ನಿವೇಶನ: ಹಾರಾಡಿ ಗ್ರಾಪಂನಲ್ಲಿ 14 ಫಲಾನುಭವಿಗಳ ಆಯ್ಕೆ
ಉಡುಪಿ ವಿಧಾನಸಭಾ ಕ್ಷೇತ್ರದ ಪ್ರಗತಿ ಪರಿಶೀಲನಾ ಸಭೆ

ಉಡುಪಿ ಜ.1: ಹಾರಾಡಿ ಗ್ರಾಪಂ ವ್ಯಾಪ್ತಿಯಲ್ಲಿ 4 ಎಕರೆ 83 ಸೆನ್ಸ್ ಜಾಗ ಹಾಗೂ 50 ನ್ಸ್ ಜಾಗವನ್ನು ನಿವೇಶನಕ್ಕೆ ಕಾಯ್ದಿರಿಸಲಾಗಿದೆ. ಜಾಗದ ಮಧ್ಯದಲ್ಲಿ ಬಂಡೆ ಇರುವುದರಿಂದ ಆ ಪ್ರದೇಶವನ್ನು ಬಿಟ್ಟು ನಕ್ಷೆ ತಯಾರಿಸಿದ್ದು, 48 ನಿವೇಶನವನ್ನು ಗುರುತಿಸಲಾಗಿದೆ. ಈಗಾಗಲೇ 14 ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ಉಡುಪಿ ಶಾಸಕ ಕೆ.ರಘುಪತಿ ಭಟ್ ಹೇಳಿದ್ದಾರೆ.
ಉಡುಪಿ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ಉಡುಪಿ ವಿಧಾನಸಭಾ ಕ್ಷೇತ್ರದ ನಿವೇಶನ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು. ನಿವೇಶನದ ಮಧ್ಯದಲ್ಲಿರುವ ಬಂಡೆ ತೆರವುಗೊಳಿಸಲು ಅಂದಾಜು ಪಟ್ಟಿಯನ್ನು ತಯಾರಿಸುವಂತೆ ಅವರು ಸಂಬಂಧಿತ ಅಧಿಕಾರಿಗಳಿಗೆ ಸೂಚಿಸಿದರು.
ಚೇರ್ಕಾಡಿ ಗ್ರಾಪಂ ವ್ಯಾಪ್ತಿಯಲ್ಲಿ ಜಾಗ ಹಸ್ತಾಂತರವಾಗಿದ್ದು 12 ಫಲಾನುಭವಿಗಳ ಪ್ರಸ್ತಾವನೆಯನ್ನು ನಿಗಮಕ್ಕೆ ಕಳುಹಿಸಿರುವುದಾಗಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ತಿಳಿಸಿದರು. ಅದೇ ರೀತಿ ಆರೂರಿನಲ್ಲಿ 1 ಎಕರೆ ಜಾಗವನ್ನು ಸಮತಟ್ಟು ಮಾಡುವ ಕೆಲಸವನ್ನು ಪ್ರಾರಂಭಿಸಿರುವುದಾಗಿ ಪಿಡಿಓ ಸಭೆಗೆ ತಿಳಿಸಿದರು.
38ನೇ ಕಳ್ತೂರು ಗ್ರಾಪಂ ವ್ಯಾಪ್ತಿಯಲ್ಲಿ ನಿವೇಶನಕ್ಕಾಗಿ ಕಾಯ್ದಿರಿಸಿದ 1.14 ಎಕರೆ ಜಾಗ ಪಂಚಾಯಿತಿಗೆ ಹಸ್ತಾಂತರಗೊಂಡಿದ್ದು, ಈ ನಿವೇಶನವನ್ನು ಸಮ ತಟ್ಟುಗೊಳಿಸಲು ಗ್ರಾಪಂನಿಂದ ಹಣ ಕಾಯ್ದಿರಿಸಲಾಗಿದೆ. ಆದರೆ ಸರ್ವೆ ಮಾಡಲು ಪಕ್ಕದ ಖಾಸಗಿ ವ್ಯಕ್ತಿಗಳಿಂದ ಆಕ್ಷೇಪಣೆ ಇರುವುದಾಗಿ ಪಿಡಿಓ ತಿಳಿಸಿದರು.
ಗ್ರಾಮಕರಣಿಕರು ಮತ್ತು ತಹಶೀಲ್ದಾರ್‌ರು ಆಕ್ಷೇಪಣೆದಾರರನ್ನು ಒಪ್ಪಿಸಿ, ಸರ್ವೆ ಮಾಡುವಂತೆ ಶಾಸಕರು ಸೂಚನೆ ನೀಡಿದರು. ನಾಲ್ಕೂರು ಗ್ರಾಪಂ ವ್ಯಾಪ್ತಿಯಲ್ಲಿ ನಿವೇಶನವನ್ನು ಸಮತಟ್ಟುಗೊಳಿಸಿದ್ದು 28 ಫಲಾನಭವಿಗಳನ್ನು ಆಯ್ಕೆ ಮಾಡಲಾಗಿದೆ. ಉಳಿದ ಫಲಾನುಭವಿಗಳನ್ನು ಶೀಘ್ರ ಆಯ್ಕೆ ಮಾಡುವಂತೆ ಶಾಸಕರು ತಿಳಿಸಿದರು.
ನೀಲಾವರದಲ್ಲಿ 60 ಸೆನ್ಸ್ ನಿವೇಶನ ಮಂಜೂರಾಗಿದ್ದು ಜಾಗ ಸಮತಟ್ಟು ಮಾಡಲು ಬಾಕಿ ಇರುವುದಾಗಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ತಿಳಿಸಿದರು. 15 ದಿನದೊಳಗೆ ಜಾಗ ಸಮತಟ್ಟು ಮಾಡಲು ಮತ್ತು ಜನವರಿ 15ರೊಳಗೆ ದಿನ ನಿಗದಿಪಡಿಸಿ ಫಲಾನುಭವಿಗಳನ್ನು ಆಯ್ಕೆ ಮಾಡುವುದಾಗಿ ಶಾಸಕರು ತಿಳಿಸಿದರು.
ಉಪ್ಪೂರು ಗ್ರಾಪಂ ವ್ಯಾಪ್ತಿಯಲ್ಲಿ 8 ಎಕರೆ ನಿವೇಶನಕ್ಕೆ ಅನುಮೋದನೆ ಸಿಕ್ಕಿದೆ. ಈ ಜಾಗ ಇಳಿಜಾರಿನಿಂದ ಕೂಡಿದ್ದು ಮನೆ ನಿರ್ಮಾಣಕ್ಕೆ ಯೋಗ್ಯವಾಗಿಲ್ಲ. ಅಲ್ಲದೇ ಇನ್ನೂ 12 ಎಕರೆ ನಿವೇಶನಕ್ಕೆ ಅರಣ್ಯ ಇಲಾಖೆಯಿಂದ ಅನುಮತಿ ದೊರೆತಿಲ್ಲ ಎಂದು ಅಲ್ಲಿನ ಪಿಡಿಓ ತಿಳಿಸಿದರು. ಈ ಬಗ್ಗೆ ಶಿಫಾರಸು ಮಾಡಿದ್ದು 2 ಬಾರಿ ತಿರಸ್ಕೃತ ಗೊಂಡಿರುವುದಾಗಿ ಅರಣ್ಯ ಅಧಿಕಾರಿಗಳು ಸಭೆಗೆ ತಿಳಿಸಿದರು. ಈ ಜಾಗ ನಿವೇಶನಕ್ಕಾಗಿ ಅತ್ಯಗತ್ಯವಾಗಿದ್ದು ಅಲ್ಲಿರುವುದು ಅಕೇಶಿಯಾ ಮರ ಗಳಾಗಿರುವುದರಿಂದ ಅದನ್ನು ನೀಡುವಂತೆ ಅರಣ್ಯ ಇಲಾಖೆಗೆ ಪತ್ರ ಬರೆಯುವುದಾಗಿ ಶಾಸಕರು ತಿಳಿಸಿದರು
ಕಡೆಕಾರು ಗ್ರಾಪಂ ವ್ಯಾಪ್ತಿಯಲ್ಲಿ 14 ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ. ಈ ಜಾಗದಲ್ಲಿರುವ ಮರಗಳನ್ನು ಕಡಿಯಲು ಅರಣ್ಯ ಇಲಾಖೆ ಗೆ ಪತ್ರ ಬರೆದಿರುವುದಾಗಿ ಪಿಡಿಓ ತಿಳಿಸಿದರು. ಪ್ರತಿ ನಿವೇಶನದಲ್ಲಿ ರಸ್ತೆಗಾಗಿ 24 ಅಡಿ ಅಗಲದ ಜಾಗ ಮೀಸಲಿರುವಂತೆ ಶಾಸಕರು ತಿಳಿಸಿದರು.
ಸಭೆಯಲ್ಲಿ ಉಡುಪಿ ತಾಪಂ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್, ಉಪಾಧ್ಯಕ್ಷ ರಾಜೇಂದ್ರ ಪಂದುಬೆಟ್ಟು, ಕಾರ್ಯನಿರ್ವಹಣಾಧಿಕಾರಿ ಕೆ.ರಾಜು, ಸಹಾಯಕ ನಿರ್ದೆಶಕ ಹರಿಕೃಷ್ಣ ಶಿವತ್ತಾಯ, ತಹಶೀಲ್ದಾರ್ ಪ್ರದೀಪ್ ಕುರುಡೆಕರ್ ಮುಂತಾದವರು ಉಪಸ್ಥಿತರಿದ್ದರು.