ಕೆನರಾ ಗೂಡ್ಸ್ ಶೆಡ್ ಲೋಡಿಂಗ್ ಅನ್‌ಲೋಡಿಂಗ್ ಕಾರ್ಮಿಕರ ಸಂಘದ ಸಭೆ

ಮಂಗಳೂರು, ಜ.1: ಕೆನರಾ ಗೂಡ್ಸ್ ಶೆಡ್ ಲೋಡಿಂಗ್ ಅನ್‌ಲೋಡಿಂಗ್ ಕಾರ್ಮಿಕರ ಸಂಘದ ವಾರ್ಷಿಕ ಸಭೆ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆ ಮಂಗಳವಾರ ಜರಗಿತು.
ಜಿಲ್ಲಾ ಇಂಟಕ್ ಅಧ್ಯಕ್ಷ ಮನೋಹರ್ ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಾರ್ಮಿಕರಿಗೆ ಹೆಚ್ಚಿನ ಸೌಲಭ್ಯ ಕಲ್ಪಿಸಲು ಇಂಟಕ್ ಬದ್ಧವಾಗಿದೆ ಎಂದರು.
ಕೇಂದ್ರದ ಮೋದಿ ಸರಕಾರ ಕಾರ್ಮಿಕ ವಿರೋಧಿ ನಿಲುವು ತಾಳಿ ಯಾವುದೇ ಉದ್ಯೋಗ ಲಭಿಸುತ್ತಿಲ್ಲ. ದಿನ ಬಳಕೆಯ ದರ ಏರುತ್ತಿದೆ. ಕಾರ್ಮಿಕರಿಗೆ ಜೀವನ ನಡೆಸಲು ಅಸಾಧ್ಯವಾಗಿದೆ. ಈ ನಿಟ್ಟಿನಲ್ಲಿ ಕಾರ್ಮಿಕ ಸಂಘಟನೆಗಳು ಜಂಟಿಯಾಗಿ ಜ.8 ಹಾಗೂ 9ರಂದು ದ.ಕ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲಾಗುವುದು. ಕಾರ್ಮಿಕರು ಕೆಲಸ ನಿಲ್ಲಿಸಿ ಕೇಂದ್ರ ಸರಕಾರಕ್ಕೆ ಬಿಸಿ ಮುಟ್ಟಿಸಬೇಕಾಗಿದೆ ಎಂದರು.
ಉಪಾಧ್ಯಕ್ಷ ಬೊಂಡಾಲ ಚಿತ್ತರಂಜನ್ ಶೆಟ್ಟಿಮಾತನಾಡಿ, ಕಾರ್ಮಿಕರ ಜೀವನ ಬಂಗಾರವಾಗಲಿ.ಉತ್ತಮ ಉದ್ಯೋಗ ಲಭಿಸಲಿ ಎಂದು ಹಾರೈಸಿದರು. ಕಾರ್ಮಿಕ ಹಿತಕ್ಕಾಗಿ ನಡೆಯುವ ಪ್ರತಿಭಟನೆಯಲ್ಲಿ ಎಲ್ಲರೂ ಭಾಗವಹಿಸಬೇಕು ಎಂದರು.
ಇದೇ ಸಂದರ್ಭ ಕಾರ್ಮಿಕ ಸಂಘದ ಪುನರ್‌ರಚನೆ, ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಇಂಟಕ್ ಜಿಲ್ಲಾಧ್ಯಕ್ಷ ಮನೋಹರ್ ಶೆಟ್ಟಿ ಅಧ್ಯಕ್ಷರಾಗಿ, ಚಿತ್ತರಂಜನ್ ಶೆಟ್ಟಿ ಬೊಂಡಾಲ ಉಪಾಧ್ಯಕ್ಷರಾಗಿ ಆಯ್ಕೆಯಾದರು. ಪ್ರಧಾನ ಕಾರ್ಯದರ್ಶಿಯಾಗಿ ಪೈಗಂಬರ್, ಜತೆ ಕಾರ್ಯದರ್ಶಿಯಾಗಿ ಪ್ರವೀಣ್, ಕೋಶಾಧಿಕಾರಿಯಾಗಿ ಪಡೆಯಪ್ಪ, ಸಮಿತಿ ಸದಸ್ಯರಾಗಿ ಪರಮೇಶ, ನಾಗರಾಜ, ಹನುಮಂತ, ದೇವಪ್ಪ ಆಯ್ಕೆಯಾದರು. ಸಭೆಯಲ್ಲಿ ಕಾರ್ಮಿಕರ ಕುಂದು ಕೊರತೆಗಳ ಬಗ್ಗೆ ಚರ್ಚಿಸಿ ಪರಿಹಾರಕ್ಕೆ ಸೂಚಿಸಲಾಯಿತು.