ಪ್ರವಾದಿ ನಿಂದನೆ: ನಿರೂಪಕನ ವಿರುದ್ಧ ಕ್ರಮಕ್ಕೆ ಯುವ ಕಾಂಗ್ರೆಸ್ ಆಗ್ರಹ

ಮಂಗಳೂರು, ಜ.1: ಖಾಸಗಿ ಸುದ್ದಿವಾಹಿನಿ ನಿರೂಪಕ ಅಜಿತ್ ಹನುಮಕ್ಕನವರ್ ಪ್ರವಾದಿ ಮುಹಮ್ಮದ್ ಅವರನ್ನು ನಿಂದಿಸಿದ್ದು, ನಿರೂಪಕನ ವಿರುದ್ಧ ಕಾನೂನು ಕ್ರಮಕ್ಕೆ ದ.ಕ. ಜಿಲ್ಲಾ ಯುವ ಕಾಂಗ್ರೆಸ್ ಆಗ್ರಹಿಸಿ ಡಿಸಿಪಿ ಹನುಮಂತರಾಯ ಅವರಿಗೆ ಮನವಿ ಸಲ್ಲಿಸಿತು.
ಇತ್ತೀಚೆಗೆ ಪ್ರೊ.ಭಗವಾನ್ ಎಂಬವರು ಹಿಂದೂ ಸಮುದಾಯದ ಆದರ್ಶ ಪುರುಷರ ಬಗ್ಗೆ ಅವಹೇಳನಕಾರಿ ಪ್ರಸ್ತಾಪಿಸಿದ್ದಾರೆಂದು ಆರೋಪಿಸಿ ಖಾಸಗಿ ಸುದ್ದಿವಾಹಿನಿ ನಿರೂಪಕ ಅಜಿತ್ ಹನುಮಕ್ಕನವರ್ ಚರ್ಚಾ ಕಾರ್ಯಕ್ರಮದಲ್ಲಿ ಪ್ರವಾದಿ ಮುಹಮ್ಮದ್ ಅವರ ಬಗ್ಗೆ ಕೀಳುಮಟ್ಟದಲ್ಲಿ ಶಬ್ದಗಳನ್ನು ಪ್ರಸ್ತಾವಿಸಿ ತನ್ನ ವಿಕೃತಿಯನ್ನು ಮೆರೆದಿದ್ದಾರೆ ಎಂದು ದೂರಿದರು.
ನಿರೂಪಕ ಅಜಿತ್ ಹನುಮಕ್ಕನವರ್ ಉದ್ದೇಶಪೂರ್ವಕವಾಗಿ ಇಸ್ಲಾಮ್‌ನ್ನು ಹಾಗೂ ಮುಸ್ಲಿಮರ ನಂಬಿಕೆಗಳನ್ನು ಅವಮಾನಗೊಳಿಸಿ ಮುಸ್ಲಿಮರ ಭಾವನೆಗಳಿಗೆ ಧಕ್ಕೆಯನ್ನುಂಟು ಮಾಡಿದ್ದಾರೆ. ಭಿನ್ನ ಧರ್ಮಗಳ ನಡುವೆ ದ್ವೇಷ ಹುಟ್ಟಿಸುವ ಉದ್ದೇಶದಿಂದ ಪ್ರವಾದಿ ಮುಹಮ್ಮದ್ ರ ವಿರುದ್ಧ ಕೀಳುಮಟ್ಟದ ಹೇಳಿಕೆ ನೀಡಿದ್ದಾರೆ. ನಿರೂಪಕನ ವಿರುದ್ಧ ಸೂಕ್ರ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಆಗ್ರಹಿಸಿದರು.
ಮನವಿ ಸಲ್ಲಿಸುವ ನಿಯೋಗದಲ್ಲಿ ದ.ಕ. ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ, ಮುಖಂಡರಾದ ಸುಹೈಲ್ ಕಂದಕ್, ಅಬ್ದುಲ್ ಲತೀಫ್, ನಾಸೀರ್ ಸಾಮನಿಗೆ, ಬಲಾಲ್ ಮೊದಿನ್, ಎಸ್.ಕೆ. ಸೌಹನಾ, ಫಯಾಝ್ ಬೆಂಗ್ರೆ, ರಮಾನಂದ ಪೂಜಾರಿ, ಲಾರೆನ್ಸ್ ಡಿಸೋಜ, ಅನ್ಸಾರುದ್ದೀನ್ ಸಾಲ್ಮರ, ಟಿ.ಕೆ. ತೌಸೀಫ್, ಮನ್ಸೂರ್ ಕುದ್ರೋಳಿ ಮತ್ತಿತರರು ಉಪಸ್ಥಿತರಿದ್ದರು.