ಉತ್ತರಪ್ರದೇಶ: ಕಲ್ಲೆಸೆದು ಪೊಲೀಸ್ ಕಾನ್ಸ್‌ಟೇಬಲ್ ಹತ್ಯೆ ಪ್ರಕರಣ; 27 ಮಂದಿಯ ಬಂಧನ
ಘಾಝಿಪುರ, ಡಿ. 31: ಪೊಲೀಸ್ ಕಾನ್ಸ್‌ಟೇಬಲ್ ಸಾವಿಗೆ ಕಾರಣವಾದ ಘಾಝಿಪುರ ಕಲ್ಲು ತೂರಾಟ ಘಟನೆಗೆ ಸಂಬಂಧಿಸಿ 27 ಜನರನ್ನು ಬಂಧಿಸಲಾಗಿದೆ ಎಂದು ಗಾಝಿಪುರ ಪೊಲೀಸ್ ಅಧೀಕ್ಷಕ ಸೋಮವಾರ ತಿಳಿಸಿದ್ದಾರೆ.
ಘಾಝಿಪುರದ ನೌನೇರಾ ಪ್ರದೇಶದಲ್ಲಿ ಡಿಸೆಂಬರ್ 29ರಂದು ನಿಶದ್ ಪಕ್ಷ ಏರ್ಪಡಿಸಿದ ಪ್ರತಿಭಟನ ರ್ಯಾಲಿ ಸಂದರ್ಭ ಕೆಲವು ಸದಸ್ಯರು ಕಲ್ಲು ತೂರಾಟ ನಡೆಸಿದ ಪರಿಣಾಮ ಪೊಲೀಸ್ ಕಾನ್ಸ್‌ಟೆಬಲ್ ಸುರೇಶ್ ವತ್ಸ್ ಹಾಗೂ ಇತರ ಇಬ್ಬರು ನಾಗರಿಕರು ಮೃತಪಟ್ಟಿದ್ದರು.
ಸುರೇಶ್ ಅವರನ್ನು ಘಾಝಿಪುರದಲ್ಲಿ ನಡೆದ ಪ್ರಧಾನಿ ನರೇಂದ್ರ ಮೋದಿ ಅವರ ರ್ಯಾಲಿಯಲ್ಲಿ ಭದ್ರತೆಗೆ ನಿಯೋಜಿಸಲಾಗಿತ್ತು. ಅವರು ಕರ್ತವ್ಯ ಮುಗಿಸಿ ಹಿಂದಿರುಗಿ ಬರುತ್ತಿದ್ದಾಗ ಈ ಘಟನೆ ನಡೆದಿದೆ.
ಈ ನಡುವೆ ಕೇಂದ್ರ ಸಚಿವ ಹಾಗೂ ಉತ್ತರಪ್ರದೇಶದ ಸಂಸದ ಮಹೇಶ್ ಶರ್ಮಾ, ಇದು ಪ್ರತಿಕ್ರಿಯಾತ್ಮಕ ಘಟನೆ ಹಾಗೂ ರಾಜಕೀಯಗೊಳಿಸಬಾರದು ಎಂದಿದ್ದಾರೆ.
‘‘ಇದು ದುರಾದೃಷ್ಟಕರ, ಆದರೆ, ಇದನ್ನು ರಾಜ್ಯದ ಕಾನೂನು ಸುವ್ಯವಸ್ಥೆ ಯೊಂದಿಗೆ ಜೋಡಿಸಬಾರದು. ಇದು ಪ್ರತಿಕ್ರಿಯಾತ್ಮಕ ಘಟನೆ. ಮುಖ್ಯಮಂತ್ರಿ ಅವರು ಸ್ವಯಂಪ್ರೇರಿತವಾಗಿ ಕೂಡಲೇ ಕ್ರಮ ತೆಗೆದುಕೊಂಡಿದ್ದಾರೆ’’ ಎಂದು ಶರ್ಮಾ ಹೇಳಿದ್ದಾರೆ.