ಚಿಕ್ಕಮಗಳೂರು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಆಹ್ವಾನ ಪತ್ರಿಕೆ ಬಿಡುಗಡೆ

ಮೂಡಿಗೆರೆ, ಜ.1: ಚಿಕ್ಕಮಗಳೂರು ಜಿಲ್ಲಾ 15ನೇ ಕನ್ನಡ ಸಾಹಿತ್ಯ ಸಮ್ಮೇಳನ ಮೂಡಿಗೆರೆಯ ಅಡ್ಯಂತಾಯ ರಂಗಮಂದಿರದಲ್ಲಿ ಜ.18ರಿಂದ 19ರವರೆಗೆ ನಡೆಯಲಿದೆ ಎಂದು ಸ್ವಾಗತ ಸಮಿತಿ ಪ್ರಧಾನ ಕಾರ್ಯದರ್ಶಿ ಜಿಲ್ಲಾ ಕಸಾಪ ಅಧ್ಯಕ್ಷ ಕುಂದೂರು ಅಶೋಕ್ ತಿಳಿಸಿದರು.
ಸಮ್ಮೇಳನದ ಆಹ್ವಾನ ಪತ್ರಿಕೆ ಬಿಡುಗಡೆ ಕಾರ್ಯಕ್ರಮದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ 10 ಸಾವಿರ ಆಹ್ವಾನ ಪತ್ರಿಕೆ ಮುದ್ರಿಸಲಾಗಿದೆ. ಎರಡು ದಿನಗಳವರೆಗೆ ನಡೆಯುವ ಸಮ್ಮೇಳನಲ್ಲಿ ಪ್ರತಿನಿಧಿಗಳಾಗಿ ಪಾಲ್ಗೊಳ್ಳುವ ತಾಲೂಕಿನ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರಿಗೆ ಅನ್ಯಕಾರ್ಯ ನಿಮಿತ್ತ ರಜೆ ಹಾಗೂ ಒ.ಒ.ಡಿ. ಸೌಲಭ್ಯ ನೀಡಲಾಗುವುದು. ಶಿಕ್ಷಕರಿಗಷ್ಟೇ ಅಲ್ಲದೆ ಬೇರೆ ಇಲಾಖೆಗಳಿಂದ ಅನುಮತಿ ಪಡೆದು ಸಮ್ಮೇಳನದಲ್ಲಿ ಪ್ರತಿನಿಧಿಗಳಾಗಿ ಪಾಲ್ಗೊಳ್ಳುವವರಿಗೂ ಒ.ಒ.ಡಿ.ಸೌಲಭ್ಯ ನೀಡಲಾಗುವುದು. ಸಮ್ಮೇಳನದಲ್ಲಿ ಪಾಲ್ಗೊಳ್ಳುವವರಿಗೆ ಊಟದ ವ್ಯವಸ್ಥೆಯಲ್ಲಿ ಯಾವುದೇ ಕೊರತೆ ಬಾರದಂತೆ ಪಾಲ್ಗೊಂಡ ಪ್ರತಿಯೊಬ್ಬರಿಗೂ ಟೋಕನ್ ವ್ಯವಸ್ಥೆ ಮಾಡಲಾಗುವುದು ಎಂದು ಮಾಹಿತಿ ನೀಡಿದರು.
ಸಮ್ಮೇಳನದ ಕಾರ್ಯಕ್ರಮಗಳ ಕುರಿತಾಗಿ ಲೆಕ್ಕಪರಿಶೋಧಕ ಸಮಿತಿಯ ಪ್ರೊ.ಕೆ.ಎನ್.ಲಕ್ಷ್ಮೀಕಾಂತ್ ಮಾಹಿತಿ ನೀಡಿ ಸಮ್ಮೇಳನದ ಆರಂಭದಲ್ಲಿ ಬೆಳಗ್ಗೆ 7-30ಕ್ಕೆ ಪ್ರವೇಶಗೊಳ್ಳುವ ದಿ.ಪೂರ್ಣಚಂದ್ರತೇಜಸ್ವಿ ಮಹಾದ್ವಾರವನ್ನು ತಾಲೂಕು ಕಸಾಪ ಅಧ್ಯಕ್ಷ ಮಗ್ಗಲಮಕ್ಕಿ ಗಣೇಶ್ ಉದ್ಘಾಟಿಸಲಿದ್ದಾರೆ.
ದಿ.ಚಂದ್ರಯ್ಯನಾಯ್ಡು ಮಹಾಮಂಟಪವನ್ನು ತಾಲೂಕು ಬೆಳೆಗಾರರ ಸಂಘದ ಅಧ್ಯಕ್ಷ ಬಿ.ಆರ್.ಬಾಲಕೃಷ್ಣ ಉದ್ಘಾಟಿಸಲಿದ್ದಾರೆ. 8 ಗಂಟೆಗೆ ತಹಸೀಲ್ದಾರ್ ಪದ್ಮನಾಭಶಾಸ್ತ್ರಿ ಅವರಿಂದ ರಾಷ್ಟ್ರಧ್ವಜಾರೋಹಣ ಬಳಿಕ ಇಒ ಡಿ.ಡಿ.ಪ್ರಕಾಶ್ ಅವರಿಂದ ನಾಡಧ್ವಜ, ಜಿಲ್ಲಾ ಕಸಾಪ ಅಧ್ಯಕ್ಷ ಕುಂದೂರು ಅಶೋಕ್ ಅವರಿಂದ ಪರಿಷತ್ತಿನ ಧ್ವಜಾರೋಹಣ ಕಾರ್ಯಕ್ರಮಗಳ ನಂತರ ಪ್ರಮುಖ ಬೀದಿಗಳಲ್ಲಿ ಸಮ್ಮೇಳನಾಧ್ಯಕ್ಷ ಡಾ.ಡಿ.ಎಸ್.ಜಯಪ್ಪಗೌಡ ಮೆರವಣಿಗೆ ನಡೆಯಲಿದೆ.
ನಂತರ 10-30ಕ್ಕೆ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಪಾಲ್ಗೊಳ್ಳಲಿದ್ದಾರೆ. ಮಧ್ಯಾಹ್ನ 2 ಗಂಟೆಗೆ ದೇಶೀಯ ಪ್ರಜ್ಞೆ, ಸಂಜೆ 4ರಿಂದ ಸ್ತ್ರೀ ಪ್ರಜ್ಞೆ ಗೋಷ್ಠಿಗಳು, ಜ.19ರಂದು ಬೆಳಗ್ಗೆ 9-30ಕ್ಕೆ ಕಾವ್ಯಪ್ರಜ್ಞೆ, ಕವಿಗೋಷ್ಠಿ, 12 ಗಂಟೆಗೆ ಸಾಮುದಾಯಿಕ ಪ್ರಜ್ಞೆ, ಮಧ್ಯಾಹ್ನ 2-15 ಗಂಟೆಗೆ ಸಮ್ಮೇಳನಾಧ್ಯಕ್ಷ ಬದುಕು-ಬರಹ, ಬಹಿರಂಗ ಅಧಿವೇಶನ, 3-45ಕ್ಕೆ ಹಾಸ್ಯಪ್ರಜ್ಞೆ ಕಾರ್ಯಕ್ರಮಗಳು ನಡೆಯಲಿದ್ದು, ಸಂಜೆ 6 ಗಂಟೆಗೆ ಜಿಲ್ಲೆಯ ಸಾಧಕರುಗಳಿಗೆ ಸನ್ಮಾನ ನಂತರ ಸಮಾರೋಪ ಕಾರ್ಯಕ್ರಮದ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ ಎಂದು ತಿಳಿಸಿದರು.
ಸ್ವಾಗತ ಸಮಿತಿ ಅಧ್ಯಕ್ಷ ಹಾಗೂ ಶಾಸಕ ಎಂ.ಪಿ.ಕುಮಾರಸ್ವಾಮಿ, ಕೋಶಾಧ್ಯಕ್ಷ ರಂಜನ್ ಅಜಿತ್‍ಕುಮಾರ್ ಪ್ರಧಾನ ಸಂಚಾಲಕ ಮಗ್ಗಲಮಕ್ಕಿ ಗಣೇಶ್, ತಾಲೂಕು ಬೆಳೆಗಾರರ ಸಂಘದ ಅಧ್ಯಕ್ಷ ಬಾಲಕೃಷ್ಣ, ರೈತಸಂಘದ ನಾಗೇಶ್, ಪ್ರೊ. ಎಂ.ಎಸ್.ಅಶೋಕ್, ಲಕ್ಷ್ಮಣಗೌಡ, ಶಿವಾನಂದ್, ಭಾನುಮತಿ, ಜಿಲ್ಲಾ ಕಾರ್ಯದರ್ಶಿ ಮಂಜುನಾಥಸ್ವಾಮಿ ಇದ್ದರು.