ಮೂಡುಬಿದಿರೆ : ರಸ್ತೆಯಲ್ಲೇ ಕುಸಿದು ಬಿದ್ದು ಆಕ್ಟೀವಾ ಸವಾರ ಸಾವು
ಮೂಡುಬಿದಿರೆ, ಜ. 1 : ಯುವಕನೋರ್ವ ತನ್ನ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದಾಗಲೇ ತೀವ್ರ ಹೃದಯಾಘಾತಕ್ಕೆ ಒಳಗಾಗಿ ರಸ್ತೆಯಲ್ಲೇ ಕುಸಿದು ಬಿದ್ದು ಮೃತಪಟ್ಟ ದುರ್ಘಟನೆ ಮೂಡುಬಿದಿರೆ ಪೇಟೆಯ ಲಾವಂತ ಬೆಟ್ಟು ರಸ್ತೆಯಲ್ಲಿ ಮಂಗಳವಾರ ನಡೆದಿದೆ.
ಮಾರೂರಿನ ಪ್ರಸಾದ್ ಆಚಾರ್ಯ (32) ಮೃತರು ಎಂದು ಗುರುತಿಸಲಾಗಿದೆ.
ಪ್ರಸಾದ್ ತನ್ನ ಆಕ್ಟಿವಾದಲ್ಲಿ ಮೂಡುಬಿದಿರೆಗೆ ಬಂದವರು ಮರಳಿ ಮಾರೂರಿನ ತನ್ನ ಮನೆಗೆ ಹೊರಟಿದ್ದು ಪೇಟೆಯಲ್ಲಿ ಪ್ರಕಾಶ್ ಆಯಿಲ್ ಮಿಲ್ ಬಳಿ ಬಂದಾಗ ನಡು ರಸ್ತೆಯಲ್ಲೇ ವಾಹನ ನಿಲ್ಲಿಸಿ ಒಂದೆರಡು ನಿಮಿಷ ನಿಂತಿದ್ದಾರೆ. ಬಳಿಕ ಅಲ್ಲೇ ಕುಸಿದು ಬಿದ್ದಾಗ ಸ್ಥಳೀಯರು ಧಾವಿಸಿ ಉಪಚರಿಸಿ ಆಸ್ಪತ್ರೆಗೆ ದಾಖಲಿಸಿದರಾದರೂ ಪ್ರಸಾದ್ ಅದಾಗಲೇ ತೀವ್ರ ಹೃದಯಾಘಾತದಿಂದ ಮೃತಪಟ್ಟಿದ್ದರು ಎನ್ನಲಾಗಿದೆ.
ಮೂಡುಬಿದಿರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅವಿವಾಹಿತರಾಗಿದ್ದ ಪ್ರಸಾದ್ ಹಲವು ವರ್ಷಗಳಿಂದ ವಿದೇಶದಲ್ಲಿದ್ದು ಇತ್ತೀಚಿಗೆ ಬೆಂಗಳೂರಿನಲ್ಲಿ ಇಂಟೀರಿಯರ್ ಡೆಕೋರೇಶನ್ ಸಿಬ್ಬಂದಿಯಾಗಿದ್ದರು. ಊರಿಗೆ ಬಂದಿದ್ದ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದ್ದು ಮನೆಯ ಆಧಾರ ಸ್ಥಂಭವಾಗಿದ್ದ ಪ್ರಸಾದ್ ತಾಯಿ, ಹಾಗೂ ಏಳು ಮಂದಿ ಸಹೋದರಿಯರನ್ನು ಅಗಲಿದ್ದಾರೆ.