ತಲಪಾಡಿ ಟೋಲ್‍ಗೇಟ್ ಬಳಿ ಟ್ಯಾಂಕರ್ ನಿಲುಗಡೆ ಖಂಡಿಸಿ ಪ್ರತಿಭಟನೆ

ಉಳ್ಳಾಲ, ಜ. 1: ತಲಪಾಡಿ ಟೋಲ್‍ಗೇಟ್ ಪ್ರದೇಶದಲ್ಲಿ ಗ್ಯಾಸ್ ಟ್ಯಾಂಕರ್ ನಿಲುಗಡೆ ಹಾಗೂ ಚಾಲಕರು ಟ್ಯಾಂಕರ್ ಕೆಳಗಡೆ ಅಡುಗೆ ಮಾಡುವ ಕ್ರಮವನ್ನು ಖಂಡಿಸಿ ಗಡಿನಾಡು ರಕ್ಷಣಾ ವೇದಿಕೆ ಆಶ್ರಯದಲ್ಲಿ ತಲಪಾಡಿ ಟೋಲ್‍ಗೇಟ್ ಸಮೀಪ ಮಂಗಳವಾರ ಸಾಂಕೇತಿಕ ಪ್ರತಿಭಟನೆ ನಡೆಯಿತು.
ಗಡಿನಾಡು ರಕ್ಷಣಾ ವೇದಿಕೆ ಸಿದ್ದಿಕ್ ತಲಪಾಡಿ ಮಾತನಾಡಿ, ಕೇರಳ ಭಾಗದಲ್ಲಿ ಗ್ಯಾಸ್ ಟ್ಯಾಂಕರ್ ಸಂಚಾರಕ್ಕೆ ಅವಧಿ ನಿಗದಿ ಪಡಿಸಲಾಗಿದ್ದು ಅದರಿಂದಾಗಿ ಕೇರಳ ಕಡೆಗೆ ಸಂಚರಿಸುವ ಗ್ಯಾಸ್ ಟ್ಯಾಂಕರ್‍ಗಳನ್ನು ತಲಪಾಡಿ ಟೋಲ್ ಗೇಟ್ ಆಸುಪಾಸಿನಲ್ಲಿ ನಿಲ್ಲಿಸಲಾಗುತ್ತಿದೆ. ಅದರ ಚಾಲಕರು ವಾಹನದ ಕೆಳಗಡೆ ಅಡುಗೆ ಮಾಡುವುದರಿಂದ ದೊಡ್ಡ ಮಟ್ಟದ ಅಪಾಯ ಕಾದಿದ್ದರೂ ಆ ಬಗ್ಗೆ ಅಧಿಕಾರಿಗಳಿಗೆ ಎಚ್ಚರಿಸಿದರೂ ಅದನ್ನು ತೆರವುಗೊಳಿಸುವ ನಿಟ್ಟಿನಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆರೋಪಿಸಿದರು.
ಕೇರಳದಲ್ಲಿ ನಡೆದ ಭೀಕರ ಅನಾಹುತದ ಬಳಿಕ ಗ್ಯಾಸ್ ಟ್ಯಾಂಕರ್ ಕುರಿತಾಗಿ ಅಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಅದರ ಪರಿಣಾಮ ತಲಪಾಡಿ ಯಲ್ಲಿ ಸರತಿ ಸಾಲಿನಲ್ಲಿ ಕಂಡುಬರುತ್ತಿದೆ. ಟ್ಯಾಂಕರ್‍ನಲ್ಲಿ ಗ್ಯಾಸ್ ಸ್ಟವ್ ಇಡಲೂ ಬಾರದು, ಪಕ್ಕದಲ್ಲಿ ಅಡುಗೆ ಮಾಡಲೂ ಬಾರದು.
ನಾಗರಿಕರ ಆಗ್ರಹವನ್ನು ಅಧಿಕಾರಿಗಳು ನಿರ್ಲಕ್ಷಿಸುವುದು ಸಲ್ಲದು. ಮಂಗಳೂರು ಭಾಗದಲ್ಲಿ ಸಂಚರಿಸುವ ವಾಹನಕ್ಕೆ ಯಾವುದೇ ನಿಯಮ ಇಲ್ಲವೇ ಅಥವಾ ಅದರ ಪಾಲನೆಯಾಗುತ್ತಿಲ್ಲವೇ? ಅನಾಹುತ ಬರುವುದಕ್ಕೆ ಮುನ್ನ ಎಚ್ಚೆತ್ತುಕೊಳ್ಳದಿದ್ದರೆ ಕಚೇರಿ ಒಳಗೆ ನುಗ್ಗಿ ಪ್ರತಿಭಟಿಸಲಿದ್ದೇವೆ. ಹಾಗೆಯೇ ಜಿಲ್ಲಾಡಳಿತ ಸ್ಪಂದಿಸದಿದ್ದರೆ ಉಗ್ರ ಹೋರಾಟ ನಡೆಸಲಿದ್ದೇವೆ ಎಂದು ಎಚ್ಚರಿಸಿದರು.
ಕರ್ನಾಟಕ ಗಡಿ ಪ್ರದೇಶದಲ್ಲಿ ಬೆಂಕಿಯೊಂದಿಗೆ ಸರಸವಾಡುವ ಕೆಲಸ ನಡೆಯುತ್ತಿದೆ. ಗ್ಯಾಸ್ ಟ್ಯಾಂಕರ್ ನಿಲ್ಲಿಸಿ ಅದರ ಕೆಳಗಡೆ ಗ್ಯಾಸ್ ಸ್ಟವ್ ಮೂಲಕ ಅಡುಗೆ ಮಾಡುತ್ತಾರೆ. ಅಂತಹ ಅಪಾಯಕಾರಿ ಕ್ರಮಗಳ ಬಗ್ಗೆ ಸಂಬಂಧಿಸಿದ ಇಲಾಖೆಗೆ ತಿಳಿಸಿದರೂ ಸ್ಪಂದಿಸುತ್ತಿಲ್ಲ, ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸಂಶುದ್ದಿನ್ ಉಚ್ಚಿಲ್ ಹೇಳಿದರು.
ತಲಪಾಡಿ ಹೆದ್ದಾರಿ ಉದ್ದಕ್ಕೂ ಸುಮಾರು 50ಕ್ಕೂ ಮಿಕ್ಕಿ ಬುಲೆಟ್ ಟ್ಯಾಂಕರ್ ನಿಲ್ಲಿಸಲಾಗಿದೆ. ಕೇರಳದಲ್ಲಿ ಅವರಿಗೆ ನಿಲ್ಲಲು ಬಿಡುತ್ತಿಲ್ಲ. ಇಲ್ಲಿನ ಟೋಲ್ ಗೇಟ್ ಹತ್ತಿರ ಠಿಕಾಣಿ ಹೂಡಿದ್ದಾರೆ. ಸಾವಿರಾರು ವಾಹನ ಸಂಚಾರ ನಡೆಸುತ್ತಿರುವುದಲ್ಲದೆ ಪ್ರಯಾಣಿಕರ ಬದುಕು ಅಪಾಯದಲ್ಲಿದೆ. ಹಾಗಾಗಿ ಇಲ್ಲಿಂದ ತೆರವುಗೊಳಿಸಲು ಇಲಾಖೆ ತಕ್ಷಣ ಮುಂದಾಗಬೇಕು, ತಪ್ಪಿದರೆ ಗಡಿನಾಡು ರಕ್ಷಣಾ ವೇದಿಕೆ ಉಗ್ರ ಹೋರಾಟ ನಡೆಸಲಿದ್ದೇವೆ ಎಂದು ಹೇಳಿದರು.
ಈ ಸಂದರ್ಭ ಟಿ. ಇಸ್ಮಾಯಿಲ್, ಐಸನ್ ತಲಪಾಡಿ, ಶಬೀರ್ ಅಬ್ಬಾಸ್ ತಲಪಾಡಿ, ಅಬೂಬಕ್ಕರ್, ಅಬೂಬಕ್ಕರ್ ತಲಪಾಡಿ, ಮುನೀರ್, ಗುಣಪಾಲ ಹಾಗೂ ಭಾಸ್ಕರ ಭಾಗವಹಿಸಿದ್ದರು.