುಲ್ ಹಸ್ತಕ್ಷೇಪ ನಡೆಸಿಲ್ಲ: ಎ.ಕೆ. ಆ್ಯಂಟನಿ

ಹೊಸದಿಲ್ಲಿ, ಡಿ.31: ಯುಪಿಎ ಅವಧಿಯಲ್ಲಿ ನಡೆದಿದ್ದ ಯಾವುದೇ ರಕ್ಷಣಾ ವ್ಯವಹಾರ ಒಪ್ಪಂದದಲ್ಲಿ ಮಾಜಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅಥವಾ ಹಾಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹಸ್ತಕ್ಷೇಪ ನಡೆಸಿಲ್ಲ ಎಂದು ಮಾಜಿ ರಕ್ಷಣಾ ಸಚಿವ, ಹಿರಿಯ ಕಾಂಗ್ರೆಸ್ ಮುಖಂಡ ಎ.ಕೆ.ಆ್ಯಂಟನಿ ಹೇಳಿದ್ದಾರೆ.
ಸುಳ್ಳನ್ನು ಸೃಷ್ಟಿಸಲು ತನಿಖಾ ಸಂಸ್ಥೆಗಳನ್ನು ಕೇಂದ್ರ ಸರಕಾರ ದುರ್ಬಳಕೆ ಮಾಡಿಕೊಂಡಿದೆ ಎಂದು ಆರೋಪಿಸಿದ ಅವರು, ಈ ವ್ಯವಹಾರದಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಇಟಲಿಯಿಂದ ವರದಿ ಬಂದ ತಕ್ಷಣ ಆಗ ರಕ್ಷಣಾ ಸಚಿವನಾಗಿದ್ದ ತಾನು ಸಿಬಿಐ ತನಿಖೆಗೆ ಆದೇಶಿಸಿದ್ದೆ. ಈ ಪ್ರಕರಣದ ವಿರುದ್ಧ ಇಟಲಿಯಲ್ಲಿ ಹೋರಾಡಲು ಅಂದಿನ ಯುಪಿಎ ಸರಕಾರ ನಿರ್ಧರಿಸಿತು ಮತ್ತು ಅಂತಿಮವಾಗಿ ಗೆಲುವು ಪಡೆಯಿತು ಎಂದು ಆ್ಯಂಟನಿ ಹೇಳಿದರು.
ಯುಪಿಎ ಅವಧಿಯಲ್ಲಿ ಯಾವುದೇ ಒಪ್ಪಂದದ ಬಗ್ಗೆ ಮಾಧ್ಯಮದಲ್ಲಿ ಭ್ರಷ್ಟಾಚಾರದ ಆರೋಪ ಕೇಳಿಬಂದಾಗ ತಕ್ಷಣ ತನಿಖೆ ನಡೆಸಿದ್ದೇವೆ. ಅಮೆರಿಕ, ಸಿಂಗಾಪುರ ಮತ್ತು ರಶ್ಯದ ಸಂಸ್ಥೆಯೂ ಸೇರಿದಂತೆ ಆರು ಬಲಿಷ್ಟ ಸಂಸ್ಥೆಗಳನ್ನು ನಾವು ಕಪ್ಪುಪಟ್ಟಿಗೆ ಸೇರಿಸಿದ್ದೆವು. ಇದು ನಮ್ಮ ಸಾಧನೆಯ ದಾಖಲೆಯಾಗಿದೆ. ಆದರೆ ಮೋದಿ ನೇತೃತ್ವದ ಸರಕಾರ ತನಿಖೆಯ ನಿಟ್ಟಿನಲ್ಲಿ ಯಾವುದಾದರೂ ಸಾಧನೆಯ ದಾಖಲೆ ಮಾಡಿದೆಯೇ ಎಂದವರು ಪ್ರಶ್ನಿಸಿದ್ದಾರೆ.





