ಜ.2ರಿಂದ ಎರಡನೇ ಸುತ್ತಿನ ಕ್ಷಯರೋಗ ಪತ್ತೆ ಆಂದೋಲನ
ಉಡುಪಿ, ಜ.1: ಭಾರತವನ್ನು ಕ್ಷಯರೋಗ ಮುಕ್ತ ಮಾಡುವ ಸಂಕಲ್ಪದೊಂದಿಗೆ ಉಡುಪಿ ಜಿಲ್ಲೆಯ ಹೈ ರಿಸ್ಕ್ ಪ್ರದೇಶಗಳಲ್ಲಿ 2ನೇ ಸುತ್ತಿನ ಕ್ಷಯರೋಗ ಪತ್ತೆ ಆಂದೋಲನ ಜ.2ರಿಂದ 12ರವರೆಗೆ ನಡೆಯಲಿದೆ.
ಮೊದಲ ಸುತ್ತಿನ ಕ್ಷಯರೋಗ ಪತ್ತೆ ಆಂದೋಲನದಲ್ಲಿ 1,52,248 ಜನರಿಗೆ ಕ್ಷಯರೋಗದ ಮಾಹಿತಿ ನೀಡಿ, ತಪಾಸಣೆಗೆ ಗುರಿಪಡಿಸಲಾಗಿತ್ತು. ಇದರಲ್ಲಿ 47 ಕ್ಷಯರೋಗಿಗಳು ಪತ್ತೆಯಾಗಿದ್ದಾರೆ.
ಕೊಳಚೆ ಪ್ರದೇಶ, ಬುಡಕಟ್ಟು ಜನಾಂಗ, ವಲಸೆ ಕಾರ್ಮಿಕರು, ನೇಕಾರರು, ಬೀಡಿ ಕಾರ್ಮಿಕರು, ಮಧುಮೇಹ ರೋಗಿಗಳು, ಎಚ್‌ಐವಿ ಸೋಂಕಿತರು ಇರುವ ಪ್ರದೇಶವನ್ನು ಆಯ್ದುಕೊಳ್ಳಲಾಗಿದೆ. ಒಟ್ಟು 684 ಆರೋಗ್ಯ ಸಿಬ್ಬಂದಿ ಗಳು ಹಾಗೂ ಆಶಾ ಕಾರ್ಯಕರ್ತರ ತಂ ಈ ಆಂದೋಲನದಲ್ಲಿ ಭಾಗವಹಿಸಲಿವೆ.
2ನೇ ಸುತ್ತಿನ ಆಂದೋಲನದಲ್ಲಿ ಒಟ್ಟು 1,38,788 ಜನಸಂಖ್ಯೆಯನ್ನು ಆಯ್ದುಕೊಳ್ಳಲಾಗಿದೆ. ಹಾಗೂ ಅವರಿಗೆ ರೋಗದ ಬಗ್ಗೆ ಜಾಗೃತಿ ಮೂಡಿಸಿ, ಪರೀಕ್ಷೆಗೆ ಒಳಪಡಿಸುವ ಉದ್ದೇಶವಿದೆ.
ಸಂಭಾವ್ಯ ಕ್ಷಯರೋಗಿಗಳಿಗೆ ಕಫದ ಮಾದರಿಯ ಪರೀಕ್ಷೆ ಹಾಗೂ ಎಕ್ಸರೇ ಪರೀಕ್ಷೆಯನ್ನು ಉಚಿತವಾಗಿ ನಡೆಸಲಾಗುವುದು. ಕ್ಷಯರೋಗವೆಂದು ಖಚಿತ ಪಟ್ಟ ರೋಗಿಗಳಿಗೆ ಉಚಿತ ಔಷಧೋಪಚಾರವನ್ನು ನೀಡಲಾಗುವುದು. ಹಾಗೆಯೇ ಕಫದಲ್ಲಿ ರೋಗದ ಲಕ್ಷಣ ಪತ್ತೆಯಾಗದೇ, ಎಕ್ಸರೇ ಪರೀಕ್ಷೆಯಲ್ಲಿ ಅಸಹಜ ಪ್ರಕರಣ ಪತ್ತೆಯಾದಲ್ಲಿ ಸಿಬಿನಾಟ್ ಪರೀಕ್ಷೆ ನಡೆಸಲಾಗುವುದು.
ಉಡುಪಿ ಜಿಲ್ಲೆಯಲ್ಲಿ ಒಟ್ಟು 6 ಕ್ಷಯ ಪರೀಕ್ಷಾ ಘಟಕಗಳಿದ್ದು, ಅದರಲ್ಲಿ ಒಟ್ಟು 20 ನಿಯೋಜಿತ ಕಫ ಪರೀಕ್ಷಾ ಕೇಂದ್ರಗಳಿವೆ. ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಸಿಬಿನ್ಯಾಟ್ ಪರೀಕ್ಷೆಯ ಸೌಲಭ್ಯವಿದೆ.
ಕ್ಷಯರೋಗದ ಲಕ್ಷಣಗಳು: 2 ವಾರಕ್ಕಿಂತ ಹೆಚ್ಚು ಕೆಮ್ಮುವುದು, ತೂಕ ಕಡಿಮೆಯಾಗುವುದು, ಹಸಿವಾಗದಿರುವುದು, ಕಫದಲ್ಲಿ ರಕ್ತ ಬೀಳುವುದು, ಸಂಜೆ ವೇಳೆ ಜ್ವರ ಬರುವುದು. ಇಂತಹ ಲಕ್ಷಣಗಳಿರುವ ವ್ಯಕ್ತಿಗಳು ಕಂಡು ಬಂದಲ್ಲಿ ಸಮೀಪದ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ, ಉಚಿತ ಪರೀಕ್ಷೆ ಹಾಗು ಚಿಕಿತ್ಸೆಯನ್ನು ಪಡೆಯಬಹುದಾಗಿದೆ.
ಜ.2ರಿಂದ 12ರವರೆಗೆ ನಡೆಯುವ ಕ್ಷಯ ರೋಗ ಆಂದೋಲನ ಕಾರ್ಯಕ್ರಮ ದಲ್ಲಿ ಮನೆ ಮನೆಗೆ ಬರುವ ಆರೋಗ್ಯ ಸಿಬ್ಬಂದಿಗಳಿಂದ ಕ್ಷಯರೋಗದ ಮಾಹಿತಿಯನ್ನು ಪಡೆದು ಕ್ಷಯ ಮುಕ್ತ ಗ್ರಾಮ ಹಾಗೂ ಕ್ಷಯ ಮುಕ್ತ ಉಡುಪಿ ಜಿಲ್ಲೆಯನ್ನಾಗಿಸುವುದು ನಮ್ಮೆಲ್ಲರ ಹೊಣೆ ಎಂದು ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ. ಚಿದಾನಂದ ಸಂಜು ಎಸ್.ವಿ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.