ಸರಕಾರಿ ಕಾರ್ಯಕ್ರಮವಾಗಿ ಅಬ್ಬಕ್ಕ ಉತ್ಸವ: ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್
ಮಂಗಳೂರು, ಜ.1: ಅಬ್ಬಕ್ಕ ಉತ್ಸವ ಸರ್ಕಾರಿ ಕಾರ್ಯಕ್ರಮವಾಗಿ ಆಚರಿಸಲು ಈಗಾಗಲೇ ಜಿಲ್ಲಾಡಳಿತ ನಿರ್ಧರಿಸಿದೆ. ಸ್ಥಳೀಯ ಸಂಘ-ಸಂಸ್ಥೆಗಳು, ಈ ಹಿಂದೆ ಉತ್ಸವ ನಡೆಸುತ್ತಿದ್ದ ಸಮಿತಿ ಪದಾಧಿಕಾರಿಗಳು ನೀಡುವ ಸಲಹೆ-ಸೂಚನೆಗಳನ್ನು ಆಧರಿಸಿ ಆಯೋಜಿಸಲಾಗುವುದು ಎಂದು ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ತಿಳಿಸಿದರು.
ಸಭೆಯಲ್ಲಿ ಅಬ್ಬಕ್ಕ ಉತ್ಸವ ಕುರಿತು ಚರ್ಚೆಯ ವೇಳೆ ಮಾತನಾಡಿದ ಅವರು, ಉತ್ಸವದ ಉತ್ತಮವಾಗಿ ನಡೆಯುವ ನಿಟ್ಟಿನಲ್ಲಿ ಜಿಲ್ಲಾಡಳಿತ ಹಾಗೂ ಸರ್ಕಾರ ಕೈಗೊಳ್ಳುವ ನಿರ್ಧಾರಕ್ಕೆ ಸಂಪೂರ್ಣ ಸಹಕಾರ ನೀಡಬೇಕು. ಬೀಚ್ ಉತ್ಸವ ಸಹಿತ ಅಬ್ಬಕ್ಕ ಉತ್ಸವ ಫೆ.2 ಮತ್ತು 3ರಂದು ಆಯೋಜಿಸುವ ಕುರಿತು ತೀರ್ಮಾನಕ್ಕೆ ಬರಲಾಗಿದ್ದು, ದಿನಾಂಕವನ್ನು ಮುಂದಿನ ಸಭೆಯಲ್ಲಿ ಅಂತಿಮಪಡಿಸಲಾಗುವುದು ಎಂದು ಅವರು ಹೇಳಿದರು.
ಮಾಜಿ ಶಾಸಕ ಕೆ.ಜಯರಾಮ ಶೆಟ್ಟಿ ಮಾತನಾಡಿ, 1997ರಿಂದ ಉಳ್ಳಾಲ ವೀರ ರಾಣಿ ಅಬ್ಬಕ್ಕ ಉತ್ಸವ ಸಮಿತಿ ವತಿಯಿಂದ ಅಬ್ಬಕ್ಕ ಉತ್ಸವ ಆಯೋಜಿಸಲಾಗುತ್ತಿದೆ. ಮೊದಲ ಆರು ವರ್ಷ ಸಮಿತಿಯೇ ಉತ್ಸವ ಆಚರಿಸಿತ್ತು, ಬಳಿಕ 10 ವರ್ಷ ಸರ್ಕಾರದ ಅನುದಾನದಲ್ಲಿ ನಡೆಸಲಾಯಿತು. ಕಳೆದ ವರ್ಷ ಸರ್ಕಾರದ ವತಿಯಿಂದ ಆಮಂತ್ರಣ ಪತ್ರಿಕೆ ಮಾಡಿ ಕಾರ್ಯಕ್ರಮ ಆಯೋಜಿಸಲಾಯಿತು. ಈ ಬಾರಿಯಾದರೂ ಅಬ್ಬಕ್ಕ ಉತ್ಸವ ಸಮಿತಿಯ ಮೂಲಕವೇ ಕಾರ್ಯಕ್ರಮ ಆಯೋಜಿಸಬೇಕು ಎಂದು ಆಗ್ರಹಿಸಿದರು.
ಸಚಿವ ಯುಟಿ ಖಾದರ್ ಉತ್ತರಿಸಿ, ರಾಣಿ ಅಬ್ಬಕ್ಕ ಇಡೀ ತುಳುನಾಡಿಗೆ ಸಂಬಂಧಿಸಿದವರು. ಆದ್ದರಿಂದ ಹಿಂದಿನ ಉತ್ಸವ ಸಮಿತಿ, ಸಂಘ ಸಂಸ್ಥೆಗಳು ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದರು.
ಅಪರ ಜಿಲ್ಲಾಧಿಕಾರಿ ಕುಮಾರ್, ಜಿಲ್ಲಾ ಪಂಚಾಯಿತಿ ಸಿಇಒ ಡಾ. ಸೆಲ್ವಮಣಿ ಆರ್, ಪಾಲಿಕೆ ಆಯುಕ್ತ ಮಹಮ್ಮದ್ ನಝೀರ್, ಪೊಲೀಸ್ ಕಮಿಷನರ್ ಟಿ.ಆರ್.ಸುರೇಶ್, ಡಿಸಿಪಿ ಉಮಾ ಪ್ರಶಾಂತ್, ಎಸಿಪಿ ಶ್ರೀನಿವಾಸ ಗೌಡ ಸಭೆಯಲ್ಲಿ ಭಾಗವಹಿಸಿದ್ದರು.