ಅಕ್ರಮ ಮರಳು ಲೋಡ್ ಮಾಡುತ್ತಿದ್ದ ಟಿಪ್ಪರ್ ಲಾರಿಗಳ ವಶ; ಇಬ್ಬರ ಬಂಧನ

ಮಂಗಳೂರು, ಜ.1: ಕುದುರೆಮುಖ ಜಂಕ್ಷನ್ ತಣ್ಣಿರುಬಾವಿ ಮುಖ್ಯರಸ್ತೆಯ ಫಲ್ಗುಣಿ ನದಿ ತೀರದಲ್ಲಿ ಅಕ್ರಮವಾಗಿ ಯಾವುದೇ ಪರವಾನಿಗೆ ಇಲ್ಲದೇ ಮರಳನ್ನು ಲಾರಿಗೆ ಲೋಡ್ ಮಾಡುತ್ತಿದ್ದ ವೇಳೆ ದಾಳಿ ನಡೆಸಿದ ಪೊಲೀಸರು ಮೂರು ಟಿಪ್ಪರ್ ಲಾರಿಗಳನ್ನು ವಶಪಡಿಸಿಕೊಂಡು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಉಡುಪಿ ತಾಲೂಕಿನ ಕೆಮ್ತೂರು ನಿವಾಸಿ, ಲಾರಿ ಚಾಲಕ (32), ಕಾಟಿಪಳ್ಳ 3ನೇ ಬ್ಲಾಕ್ ನಿವಾಸಿ ಗಣೇಶ್ ಜಿ. ಶೆಟ್ಟಿಗಾರ್ (26) ಬಂಧಿತ ಆರೋಪಿಗಳು. ಗಣೇಶ್ ಮರಳು ಧಕ್ಕೆಯ ವ್ಯವಹಾರ ನೋಡಿಕೊಳ್ಳುತ್ತಿದ್ದ. ಮತ್ತೋರ್ವ ಚಾಲಕ ಪರಾರಿಯಾಗಿದ್ದಾನೆ.
ಜ.1ರಂದು ಮಂಗಳೂರು ಉತ್ತರ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಆರ್.ಶ್ರೀನಿವಾಸ್ ಗೌಡ ಹೊಸ ವರ್ಷದ ನಿಮಿತ್ತ ವಿಶೇಷ ರಾತ್ರಿ ರೌಂಡ್ಸ್ ಕರ್ತವ್ಯದಲ್ಲಿರುವ ಸಂದರ್ಭ ಮರಳನ್ನು ಲಾರಿಗೆ ಲೋಡ್ ಮಾಡುತ್ತಿರುವುದನ್ನು ಕಂಡು ಬೆನ್ನಟ್ಟಿ ದಾಳಿ ನಡೆಸಿದರು. ಆರೋಪಿಗಳನ್ನು ವಿಚಾರಣೆ ಗೊಳಪಡಿಸಿದಾಗ, ರಾಮಚಂದ್ರ ಎಂಬವರ ಮರಳು ಧಕ್ಕೆಯಿಂದ ಲೋಡ್ ಮಾಡುತ್ತಿರುವುದು ಬೆಳಕಿಗೆ ಬಂದಿದೆ.
ಪತ್ತೆ ಕಾರ್ಯದಲ್ಲಿ ಮಂಗಳೂರು ಉತ್ತರ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಆರ್.ಶ್ರೀನಿವಾಸ್ ಗೌಡ ಹಾಗೂ ಪಣಂಬೂರು ಠಾಣಾ ಪೊಲೀಸ್ ಇನ್‌ಸ್ಪೆಕಟ್ರ್ ರಫೀಕ್ ಕೆ.ಎಂ., ಪಿಎಸ್ಸೈ ಉಮೇಶ್‌ಕುಮಾರ್ ಎಂ.ಎನ್. ಹಾಗೂ ಪಣಂಬೂರು ಠಾಣಾ ಸಿಬ್ಬಂದಿ ಶ್ರಮಿಸಿದ್ದಾರೆ.