ವಿದ್ಯುತ್ ಕಂಬಕ್ಕೆ ಢಿಕ್ಕಿ ಕಾರು ಢಿಕ್ಕಿ: ಪವಾಡಸದೃಶ ಪಾರಾದ ಪ್ರಯಾಣಿಕರು
ಮಂಗಳೂರು, ಜ.1: ಮಂಗಳೂರಿನಿಂದ ಉಡುಪಿ ಕಡೆಗೆ ತೆರಳುತ್ತಿದ್ದ ಕಾರೊಂದು ಟೈರ್ ಪಂಕ್ಚರ್ ಆಗಿ ನಿಯಂತ್ರಣ ತಪ್ಪಿ, ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದಿದ್ದು, ಡಿವೈಡರ್, ರಾಷ್ಟ್ರೀಯ ಹೆದ್ದಾರಿ ಹಾಗೂ ಸರ್ವಿಸ್ ರಸ್ತೆ ದಾಟಿ ನಿಂತ ಘಟನೆ ಸುರತ್ಕಲ್ ತಡಂಬೈಲ್ ಸಮೀಪದ ಮಂಗಳವಾರ ನಡೆದಿದೆ.
ಕಾಪು ನಿವಾಸಿ ಇಸ್ಮಾಯೀಲ್ ಅಬ್ದುಲ್ ರೆಹಮಾನ್ (62) ಹಾಗೂ ಮಹೇಶ್ ಗಾಯಗೊಂಡವರು. ಹೊಸವರ್ಷ ಮುಂಜಾನೆ ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಹಮೀದ್ ಎಂಬವರು ಚಲಾಯಿಸುತ್ತಿದ್ದ ಕಾರು ಸುರತ್ಕಲ್ ತಡಂಬೈಲ್ ಬಳಿ ಬರುತ್ತಿದ್ದಂತೆ ಟೈರ್ ಪಂಕ್ಚರ್ ಆಗಿದೆ. ಪರಿಣಾಮ ನಿಯಂತ್ರಣ ತಪ್ಪಿದ ಕಾರು ರಸ್ತೆಯ ಬದಿಯಲ್ಲಿದ್ದ ವಿದ್ಯುತ್ ಕಂಬಕ್ಕೆ ಢಿಕ್ಕಿಯಾಗಿದೆ. ಢಿಕ್ಕಿಯ ರಭಸಕ್ಕೆ ಬಲ ಬದಿಯ ರಾಷ್ಟ್ರೀಯ ಹೆದ್ದಾರಿ, ಡಿವೈಡರ್ ಹಾಗೂ ಸರ್ವಿಸ್ ರಸ್ತೆ ದಾಟಿ ಬಂದು ಕಾರು ನಿಂತಿದೆ.
ಅಪಘಾತದ ಪರಿಣಾಮ ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಕಾರು ಚಲಾಯಿಸುತ್ತಿದ್ದ ಹಮೀದ್ ಅವರಿಗೆ ಯಾವುದೇ ಗಾಯಗಳಿಲ್ಲದೆ ಅದೃಷ್ಟಾವಶಾತ್ ಪಾರಾಗಿದ್ದಾರೆ. ಕಾರಿನಲ್ಲಿದ್ದ ಸಹ ಪ್ರಯಾಣಿಕರಾದ ಇಸ್ಮಾಯೀಲ್ ಮತ್ತು ಮಹೇಶ್ ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದು, ಚಿಕಿತ್ಸೆಗಾಗಿ ಸ್ಥಳೀಯ ಖಾಸಗಿ ಆಸ್ಪತೆಗೆ ದಾಖಲಾಗಿದ್ದಾರೆ.
ಈ ಕುರಿತು ಮಂಗಳೂರು ಉತ್ತರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.