ಇಶ್ರತ್ ಜಹಾನ್ ಎನ್ಕೌಂಟರ್ ಪ್ರಕರಣದ ಪ್ರಧಾನ ಆರೋಪಿ ಸಿಂಘಾಲ್ ಐಜಿಪಿಯಾಗಿ ಭಡ್ತಿ
ಅಹ್ಮದಾಬಾದ್, ಜ. 1: ಇಶ್ರತ್ ಜಹಾನ್ ಎನ್ಕೌಂಟರ್ ಪ್ರಕರಣದಲ್ಲಿ ಜಾಮೀನಿನಲ್ಲಿರುವ ಐಪಿಸಿ ಅಧಿಕಾರಿ ಜಿ.ಎಲ್. ಸಿಂಘಾಲ್ಗೆ ಗುಜರಾತ್ ಸರಕಾರ ಐಜಿಪಿಯಾಗಿ ಭಡ್ತಿ ನೀಡಿದೆ. ಐಜಿಪಿಯಾಗಿ ಭಡ್ತಿ ನೀಡಲಾದ 2001ರ ಬ್ಯಾಚ್ 6 ಮಂದಿ ಐಪಿಎಸ್ ಅಧಿಕಾರಿಗಳು ಹಾಗೂ ಡಿಐಜಿ ರ್ಯಾಂಕ್ನ ಅಧಿಕಾರಿಗಳ ಪಟ್ಟಿಯಲ್ಲಿ ಸಿಂಘಾಲ್ ಕೂಡ ಸೇರಿದ್ದಾರೆ.
ಇಶ್ರತ್ ಜಹಾನ್ ಎನ್ಕೌಂಟರ್ ಪ್ರಕರಣದ ಆರೋಪಿಗಳಲ್ಲಿ ಸಿಂಘಾಲ್ ಕೂಡ ಸೇರಿದ್ದಾರೆ. ನಿಗದಿತ ಸಮಯದಲ್ಲಿ ಸಿಬಿಐ ಆರೋಪ ಪಟ್ಟಿ ಸಲ್ಲಿಸದ ಹಿನ್ನೆಲೆಯಲ್ಲಿ ಸಿಂಘಾಲ್ ಅವರನ್ನು ಜಾಮೀನು ಮೇಲೆ ಬಿಡುಗಡೆಗೊಳಿಸಲಾಗಿತ್ತು. 2014 ಮೇಯಲ್ಲಿ ಸಿಂಘಾಲ್ ಅವರನ್ನು ಭಡ್ತಿಯೊಂದಿಗೆ ಡಿಐಜಿಯಾಗಿ ಮರು ನೇಮಕ ಮಾಡಲಾಗಿತ್ತು.
ಸಾಹೇಬರ ಆಜ್ಞೆಯಂತೆ ಮಹಿಳೆಯ ಮೇಲೆ ಕಾನೂನು ಬಾಹಿರವಾಗಿ ನಿಗಾ ಇರಿಸುವಂತೆ ಬಿಜೆಪಿಯ ಅಧ್ಯಕ್ಷರಾಗಿರುವ ಆಗಿನ ಕೇಂದ್ರ ಗೃಹ ಖಾತೆಯ ಸಹಾಯಕ ಸಚಿವ ಅಮಿತ್ ಶಾ ಹೇಳಿರುವುದನ್ನು ಸೂಚಿಸುವ 267 ಧ್ವನಿ ಮುದ್ರಣದ ದಾಖಲೆಗಳನ್ನು ಒಳಗೊಂಡ ಎರಡು ಪೆನ್ ಡ್ರೈವ್ಗಳನ್ನು ಸಿಂಗಾಲ್ ಇಶ್ರತ್ ಜಹಾನ್ ಪ್ರಕರಣಕ್ಕೆ ಸಂಬಂಧಿಸಿ ಸಿಬಿಐಗೆ ಸಲ್ಲಿಸಿದ್ದರು. ಪ್ರಸ್ತುತ ಅಹ್ಮದಬಾದ್ನ ಹೆಚ್ಚುವರಿ ಪೊಲೀಸ್ ಆಯುಕ್ತ (ಆಡಳಿತ) ರಾಗಿರುವ ವಿಫುಲ್ ಪಟೇಲ್ ಅವರಿಗೆ ಕೂಡ ಐಜಿಪಿಯಾಗಿ ಭಡ್ತಿ ನೀಡಲಾಗಿದೆ. ಸೊಹ್ರಾಬುದ್ದೀನ್ ಎನ್ಕೌಂಟರ್ ಪ್ರಕರಣದಲ್ಲಿ ಅಗರ್ವಾಲ್ ಆರೋಪಿಯಾಗಿದ್ದರು. ಈ ಪ್ರಕರಣದಲ್ಲಿ ಎಲ್ಲ ಆರೋಪಿಗಳನ್ನು ನ್ಯಾಯಾಲಯ ಕಳೆದ ತಿಂಗಳು ಖುಲಾಸೆಗೊಳಿಸಿತ್ತು.
ಭಡ್ತಿ ಪಡೆದ ಇತರ ಅಧಿಕಾರಿಗಳೆಂದರೆ ಅಹ್ಮದಾಬಾದ್ನ ಹೆಚ್ಚುವರಿ ಪೊಲೀಸ್ ಆಯುಕ್ತ ಜೆ.ಆರ್ ಮೊಥಾಲಿಯಾ. ಗುಜರಾತ್ ಹತ್ಯಾಕಾಂಡದ ತನಿಖೆ ನಡೆಸಲು ಸುಪ್ರೀಂ ಕೋರ್ಟ್ ರೂಪಿಸಿದ್ದ ವಿಶೇಷ ತನಿಖಾ ತಂಡದಲ್ಲಿ ಮೊಥಾಲಿಯ ಕೂಡ ಇದ್ದರು.