ಉಪ್ಪಿನಂಗಡಿ ದುರಂತ: ಮೃತ ವಿದ್ಯಾರ್ಥಿಗಳ ಮನೆಗೆ ಯು.ಟಿ. ಖಾದರ್ ಭೇಟಿ

ಉಪ್ಪಿನಂಗಡಿ, ಜ. 1: ನದಿಯಲ್ಲಿ ನೀರುಪಾಲಾದ ಮೃತ ವಿದ್ಯಾರ್ಥಿಗಳ ಮನೆಗೆ ನಗರಾಭಿವೃದ್ಧಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಮಂಗಳವಾರ ಸಂಜೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಮಂಗಳೂರಲ್ಲಿ ನಡೆಯುತ್ತಿದ್ದ ಮಹತ್ವದ ತುರ್ತು ಸಭೆಯ ಮಧ್ಯೆ ಉಪ್ಪಿನಂಗಡಿಯ ಪೆರ್ನೆ ಬಿಳಿಯೂರಿನ ಶಹೀರ್ ಮನೆಗೆ ಭೇಟಿ ನೀಡಿದರು. ಶಹೀರ್ ತಂದೆ ಇಸ್ಮಾಯಿಲ್ ಹಾಗೂ ಉಳಿದಿಬ್ಬರು ಮೃತಪಟ್ಟ ಕುಟುಂಬಸ್ಥರನ್ನೂ ಬಿಳಿಯೂರು ಮನೆಯಲ್ಲಿ ಸಂಪರ್ಕಿಸಿ ಅವರಿಗೆ ಸಚಿವರು ಸಾಂತ್ವನ ಹೇಳಿದರು.
ಉಪ್ಪಿನಂಗಡಿ ಸರಕಾರಿ ಕಾಲೇಜಿನ ಬಳಿ ನದಿಗೆ ರಕ್ಷಣಾ ಗೋಡೆ ನಿರ್ಮಿಸುವ ಕುರಿತು ವರದಿ ತರಿಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿರುವ ಸಚಿವರು ಮೃತ ಶಹೀರ್ ಮನೆಗೆ ಉಪ್ಪಿನಂಗಡಿ ಪೊಲೀಸ್ ಇನ್ಸ್ ಪೆಕ್ಟರ್ ಅವರನ್ನು ಕರೆಸಿ ಪ್ರಾಥಮಿಕ ತನಿಖಾ ವರದಿಯ ಮಾಹಿತಿ ಪಡೆದರು.
ಕಾನೂನು ಪ್ರಕಾರ ಪರಿಹಾರ ದೊರಕಿಸಿಕೊಡುವ ಕುರಿತು ಸಚಿವರು ಕಂದಾಯ ಅಧಿಕಾರಿಗಳಿಗೆ ಸೂಚನೆ ನೀಡಿದರು. ಸಚಿವರ ಜೊತೆ ದ.ಕ.ಜಿಲ್ಲಾ ವಕ್ಫ್ ಸಮಿತಿ ಸದಸ್ಯ ರಶೀದ್ ವಿಟ್ಲ, ಇರಾ ಗ್ರಾ.ಪಂ. ಅಧ್ಯಕ್ಷ ರಝಾಕ್ ಕುಕ್ಕಾಜೆ, ಶಫೀಕ್ ಅರಫಾ ಉಪ್ಪಿನಂಗಡಿ, ಮಂಗಳೂರು ತಾ.ಪಂ.ಸದಸ್ಯ ಜಬ್ಬಾರ್ ಬೋಳಿಯಾರ್, ಕಿನ್ಯ ಗ್ರಾ.ಪಂ. ಉಪಾಧ್ಯಕ್ಷ ಸಿರಾಜ್ ಕಿನ್ಯ ಮೊದಲಾದವರು ಉಪಸ್ಥಿತರಿದ್ದರು.