ಕೊಡಂಗಳದಲ್ಲಿ ಆಳುಪ ದಾನ ಶಾಸನ ಪತ್ತೆ

ಉಡುಪಿ, ಜ.1: ಮೂಡುಬೆಳ್ಳೆ ಸಮೀಪದ ಕೊಡಂಗಳ-ಮರ್ಣೆಯ ಕೊಲಪು ಮಹಾವಿಷ್ಣುಮೂರ್ತಿ ದೇವಾಲಯದ ಹೊರ ಪ್ರಾಕಾರದಲ್ಲಿ ತ್ರಿಕೋನಾಕಾರ ದಲ್ಲಿರುವ ಅಳುಪರ ಕಾಲದ ಒಂದು ವಿಶಿಷ್ಟ ಶಾಸನ ಕಲ್ಲು ಪತ್ತೆಯಾಗಿದೆ. ಇದೊಂದು ದಾನ ಶಾಸನವಾಗಿದೆ.
ಶಾಸನದ ಮೇಲ್ಭಾಗದಲ್ಲಿ ಒಂದು ಶಿವಲಿಂಗ, ಎಡ-ಬಲದಲ್ಲಿ ಎರಡು ದೀಪದ ಕಂಭಗಳು ಹಾಗೂ ನಂದಿಯ ಅಸ್ಪಷ್ಟ ಶಿಲ್ಪದ ಚಿತ್ರಣವಿದೆ. ಮೇಲೆ ಸೂರ್ಯ-ಚಂದ್ರರ ಉಬ್ಬು ಶಿಲ್ಪಗಳಿವೆ ಎಂದು ಶಿರ್ವದ ಎಂಎಸ್‌ಆರ್‌ಎಸ್ ಪದವಿ ಕಾಲೇಜಿನ ಇತಿಹಾಸ ಹಾಗೂ ಪುರಾತತ್ವ ಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೊ.ಟಿ.ಮುರುಗೇಶಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ಸುಮಾರು 19 ಸಾಲುಗಳ ಬರಹವನ್ನು ಹೊಂದಿರುವ ಈ ಶಾಸನದಲ್ಲಿ ಕೆಳಭಾಗದಲ್ಲಿರುವ 7 ಸಾಲುಗಳ ಬರಹ ಅಸ್ಪಷ್ಟವಾಗಿ ಗೋಚರಿಸುತ್ತಿದೆ. ಮೇಲಿನ ಭಾಗದಲ್ಲಿರುವ ಬರಹ ಸಂಪೂರ್ಣ ಅಳಿಸಿಹೋಗಿದೆ ಎಂದು ಪ್ರೊ.ಮುರುಗೇಶಿ ತಿಳಿಸಿದ್ದಾರೆ.
ಶಾಸನೋಕ್ತ ವಿಷಯದ ಪ್ರಕಾರ ಇದೊಂದು ದಾನ ಶಾಸನವೆಂದು ಸ್ಪಷ್ಟವಾಗುತ್ತದೆ. ಶಾಸನದಲ್ಲಿ ದೇವಾಲಯದ ಅಧಿಕಾರಿಯನ್ನು ಉಲ್ಲೇಖಿಸಲಾಗಿದೆ. ಆಳುಪರ ಇತರೆ ಶಾಸನಗಳಲ್ಲಿ ಅತಿಕಾರಿ/ಅಧಿಕಾರಿಗಳ ಉಲ್ಲೇಖ ಕಂಡು ಬರುತ್ತದೆ. ಶಾಸನದ ಲಿಪಿ ಲಕ್ಷಣದ ಆಧಾರದ ಮೇಲೆ ಇದೊಂದು 14ನೇ ಶತಮಾನದ ಶಾಸನವೆಂದು ಕಾಲ ನಿರ್ಣಯಿಸಬಹುದಾಗಿದೆ ಎಂದವರು ಹೇಳಿದ್ದಾರೆ. ಶಾಸನದ ಕೆಳಭಾಗದಲ್ಲಿ ಎದುರು-ಬದುರಾಗಿ ನಿಂತ ಎರಡು ಕರುಗಳ ಉಬ್ಬು ಶಿಲ್ಪಗಳನ್ನು ಚಿತ್ರಿಸಲಾಗಿದೆ.
ಶಾಸನದ ಮಹತ್ವ
ಶಾಸನ ಇರುವ ದೇವಾಲಯವನ್ನು ಈಗ ಕೊಲಪು ಮಹಾವಿಷ್ಣುಮೂರ್ತಿ ದೇವಾಲಯವೆಂದು ಕರೆಯಲಾಗುತ್ತದೆ. ಶಾಸನೋಕ್ತ ಅಧಿಕಾರಿಯ ಉಲ್ಲೇಖ ಮೂಲತಃ ಈ ದೇವಾಲಯ ಜೈನ ಅಧಿಕಾರಿಗಳ ಆಡಳಿತಕ್ಕೊಳಪಟ್ಟಿತ್ತೆಂದು ಸ್ಪಷ್ಟ ಪಡಿಸುತ್ತದೆ. ಪ್ರಸ್ತುತ ದೇವಾಲಯದಲ್ಲಿರುವ ಮಹಾವಿಷ್ಣುಮೂರ್ತಿ 17ನೇ ಶತಮಾನದ ಶಿಲ್ಪಶೈಲಿಯನ್ನು ಹೊಂದಿದೆ.
ಶಾಸನ ಇರುವ ದೇವಾಲಯವನ್ನು ಈಗ ಕೊಲಪು ಮಹಾವಿಷ್ಣುಮೂರ್ತಿ ದೇವಾಲಯವೆಂದು ಕರೆಯಲಾಗುತ್ತದೆ. ಶಾಸನೋಕ್ತ ಅಧಿಕಾರಿಯ ಉಲ್ಲೇಖ ಮೂಲತಃ ಈ ದೇವಾಲಯ ಜೈನ ಅಧಿಕಾರಿಗಳ ಆಡಳಿತಕ್ಕೊಳಪಟ್ಟಿತ್ತೆಂದು ಸ್ಪಷ್ಟ ಪಡಿಸುತ್ತದೆ. ಪ್ರಸ್ತುತ ದೇವಾಲಯದಲ್ಲಿರುವ ಮಹಾವಿಷ್ಣುಮೂರ್ತಿ 17ನೇ ಶತಮಾನದ ಶಿಲ್ಪಶೈಲಿಯನ್ನು ಹೊಂದಿದೆ. ಆದ್ದರಿಂದ, ದೇವಾಲಯ ಮೂಲತಃ ಶೈವ ದೇವಾಲಯವಾಗಿದ್ದು, ಜೈನರ ಆಡಳಿತೆಗೆ ಒಳಪಟ್ಟಿತ್ತು. ನಂತರ ಇದು ವೈಷ್ಣವರ ಅಧೀನಕ್ಕೆ ಒಳಪಟ್ಟು, ಮಹಾ ವಿಷ್ಣುಮೂರ್ತಿ ದೇವಾಲಯವಾಗಿ ಮಾರ್ಪಟ್ಟಿದೆ ಎಂಬ ಅಂಶದ ಮೇಲೆ ಈ ಶಾಸನ ಬೆಳಕು ಚೆಲ್ಲುತ್ತದೆ ಎಂದವರು ತಿಳಿಸಿದ್ದಾರೆ.
ಆದ್ದರಿಂದ, ದೇವಾಲಯ ಮೂಲತಃ ಶೈವ ದೇವಾಲಯವಾಗಿದ್ದು, ಜೈನರ ಆಡಳಿತೆಗೆ ಒಳಪಟ್ಟಿತ್ತು. ನಂತರ ಇದು ವೈಷ್ಣವರ ಅಧೀನಕ್ಕೆ ಒಳಪಟ್ಟು, ಮಹಾ ವಿಷ್ಣುಮೂರ್ತಿ ದೇವಾಲಯವಾಗಿ ಮಾರ್ಪಟ್ಟಿದೆ ಎಂಬ ಅಂಶದ ಮೇಲೆ ಈ ಶಾಸನ ಬೆಳಕು ಚೆಲ್ಲುತ್ತದೆ ಎಂದವರು ತಿಳಿಸಿದ್ದಾರೆ.
ಈ ಶಾಸನದ ಅಧ್ಯಯನದಲ್ಲಿ ಕೊಡಂಗಳ ವೆಂಕಟೇಶ್ ಭಟ್, ಅರ್ಚಕರಾದ ಪುಂಡರೀಕಾಕ್ಷ ಆಚಾರ್ಯ ಹಾಗೂ ಬ್ರಹ್ಮಾವರ ಎಸ್.ಎಂ.ಎಸ್. ಕಾಲೇಜಿನ ಪ್ರಶಾಂತ್ ಶೆಟ್ಟಿ ಅವರು ಸಹಕರಿಸಿದ್ದರು ಎಂದು ಪ್ರೊ. ಮುರುಗೇಶಿ ತಿಳಿಸಿದ್ದಾರೆ.