ಕಣ್ಣೂರು ಆಂಗ್ಲ ಮಾಧ್ಯಮ ಶಾಲೆಯಲ್ಲಿ ‘ನಾಲೆಜ್ ಎಕ್ಸ್‌ಪೋ 2018’

ಮಂಗಳೂರು, ಜ.1: ಕಣ್ಣೂರು ಆಂಗ್ಲಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢ ಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳ ವಿದ್ಯಾರ್ಥಿಗಳಿಂದ ವಸ್ತು ಪ್ರದರ್ಶನ ‘ನಾಲೆಜ್ ಎಕ್ಸ್‌ಪೋ 2018’ ಕಾರ್ಯಕ್ರಮ ಇತ್ತೀಚಿಗೆ ನಡೆಯಿತು.
ಮಂಗಳೂರು ಮಹಾನಗರ ಪಾಲಿಕೆಯ ಉಪಮೇಯರ್ ಮುಹಮ್ಮದ್ ಕುಂಜತ್‌ಬೈಲ್ ವಸ್ತು ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡುತ್ತಾ, ಮಕ್ಕಳು ಪುಸ್ತಕದಲ್ಲಿ ಕಲಿತದ್ದನ್ನು ಪ್ರಾಯೋಗಿಕವಾಗಿ ತೋರಿಸಲು ಇಂತಹ ವಸ್ತು ಪ್ರದರ್ಶನಗಳನ್ನು ಆಯೋಜಿಸಿರುವುದು ನಿಜಕ್ಕೂ ಸಹಕಾರಿಯಾಗಲಿದೆ. ಇದರಿಂದ ಮಕ್ಕಳ ಜ್ಞಾನ, ಸೃಜನಶೀಲತೆ, ಆತ್ಮವಿಶ್ವಾಸ ಬೆಳೆಯುತ್ತದೆ. ಕಲಿಕೆಯಲ್ಲಿ ಹಿಂದುಳಿದ ಮಕ್ಕಳು ಕೂಡ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಇದೊಂದು ಸುವರ್ಣಾವಕಾಶವಾಗಿದೆ ಎಂದರು.
ಮುಖ್ಯ ಅತಿಥಿಗಳಾಗಿ ಮಿಲಾಗ್ರಿಸ್ ಕಾರ್ಪೊರೇಟರ್ ಅಬ್ದುಲ್ ರವೂಫ್ ಬಜಾಲ್, ಕಣ್ಣೂರು ಕಾರ್ಪೊರೇಟರ್ ಸುಧೀರ್ ಶೆಟ್ಟಿ, ದಾರುನ್ನೂರು ಕಾಶಿಪಟ್ನ ಉಪಾಧ್ಯಕ್ಷ ಅಬ್ದುಲ್ ರಝಾಕ್ ಬಿ.ಸಿ.ರೋಡ್ ಮೊದಲಾದವರು ಭಾಗವಹಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಕಣ್ಣೂರು ಎಜುಕೇಶನಲ್ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ ಹಾಜಿ ಅಬ್ದುಲ್ ಖಾದರ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಶಾಲಾ ಆಡಳಿತ ಮಂಡಳಿಯ ಉಪಾಧ್ಯಕ್ಷ ಅಬ್ದುಲ್ ರಹಿಮಾನ್ ಹಾಜಿ ನಸೀಮಾ, ಪ್ರಧಾನ ಕಾರ್ಯದರ್ಶಿ ಬಿ.ಉಮರಬ್ಬ, ಟ್ರಸ್ಟಿ ಹಮೀದ್ ಕುಂಡಾಲ ಉಪಸ್ಥಿತರಿದ್ದರು.
ಸಂಸ್ಥೆಯ ಸಂಚಾಲಕ ರಿಯಾಝ್ ಅಹಮದ್ ಸ್ವಾಗತಿಸಿದರು. ಕಾರ್ಯದರ್ಶಿ ಅಬ್ದುಲ್ ಮಜೀದ್ ಹಾಜಿ ಸಿತಾರ್ ಪ್ರಸ್ತಾವನೆಗೈದರು. ಶಾಲಾ ಪ್ರಾಂಶುಪಾಲೆ ವೀಣಾ ಗಂಗೊಳ್ಳಿ ವಂದಿಸಿದರು. ಶಿಕ್ಷಕಿ ಜಯಲತಾ ಕಾರ್ಯಕ್ರಮ ನಿರೂಪಿಸಿದರು.
ಆಕರ್ಷಣೀಯ ವಸ್ತು ಪ್ರದರ್ಶನ
ನಾಲೆಜ್ ಎಕ್ಸ್‌ಪೋನಲ್ಲಿ ವಿಜ್ಞಾನಕ್ಕೆ ಸಂಬಂಧಪಟ್ಟ ‘ಸೈನ್ಸಿಯಾ’, ಗಣಿತಕ್ಕೆ ಸಂಬಂಧಪಟ್ಟ ‘ಬ್ರೈನ್ ಫ್ರೀಝ್’, ಕಾಮರ್ಸ್‌ಗೆ ಸಂಬಂಧಪಟ್ಟ ‘ಟ್ರಾನ್ಸೆಂಡ್’, ಸಮಾಜಕ್ಕೆ ಸಂಬಂಧಪಟ್ಟ ‘ಸೋಷಿಯೋ ಸಿವಿಲೈಝೇಷನ್’, ಕ್ರಾಪ್ಟ್ ಮತ್ತು ಜನರಲ್ ಸಂಬಂಧಪಟ್ಟ ‘ಸ್ಪೆಕ್‌ಟ್ರಮ್’ ಇಸ್ಲಾಮಿಕ್ ಸಂಬಂಧಪಟ್ಟ ‘ಪಾತ್‌ಫೈಂಡರ್’ ಹಾಗೂ ವ್ಯವಹಾರಕ್ಕೆ ಸಂಬಂಧಪಟ್ಟ ‘ಫೇರಿ ಲ್ಯಾಂಡ್’ ವಿಭಾಗಗಳಲ್ಲಿ ವಸ್ತು ಪ್ರದರ್ಶನ ನಡೆಯಿತು.
ನೋಟ್, ಸ್ಟಾಂಪ್, ಪತ್ರಿಕೆ ಹಾಗೂ ನಾಣ್ಯ ಸಂಗ್ರಹಣೆಯಲ್ಲಿ ಅಪರೂಪದ ಸಂಗ್ರಹಣೆ ಮಾಡಿದ ಯಾಸಿರ್ ಕಲ್ಲಡ್ಕ, ಕೆ.ಎಸ್. ಬೀಡೀಸ್ ಇವರ ವಸ್ತು ಪ್ರದರ್ಶನ ವಿಶೇಷ ಆಕರ್ಷಣೆಯಾಗಿತ್ತು. ತೀರ್ಪುಗಾರರಾಗಿ ಶಿಕ್ಷಕರಾದ ಮುಹಮ್ಮದ್ ತುಂಬೆ, ಸುಜೀರ್ ಪ್ರೌಢ ಶಾಲೆ, ಇಬ್ರಾಹೀಂ ಖಲೀಲ್, ಕೆ.ಜಿ.ಎನ್ ಮಿತ್ತೂರು ಹಾಗೂ ಟ್ಯಾಲೆಂಟ್ ಸಲಹೆಗಾರ ರಫೀಕ್ ಮಾಸ್ಟರ್ ಸಹಕರಿಸಿದರು.
ವಸ್ತು ಪ್ರದರ್ಶನವನ್ನು ವೀಕ್ಷಿಸಲು ಸ್ಥಳೀಯ ಅನೇಕ ಶಾಲೆಗಳ ವಿದ್ಯಾರ್ಥಿಗಳು ಆಗಮಿಸಿದ್ದರು.