ಎಚ್ಐವಿ ರಕ್ತಪೂರಣ ಪ್ರಕರಣ: ಯುವಕನ ಶವಪರೀಕ್ಷೆಯ ವೀಡಿಯೊ ದಾಖಲಿಸಲು ನ್ಯಾಯಾಲಯ ನಿರ್ದೇಶ
ಮಧುರೈ, ಜ. 1: ಗರ್ಭಿಣಿ ಮಹಿಳೆಗೆ ಎಚ್ಐವಿ ಸೋಂಕಿತ ರಕ್ತಪೂರಣ ಮಾಡಿದ ಬಳಿಕ ಆತ್ಮಹತ್ಯೆ ಮಾಡಿಕೊಂಡ 19 ವರ್ಷದ ಯುವಕನ ಮೃತದೇಹದ ಮರಣೋತ್ತರ ಪರೀಕ್ಷೆಯ ವೀಡಿಯೊ ದಾಖಲಿಸಲು ಮದ್ರಾಸ್ ಹೈಕೋರ್ಟ್ ಆದೇಶಿಸಿದೆ.
ಯುವಕನ ತಾಯಿ ಇಲ್ಲಿ ಸೋಮವಾರ ದೂರು ದಾಖಲಿಸಿದ ಹಿನ್ನೆಲೆಯಲ್ಲಿ ಸರಕಾರಿ ರಾಜಾಜಿ ಆಸ್ಪತ್ರೆಯ ಡೀನ್ಗೆ ನ್ಯಾಯ ಮೂರ್ತಿ ಬಿ. ಪುಗಳೇಂದಿ ಈ ನಿರ್ದೇಶನ ನೀಡಿದ್ದಾರೆ. ಸಮೀಪದ ಜಿಲ್ಲೆಯ ವೈದ್ಯಕೀಯ ಕಾಲೇಜಿನ ಇಬ್ಬರು ಅಸಿಸ್ಟೆಂಟ್ ಪ್ರೊಫೆಸರ್ಗಳ ಉಪಸ್ಥಿತಿಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಬೇಕು ಎಂದು ಕೂಡ ಅವರು ಆದೇಶಿಸಿದ್ದಾರೆ. ಇದು ವಿಶೇಷ ಪ್ರಕರಣ. ಯುವಕನಿಗೆ ಎಚ್ಐವಿ ಪಾಸಿಟಿವ್ ಎಂಬ ಅರಿವಿರಲಿಲ್ಲ. ಆತ ನವೆಂಬರ್ 30ರಂದು ರಕ್ತದಾನ ಮಾಡಿದ್ದ ಎಂದು ಅವರು ಹೇಳಿದ್ದಾರೆ. ವಿದೇಶದಲ್ಲಿ ಉದ್ಯೋಗ ಪಡೆಯುವ ಹಿನ್ನೆಲೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸುವ ಸಂದರ್ಭ ಎಚ್ಐವಿ ಪಾಸಿಟಿವ್ ಇರುವುದು ಪತ್ತೆಯಾಯಿತು ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.
ಆದುದರಿಂದ ಆತ ಶಿವಕಾಶಿಯವಲ್ಲಿರುವ ಬ್ಲಡ್ ಬ್ಯಾಂಕ್ಗೆ ಮಾಹಿತಿ ನೀಡಿದ. ಆದರೆ, ಆದಾಗಲೆ ರಕ್ತವನ್ನು ಗರ್ಭಿಣಿ ಮಹಿಳೆಗೆ ವರ್ಗಾಯಿಸಲಾಗಿತ್ತು ಎಂದು ಅವರು ತಿಳಿಸಿದ್ದಾರೆ. ಈ ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆ ನಡೆದಾಗ ದೂರುದಾರೆ ಯುವಕನ ತಾಯಿ, ಘಟನೆ ಬೆಳಕಿಗೆ ಬಂದ ಮೇಲೆ ಕೆಲವು ಟಿ.ವಿ. ಚಾನೆಲ್ಗಳು ನನ್ನ ಪುತ್ರನ ಭಾವಚಿತ್ರ ಪ್ರಕಟಿಸಿ ದವು. ಇದರಿಂದ ಆತ ಖಿನ್ನನಾಗಿ ಆತ್ಮಹತ್ಯೆ ಮಾಡಿಕೊಂಡ ಎಂದು ಪ್ರತಿಪಾದಿಸಿದ್ದಾರೆ.